ಕೊಪ್ಪಳ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಪಟ್ಟಣಗಳು ನಿತ್ಯ ಬೆಳೆಯುತ್ತಿವೆ. ಜೊತೆಗೆ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಪಾದಚಾರಿ ಮಾರ್ಗವೆಂಬುದೇ ಮರೆಯಾಗಿದ್ದು ಜನ ರಸ್ತೆಯಲ್ಲಿ ಓಡಾಡುವಂತಾಗಿದೆ. ಇದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ಕುಷ್ಟಗಿಯಲ್ಲಿ ಜನರ ಸುರಕ್ಷಿತ ಓಡಾಟಕ್ಕೆ ಪುರಸಭೆ ಲಕ್ಷಾಂತರ ಹಣ ಖರ್ಚು ಮಾಡಿ ಕಚ್ಚಾದಾರಿಗೆ ಪೇವರ್ಸ್ ಅಳವಡಿಸಿ ಸುಂದರವಾಗಿ ಅಭಿವೃದ್ಧಿಪಡಿಸಿದೆ. ಆದರೆ, ಪಾದಚಾರಿ ದಾರಿಯನ್ನೆಲ್ಲ ಹಲವು ವ್ಯಾಪಾರಿಗಳು ಅತಿಕ್ರಮಿಸಿಕೊಂಡಿರುವುದರಿಂದ ಜನರಿಗೆ ಪ್ರಯೋಜನವಿಲ್ಲದಂತಾಗಿದೆ.
ಸರ್ಕಾರದ ಹಣ ಖರ್ಚು ಮಾಡಿದ್ದು ಜನರ ಅನುಕೂಲಕ್ಕೊ ಅಥವಾ ಪಟ್ಟಭದ್ರರ ಹಿತಾಸಕ್ತಿಗೊ? ಜನರ ತೆರಿಗೆ ಹಣವನ್ನು ಹೀಗೆ ಬೇಕಾಬಿಟ್ಟಿಯಾಗಿ ಖರ್ಚು ಮಾಡಿದ್ದರ ಉದ್ದೇಶವಾದರೂ ಏನು? ಪಟ್ಟಣದ ಜನರ ಈ ಪ್ರಶ್ನೆಗೆ ಪುರಸಭೆ ಬಳಿ ಉತ್ತರವಿಲ್ಲ. ಈ ವಿಷಯದಲ್ಲಿ ಪ್ರತಿಕ್ರಿಯಿಸುವುದಕ್ಕೂ ಪುರಸಭೆ ಅಧಿಕಾರಿಗಳು ತಡಕಾಡುತ್ತಿದ್ದಾರೆ.
ಕುಷ್ಟಗಿಯಲ್ಲಿ ಬಸವೇಶ್ವರ ವೃತ್ತದಿಂದ ಪುರಸಭೆವರೆಗಿನ ರಸ್ತೆಯ ಎಡ ಬಲಬದಿಯಲ್ಲಿ ಪಾದಚಾರಿ ರಸ್ತೆ ನಿರ್ಮಾಣಗೊಂಡಿದ್ದರೂ ಅವುಗಳ ಮೇಲೆ ಅನಧಿಕೃತ ವ್ಯಾಪಾರಿಗಳದ್ದೇ ದರ್ಬಾರು. ತರಕಾರಿ, ಹಣ್ಣು ಮಾರಾಟಕ್ಕೆ ಪ್ರತ್ಯೇಕ ಸ್ಥಳ ನಿಗದಿಪಡಿಸದ ಕಾರಣ ಪಾದಚಾರಿ ರಸ್ತೆಗಳೆಲ್ಲ ವ್ಯಾಪಾರಿಗಳ ಪಾಲಾಗಿವೆ ಎಂಬ ಆರೋಪ ಜನರದ್ದು.
