ಕೊಪ್ಪಳ: ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಹಾಲವರ್ತಿ ಗ್ರಾಮದಲ್ಲಿ ದಲಿತರು ಹೋಟೆಲ್ ಪ್ರವೇಶಿಸಿದರೆ ಹೋಟೆಲ್ ಬಂದ್ ಮಾಡಲಾಗುತ್ತಿತ್ತು. ಕ್ಷೌರದ ಅಂಗಡಿ, ದೇವಸ್ಥಾನ ಹಾಗೂ ಕೆರೆ ಪ್ರವೇಶಕ್ಕೆ ನಿರ್ಬಂಧವಿತ್ತು.
ಮಾಧ್ಯಮಗಳಲ್ಲಿ ಬುಧವಾರ ವರದಿ ಪ್ರಕಟವಾಗುತ್ತಿದ್ದಂತೆ ತಡರಾತ್ರಿ ಕ್ಷೌರಿಕ ಅಂಗಡಿಯವರಾದ ಯಂಕೋಬಾ ಹಡಪದ, ಅಂಜಿನಪ್ಪ ಮತ್ತು ಹೋಟೆಲ್ ಮಾಲೀಕ ಸಂಜೀವಪ್ಪ ಗುಳದಳ್ಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ಯಂಕೋಬಾ ಹಾಗೂ ಸಂಜೀವಪ್ಪ ಅವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಯ ಶೋಧ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.
ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ‍್ಟನ್ ಮಹೇಶ ಮಾಲಗಿತ್ತಿ ಮತ್ತು ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಅವರು ಗುರುವಾರ ಎಲ್ಲ ಸಮದಾಯಗಳ ಶಾಂತಿ ಸಭೆ ನಡೆಸಿದರು. ‘ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ರೀತಿಯ ಘಟನೆ ಮುರುಕಳಿಸಿದತೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು.
ದಲಿತರಿಗೆ ಪ್ರವೇಶ ನಿರ್ಬಂಧಿಸಿದ್ದ ಹೋಟೆಲ್‌ನಲ್ಲಿಯೇ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದೇವತೆ ಮತ್ತು ಆಂಜನೇಯನ ದೇವಸ್ಥಾನಕ್ಕೆ ದಲಿತರನ್ನು ಕರೆದುಕೊಂಡು ಹೋದ ಅಧಿಕಾರಿಗಳು, ಎಲ್ಲರ ಸಮ್ಮುಖದಲ್ಲಿ ದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.