ADVERTISEMENT

ದುರಸ್ತಿ ಕಾಣದ ಸಂಗನಾಳ-ಹಾಳಕೇರಿ ರಸ್ತೆ

ಕಿತ್ತುಹೋದ ನೆಲಸೇತುವೆ; ಗ್ರಾಮಸ್ಥರಿಗೆ ತಪ್ಪದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 6:38 IST
Last Updated 7 ಏಪ್ರಿಲ್ 2024, 6:38 IST
ಯಲಬುರ್ಗಾ ತಾಲ್ಲೂಕು ಸಂಗನಾಳ ಗ್ರಾಮದ ಹೊರವಲಯದ ಹಾಲಕೇರಿ ಸಂಪರ್ಕಿಸುವ ರಸ್ತೆಯಲ್ಲಿನ ಸೇತುವೆ ದುಸ್ಥಿತಿ
ಯಲಬುರ್ಗಾ ತಾಲ್ಲೂಕು ಸಂಗನಾಳ ಗ್ರಾಮದ ಹೊರವಲಯದ ಹಾಲಕೇರಿ ಸಂಪರ್ಕಿಸುವ ರಸ್ತೆಯಲ್ಲಿನ ಸೇತುವೆ ದುಸ್ಥಿತಿ   

ಯಲಬುರ್ಗಾ: ‘ನಮ್ಮ ಹೊಲ–ನಮ್ಮ ದಾರಿ’ ಯೋಜನೆಯಡಿ ನಿರ್ಮಿಸಿದ ತಾಲ್ಲೂಕಿನ ಸಂಗನಾಳ - ಹಾಳಕೇರಿ ರಸ್ತೆಯು ಸೂಕ್ತ ನಿರ್ವಹಣೆಯಿಲ್ಲದೇ ಬಹುತೇಕ ಕಡೆ ಹಾಳಾಗಿದ್ದು, ವಾಹನ ಸವಾರರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಮೂರ್ನಾಲ್ಕು ವರ್ಷಗಳ ಹಿಂದೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ರಾಜ್ಯ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ಆದರೆ ನಿರ್ಮಾಣಗೊಂಡ ವರ್ಷದೊಳಗೆ ಡಾಂಬರ್‌ ಕಿತ್ತುಹೋಗಿದೆ. ರಸ್ತೆಯ ಅಲ್ಲಲ್ಲಿ ಹಳ್ಳಗಳಿಗೆ ನಿರ್ಮಿಸಿರುವ ನೆಲಮಟ್ಟದ ಸೇತುವೆಗಳು ಸಂಪೂರ್ಣ ಹಾಳಾಗಿವೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಉಂಟಾಗಿದ್ದ ನೆರೆ ಹಾವಳಿಗೆ ತೀವ್ರ ಹದಗೆಟ್ಟಿದ್ದರೂ ಈವರೆಗೂ ದುರಸ್ತಿಯಾಗಿಲ್ಲ.

ಸುಮಾರು 8-10 ಕಿ.ಮೀ ಉದ್ದದ ಈ ರಸ್ತೆಯು ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಪ್ರಧಾನಮಂತ್ರಿ ರೋಜಗಾರ ಯೋಜನೆ ಅಡಿಯಲ್ಲಿ ಸುಮಾರು ₹ 7.46 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ಸರ್ಕಾರಿ ವಾಹನಗಳ ಸಂಚಾರಕ್ಕಿಂತ ಖಾಸಗಿ ವಾಹನಗಳಾದ ಟ್ರ್ಯಾಕ್ಟರ್, ಟಂಟಂ, ಮಿನಿಲಾರಿ, ಕಾರು ಮೊದಲಾದ ವಾಹನಗಳು ಸಂಚರಿಸುತ್ತಿವೆ. ಆದರೆ ಬೃಹತ್‌ ಗಾತ್ರದ ವಿದ್ಯುತ್‌ ಕಂಬಗಳನ್ನು ಸಾಗಿಸುವ ಇಲ್ಲಿನ ಪವನ ವಿದ್ಯುತ್ ಉತ್ಪಾದನಾ ಕಂಪನಿಯ ಭಾರಿ ವಾಹನಗಳು ಈ ರಸ್ತೆಯಲ್ಲಿ ಸಂಚಾರ ನಡೆಸಿದ್ದರಿಂದ ನೆಲ ಸೇತುವೆ ಹಾಗೂ ರಸ್ತೆ ಹಾಳಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ADVERTISEMENT