ರಸ್ತೆ ಬದಿಯ ಸರ್ಕಾರಿ ಜಾಗವನ್ನು ಅತಿಕ್ರಮಿಸುವಲ್ಲಿ ಪಟ್ಟಣದ ಅನೇಕ ಜನ ನಿಸ್ಸೀಮರಾಗಿದ್ದಾರೆ. ಹೊಟ್ಟೆ ಉಪಜೀವನಕ್ಕೆ ವ್ಯಾಪಾರ ನಡೆಸುತ್ತಾರೆ ಎಂದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಇಲ್ಲಿ ಹಾಗಿಲ್ಲ ಅನೇಕ ಜನ ಮೊದಲು ಮಾಡುವ ಕೆಲಸವೆಂದರೆ ಪಾದಚಾರಿ ರಸ್ತೆ, ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಳ್ಳುವುದು ನಂತರ ಠೇವಣಿ ಸಹಿತ ದುಬಾರಿ ಮಾಸಿಕ ಬಾಡಿಗೆಗೆ ಅಮಾಯಕ ವ್ಯಾಪಾರಿಗಳಿಗೆ ನೀಡುವುದು ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ. ಜಾಗ ಸಾರ್ವಜನಿಕರದ್ದು ಬಾಡಿಗೆ ವಸೂಲಿ ಮಾಡುವವರು ಬಲಾಢ್ಯರು ಎನ್ನುವಂತಾಗಿದೆ ಎಂದು ಹೆಸರು ಬಹಿರಂಗಪಡಿಸದ ವ್ಯಾಪಾರಿಗಳು ‘ಪ್ರಜಾವಾಣಿ’ ಎದುರು ಅಸಮಾಧಾನ ಹೊರಹಾಕಿದರು.
ಕಾರ್ಗಿಲ್ ವೃತ್ತ, ಬಸ್‌ನಿಲ್ದಾಣದಿಂದ ಪಟ್ಟಣದ ಯಾವ ಮೂಲೆಗೆ ಹೋದರೂ ಪಾದಚಾರಿ ರಸ್ತೆ ಒತ್ತುವರಿಯಾಗಿ ಜನರು, ಮಕ್ಕಳು, ಮಹಿಳೆಯರು, ವೃದ್ಧರು ಅನುಭವಿಸುವ ಹಿಂಸೆ ಅಷ್ಟಿಷ್ಟಲ್ಲ. ದಟ್ಟಣೆಯಿಂದ ಕೂಡಿದ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ನಡೆಯಬೇಕು. ಅದೃಷ್ಟವಿದ್ದರೆ ಮನೆಗೆ ಮರಳಿ ಬರುತ್ತೇವೆ. ಜೆಸ್ಕಾಂ ಕಚೇರಿ, ನ್ಯಾಯಾಲಯ, ತಾಲ್ಲೂಕು ಪಂಚಾಯಿತಿ, ಸರ್ಕಾರಿ ಆಸ್ಪತ್ರೆ ಹೀಗೆ ಎಲ್ಲಿಯೂ ಪಾದಚಾರಿ ರಸ್ತೆ ಎಂಬುದೇ ಇಲ್ಲ. ಇನ್ನು ಸಂತೆ ಮೈದಾನಕ್ಕೆ ಹೊಂದಿಕೊಂಡಿರುವ ಪುರಸಭೆ ವಾಣಿಜ್ಯ ಮಳಿಗೆ ಮುಂದೆ ರಸ್ತೆಯಲ್ಲೇ ಕೋಳಿಮಾಂಸದ ಅಂಗಡಿಗಳು ತಲೆ ಎತ್ತಿವೆ. ನಾಯಿಗಳ ಹಿಂಡು ವಾಹನಗಳಿಂದ ಜನ ಬಚಾವಾಗಿ ಬಂದರೆ ಅದು ಪವಾಡವೋ ಸರಿ ಎಂದೆ ಜನರು ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ.
ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾದ ಗಂಗಾವತಿಯಲ್ಲಿ ಪಾದಚಾರಿ ಮಾರ್ಗದ ಕೊರತೆಯಿಂದಾಗಿ ಸಮಸ್ಯೆಯಾಗುತ್ತಿದೆ. ರಸ್ತೆ, ಪಾದಚಾರಿ ಮಾರ್ಗಗಳನ್ನು ಅಂಗಡಿಗಳ ಮಾಲೀಕರು ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ.
