ADVERTISEMENT

ಗಂಗಾವತಿ: ರಘುವರ್ಯತೀರ್ಥರ ಆರಾಧನೆ ನಡೆಸಲು ಉತ್ತರಾದಿಮಠಕ್ಕೆ ಅವಕಾಶ ನೀಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 17:23 IST
Last Updated 5 ಜೂನ್ 2023, 17:23 IST
ಆನೆಗೊಂದಿ ಸಮೀಪದ ನವ ವೃಂದಾವನದಲ್ಲಿ ಸೋಮವಾರ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪೂಜೆ ನೆರವೇರಿಸಿದರು
ಆನೆಗೊಂದಿ ಸಮೀಪದ ನವ ವೃಂದಾವನದಲ್ಲಿ ಸೋಮವಾರ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪೂಜೆ ನೆರವೇರಿಸಿದರು   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಆನೆಗೊಂದಿ ನಡುಗಡ್ಡೆಯಲ್ಲಿರುವ ನವವೃಂದಾವನದಲ್ಲಿ ರಘುವರ್ಯತೀರ್ಥರ ಆರಾಧನೆ ನಡೆಸಲು ಹೈಕೋರ್ಟ್‌ ಉತ್ತರಾದಿಮಠಕ್ಕೆ ಸೋಮವಾರ ಅನುಮತಿ ನೀಡಿದೆ.

ಜೂನ್‌ 5ರಿಂದ 7ರ ತನಕ ರಘುವರ್ಯತೀರ್ಥರ ಆರಾಧನೆ ನಡೆಸಲು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಮಠದವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ರಾಯರಮಠದವರೂ ಇದೇ ಅವಧಿಯಲ್ಲಿ ಸುಧಾಸಮರ್ಪಣ ಸಂಸ್ಮರಣೋತ್ಸನ ನಡೆಸುವುದಾಗಿ ಅರ್ಜಿ ನೀಡಿದ್ದರು. ಈ ಎರಡೂ ಮನವಿಗಳನ್ನು ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಪರಿಶೀಲಿಸಿ ಯಾರೇ ಕಾರ್ಯಕ್ರಮ ಮಾಡುವುದಾದರೂ ನ್ಯಾಯಾಲಯದ ಅನುಮತಿ ಪಡೆಯುವುದು ಕಡ್ಡಾಯ ಎಂದು ನಿರ್ದೇಶನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಉತ್ತರಾದಿಮಠದವರು ಧಾರವಾಡ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರಾಧನೆ ನಡೆಸಲು ಉತ್ತರಾದಿಮಠಕ್ಕೆ ಅವಕಾಶ ಕೊಟ್ಟಿದೆ. ಸೋಮವಾರ ಪೂರ್ವಾರಾಧನೆ ಪೂರ್ಣಗೊಂಡಿದ್ದು, ಇನ್ನು ಎರಡು ದಿನ ಆರಾಧನೆ ಜರುಗಲಿದೆ.

ADVERTISEMENT

‘ಉಭಯ ಮಠಗಳ ನಡುವೆ ನಡೆಯುತ್ತಿರುವ ಪ್ರಕರಣಗಳಲ್ಲಿ ಈ ವಿಷಯ ವಿವಾದವೇ ಆಗಿರಲಿಲ್ಲ. ಇದೊಂದು ನಮಗೆ ಮಹತ್ವಪೂರ್ಣ ತೀರ್ಪು ಆಗಿದೆ’ ಎಂದು ಉತ್ತರಾದಿ ಮಠದ ಪ್ರಕಟಣೆ ಹೇಳಿದೆ. ಶ್ರೀಮಠದ ಪರವಾಗಿ ಹಿರಿಯ ವಕೀಲ ಜಯಕುಮಾರ ಪಾಟೀಲ್, ಅಮಿತ ಕುಮಾರ್ ದೇಶಪಾಂಡೆ ವಾದ ಮಂಡಿಸಿದರು.

ಪೂರ್ವಾರಾಧನೆ ಸಂಪನ್ನ: ಆರಾಧನೆಯ ಮೊದಲ ದಿನವಾದ ಸೋಮವಾರ ಉತ್ತರಾದಿಮಠದವರು ರಘುವರ್ಯತೀರ್ಥರ ಪೂರ್ವಾರಾಧನಾ ಮಹೋತ್ಸವವನ್ನು ನೆರವೇರಿಸಿದರು. ಶ್ರೀಪಾದಂಗಳವರು ಮೂಲರಾಮದೇವರ ಸಂಸ್ಥಾನಪೂಜೆ ನೆರವೇರಿಸಿದರು.

ಮಂಗಳವಾರ ಮತ್ತು ಬುಧವಾರ ಆರಾಧನೆ ಜರುಗಲಿದ್ದು, ಶ್ರೀಪಾದರು ನಡುಗಡ್ಡೆಯಲ್ಲಿಯೇ ಇದ್ದು ಶ್ರೀಮೂಲರಾಮದೇವರ ಸಂಸ್ಥಾನಪೂಜೆ, ರಘುವರ್ಯ ತೀರ್ಥರಿಗೆ ಪಂಚಾಮೃತ, ಹಸ್ತೋದಕಗಳನ್ನು ನೇರವೇರಿಸಲಿದ್ದಾರೆ. ಎಲ್ಲ ಭಕ್ತರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಶ್ರೀಮಠದ ಆಡಳಿತಾಧಿಕಾರಿ ವಿದ್ಯಾಧೀಶಾಚಾರ್ಯ ಗುತ್ತಲ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.