‘ಸಂಗನಾಳ, ಬಂಡಿಹಾಳ, ಕರಮುಡಿ, ಹಾಳಕೇರಿ ಗ್ರಾಮಗಳ ರೈತರು ತಮ್ಮ ಜಮೀನಿಗೆ ಹೋಗಿ ಬರಲು ಅನುಕೂಲವಾಗಲಿ ಎಂಬ ಕಾರಣಕ್ಕೆ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿತ್ತು. ಆದರೆ ನೆರೆ ಹಾವಳಿ ಬೃಹತ್‌ ವಾಹನಗಳ ಸಂಚಾರದಿಂದ ರಸ್ತೆ ಹಾಳಾಗಿದೆ. ಆದರೆ ದುರಸ್ತಿಗೆ ಮುಂದಾಗದೇ  ಅಧಿಕಾರಿಗಳು ಉದಾಸೀನ ಮಾಡುತ್ತಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ’ ಎಂದು ವಿವಿಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರಸ್ತೆ ನಿರ್ವಹಣಾ ಅವಧಿ ಮುಗಿದಿದ್ದರಿಂದ ಗುತ್ತಿಗೆದಾರರು ಸಂಬಂಧವಿಲ್ಲದಂತಿದ್ದಾರೆ. ಗಾಳಿ ವಿದ್ಯುತ್ ಸರಬರಾಜು ಕಂಪನಿಯು ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಹೇಳಿ ದುರಸ್ತಿ ಮಾಡದೇ ಹೋಗಿದ್ದಾರೆ. ಹೀಗೆ ಖಾಸಗಿ ಕಂಪನಿಯರ ನಯವಂಚನೆ, ಜನಪ್ರತಿನಿಧಿಗಳ ಉದಾಸೀನತೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಾಳಾದ ರಸ್ತೆ ಅಭಿವೃದ್ಧಿ ಕಾಣದಾಗಿದೆ’ ಎಂದು ಭೀಮರೆಡ್ಡಿ ಹಾಲಕೇರಿ, ಹುಲಗನಗೌಡ ಪಾಟೀಲ, ಯಮನೂರಸಾಬ ನದಾಫ್ ಸೇರಿ ಅನೇಕರು ಬೇಸರ ವ್ಯಕ್ತಪಡಿಸಿದರು.

ಯಲಬುರ್ಗಾ ತಾಲ್ಲೂಕು ಸಂಗನಾಳ-ಹಾಳಕೇರಿ ರಸ್ತೆಯಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹಾಳಾಗಿದೆ

ಮೂರು ಇಲಾಖೆಗೆ ಸೇರಿದ ರಸ್ತೆ ಬೃಹತ್‍ ಗಾತ್ರದ ವಾಹನಗಳ ಓಡಾಟವೇ ಅಧಿಕ ರೈತಾಪಿ ವರ್ಗಕ್ಕೆ ತೀವ್ರ ತೊಂದರೆ

ಸಂಗನಾಳ-ಹಾಳಕೇರಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಾಗಿದೆ. ಅಲ್ಲದೇ ನೆರೆ ಹಾವಳಿಯಿಂದ ರಸ್ತೆ ಮತ್ತು ಸೇತುವೆ ಹಾಳಾಗಿವೆ. ಕಳೆದ 6-7ತಿಂಗಳ ಹಿಂದೆಯೇ ₹ 1.50 ಕೋಟಿ ಅಂದಾಜು ಪಟ್ಟಿಯೊಂದಿಗೆ ದುರಸ್ತಿ ಕಾಮಗಾರಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. -
ಅಜ್ಜಯ್ಯ ಮಠದ ಪಿಎಂಜಿಎಸ್‍ವೈ ಅಧಿಕಾರಿ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.