ಇಸ್ಲಾಂಪುರ, ಮಹಾವೀರ ವೃತ್ತ, ಗಾಂಧಿವೃತ್ತ, ದುರ್ಗಮ್ಮ ದೇವಸ್ಥಾನ, ಸರ್ಕಾರಿ ಉಪ ವಿಭಾಗ ಆಸ್ಪತ್ರೆ, ಎಸ್.ಬಿ.ಐ ಬ್ಯಾಂಕ್, ಸಾರಿಗೆ ಬಸ್ ನಿಲ್ದಾಣ ಒಳಗೆ, ಬಸ್ ನಿಲ್ದಾಣದ ಎದುರು, ಲತಿಫೀಯಾ ವೃತ್ತದ ಬಳಿನ ಗ್ಯಾರೇಜ್ ಬಳಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಕೆಲವಡೆ ಅಂಗಡಿ ಮಾಲೀಕರು ಪಾದಚಾರಿ ಮಾರ್ಗಗಳನ್ನ ಒತ್ತುವರಿ ಮಾಡಿಕೊಂಡಿದ್ದರಿಂದ ಜನ ರಸ್ತೆ ಬಳಸಿಕೊಳ್ಳಬೇಕಾಗಿದೆ.
ಕಾರಟಗಿಯಲ್ಲಿ ಹಳೇ ಬಸ್ ನಿಲ್ದಾಣ, ಕನಕದಾಸ ವೃತ್ತದಲ್ಲಿ ಬಸ್‌ಗಳು ನಿಲುಗಡೆಯಾಗುತ್ತವೆ. ಪ್ರಯಾಣಕ್ಕೆ ಹೊರಟವರಿಗೆ, ಈ ಮಾರ್ಗವಾಗಿ ಸಂಚರಿಸುವವರಿಗೆ ಪಾದಚಾರಿ ಮಾರ್ಗ ಏನೆಂಬುದರ ಮಾಹಿತಿಯೂ ಇಲ್ಲದಂತಾಗಿದೆ. ರಾಜ್ಯ ಹೆದ್ದಾರಿಯುದ್ದಕ್ಕೂ ವ್ಯಾಪಾರಿ ಮಳಿಗೆಗಳು, ಸರ್ಕಾರಿ ಜಾಗೆಯಲ್ಲಿಯೇ ವ್ಯಾಪಾರಿ ಶೆಡ್‌ಗಳು ಇರುವುದರಿಂದ ಜನರಿಗಂತೂ ಸುರಕ್ಷತೆ ಇಲ್ಲದಂತಾಗಿದೆ.
ಕುಕನೂರಿನಲ್ಲಿಯೇ ಇದೇ ಪರಿಸ್ಥಿತಿಯಿದೆ. ಬಸ್ ನಿಲ್ದಾಣ ಎದುರುಗಡೆ ಹಾಗೂ ವೀರಭದ್ರಪ್ಪ ವೃತ್ತದಲ್ಲಿ ಬೈಕ್ ಸವಾರರು ವಾಹನಗಳನ್ನು ನಿಲ್ಲಿಸುತ್ತಾರೆ.
ಯಲಬುರ್ಗಾ ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ಪಾದಚಾರಿಗಳ ರಸ್ತೆಯು ವಿವಿಧ ವಾಹನಗಳ ನಿಲ್ದಾಣವಾಗಿದೆ. ಬಹುತೇಕ ಅಂಗಡಿಗಳ ಮುಂದೆ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿದೆ. ನಿಂತಿರುವ ವಾಹನಗಳ ನಡುವೆ ಉಳಿದ ಸಂದಿಯನ್ನು ಹುಡುಕಿಕೊಂಡು ಮುಂದಕ್ಕೆ ಸಾಗಬೇಕಾದ ಪರಿಸ್ಥಿತಿಯಿದೆ.
ಕೆಲವೊಂದು ಕಡೆ ರಸ್ತೆಗೆ ಹೊಂದಿಕೊಂಡ ತರಕಾರಿ, ಹಣ್ಣಿನ ಅಂಗಡಿಗಳಿದ್ದು ವ್ಯಾಪಾರಕ್ಕೆ ಬರುವ ಗ್ರಾಹಕರು ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿಯೇ ವ್ಯಾಪಾರಕ್ಕೆ ಮುಂದಾಗುವುದು ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದೆ.
ಕನ್ನಡ ಕ್ರಿಯಾಸಮಿತಿ ವೃತ್ತದಿಂದ ಬಸ್ ನಿಲ್ದಾಣದವರೆಗೆ ಹಾಗೂ ಕನಕದಾಸ ವೃತ್ತದಿಂದ ಕುದ್ರಿಕೊಟಗಿ ರಸ್ತೆ ಮತ್ತು ಬಂಡಿ ರಸ್ತೆಯ ಅರ್ಧಭಾಗದವರೆಗೂ ಟ್ರ್ಯಾಕ್ಸ್, ಟಂಟಂ ಹಾಗೂ ಇನ್ನಿತರ ವಾಹನಗಳನ್ನು ನಿಲ್ಲಿಸುತ್ತಾರೆ. ಬೃಹತ್ ವಾಹನ ಸಂಚಾರದ ಪ್ರಮುಖ ರಸ್ತೆಯ ಮೇಲೆಯೇ ಸಾರ್ವಜನಿಕರು ಭಯದೊಂದಿಗೆ ತಿರುಗಾಡುವಂತಾಗಿದೆ. ಬಯಲು ರಂಗಮಂದಿರದಿಂದ ಕಿತ್ತೂರು ಚನ್ನಮ್ಮ ವೃತ್ತದ ವರೆಗೆ ಎರಡು ಬದಿಯಲ್ಲಿಯೂ ವಾಹನಗಳು ರಸ್ತೆಯ ಮೇಲೆಯೇ ನಿಂತಿರುತ್ತವೆ. ಪೊಲೀಸ್ ಠಾಣೆಯ ಮುಂದಿನ ರಸ್ತೆ ಜೆಸಿಬಿ ಯಂತ್ರಗಳ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ.
ತಾವರಗೇರಾ ಪಟ್ಟಣದ ವಿವಿಧ ರಸ್ತೆ ಪಕ್ಕದ ಪಾದಚಾರಿ ಸ್ಥಳವನ್ನು ಅಕ್ರಮ ಮಾಡಿಕೊಂಡಿದ್ದು, ಪ್ರತಿ ದಿನ ಮತ್ತು ತಿಂಗಳ ಲೆಕ್ಕದಲ್ಲಿ ಬಾಡಿಗೆ ನೀಡಿ, ಸಣ್ಣ ಪುಟ್ಟ ವ್ಯಾಪಾರಸ್ಥರಿಂದ ಬಾಡಿಗೆ ವಸೂಲಿ ದಂಧೆ ಜೋರಾಗಿ ನಡೆದಿದೆ.
‘ಮುಖ್ಯರಸ್ತೆ ಹಾಗೂ ಅಕ್ಕಪಕ್ಕದ ಪಾದಚಾರಿ ರಸ್ತೆಯಲ್ಲಿ ಮಾಲೀಕರು ಬಾಡಿಗೆ ಪಡೆಯುವ ದೂರು ಬಂದಿಲ್ಲ. ದೂರು ನೀಡಿದರೆ ಕ್ರಮ ವಹಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಬೀಸಾಬ್ ಖುದನ್ ಹೇಳಿದರು.
ಪಾದಚಾರಿ ಮಾರ್ಗವೆಂದರೆ?
ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಕೇಂದ್ರಿಯ ಬಸ್ ನಿಲ್ದಾಣದಿಂದ ಅಶೋಕ ಸರ್ಕಲ್ ಹೋಗುವ ಮಾರ್ಗದಲ್ಲಿ ಪಾದಚಾರಿ ಮಾರ್ಗವನ್ನು ಬಹುತೇಕ ಒತ್ತುವರಿ ಮಾಡಲಾಗಿದೆ. ಪಾದಚಾರಿ ರಸ್ತೆಯಲ್ಲಿಯೇ ಹೋಟೆಲ್‌ಗಳು ಹಾಗೂ ಅಂಗಡಿಗಳು ತಲೆ ಎತ್ತಿದ್ದು ‘ಪಾದಚಾರಿ ಮಾರ್ಗ’ ಎಂದರೇನು? ಎನ್ನುವಂತೆ ಪ್ರಶ್ನೆ ಮಾಡುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಇಲ್ಲಿನ ಜನ. ಇನ್ನು ಜವಾಹರ ರಸ್ತೆಯಲ್ಲಿಯೂ ಇದೇ ಪರಿಸ್ಥಿತಿ. ಕೊಪ್ಪಳದಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ ಎಂದು ಇಲ್ಲಿನ ನಗರಸಭೆ ಹಲವು ಸದಸ್ಯರು ಸಾಮಾನ್ಯ ಸಭೆಯಲ್ಲಿಯೇ ಧ್ವನಿ ಎತ್ತಿದ್ದರು. ಆದರೆ ತೆರವು ಮಾಡಿ ಜನರ ಸುಗಮ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಕೆಲಸ ಮಾತ್ರ ಆಗಿಲ್ಲ. ಗಂಜ್ ಸರ್ಕಲ್ ಬಳಿ ಅಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಎನ್ನುವ ಫಲಕ ಹಾಕಿದ್ದರೂ ಅದರೆ ಮುಂದೆಯೇ ನಿತ್ಯ ವ್ಯಾಪಾರ ನಡೆಯುತ್ತದೆ.
ಯಾರು ಏನಂದರು?
ನಮ್ಮಲ್ಲಿ ಸಿಬ್ಬಂದಿ ಕೊರತೆ ಹಾಗೂ ಒತ್ತಡದ ಕೆಲಸದಿಂದ ದಿನನಿತ್ಯ ನಿಗಾ ವಹಿಸಲು ಆಗಿಲ್ಲ. ಇದನ್ನೇ ಕೆಲವರು ಅವಕಾಶವೆಂದು ಭಾವಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ ಪಾದಚಾರಿ ಮಾರ್ಗ ತೆರವು ಮಾಡಲಾಗುವುದು - ಸಿದ್ರಾಮಯ್ಯ ಬಿ. ಎಂ. ಕಾರಟಗಿ ಪೊಲೀಸ್ ಇನ್‌ಸ್ಪೆಕ್ಟರ್
ಯಲಬುರ್ಗಾದಲ್ಲಿ ಕೆಲಸಕ್ಕಾಗಿ ಬಂದು ಹೋಗುವ ಜನಸಾಮಾನ್ಯರಿಗೆ ಯಾವುದೇ ತೊಂದರೆಯಿಲ್ಲದೆ ನಿರಾತಂಕವಾಗಿ ತಿರುಗಾಡಲು ಅವಕಾಶ ಮಾಡಿಕೊಡಬೇಕು. ಈ ಕುರಿತು ಅಧಿಕಾರಿಗಳು ಕ್ರಮ ವಹಿಸಬೇಕು - ಶರಣಪ್ಪ ಪಾಟೀಲ ಜನ ಕಲ್ಯಾಣ ವೇದಿಕೆಯ ಅಧ್ಯಕ್ಷ ಯಲಬುರ್ಗಾ
ಪಾದಚಾರಿ ರಸ್ತೆಯ ಮೇಲೆ ಅಂಗಡಿ ಇಡುವುದಕ್ಕೆ ಅವಕಾಶವಿಲ್ಲ ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು - ಧರಣೇಂದ್ರ ಕುಮಾರ ಪುರಸಭೆ ಮುಖ್ಯಾಧಿಕಾರಿ ಕುಷ್ಟಗಿ
ಪೂರಕ ಮಾಹಿತಿ: ಕೆ. ಮಲ್ಲಿಕಾರ್ಜುನ, ನಾರಾಯಣರಾವ ಕುಲಕರ್ಣಿ, ಉಮಾಶಂಕರ ಹಿರೇಮಠ, ವಿಜಯ ಎನ್., ಮಂಜುನಾಥ ಎಸ್. ಅಂಗಡಿ, ಶರಣಬಸವ ಕೆ. ನವಲಹಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.