ADVERTISEMENT

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಯತ್ನ, ತಡೆದ ಪೊಲೀಸರ ಜೊತೆ ಬಿಜೆಪಿ ಮುಖಂಡರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 16:15 IST
Last Updated 28 ಜೂನ್ 2024, 16:15 IST
<div class="paragraphs"><p>ಕೊಪ್ಪಳದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಜಿಲ್ಲಾಡಳಿತ ಭವನದಲ್ಲಿ ನುಗ್ಗಲು ಪ್ರಯತ್ನಿಸಿದರು </p></div>

ಕೊಪ್ಪಳದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಜಿಲ್ಲಾಡಳಿತ ಭವನದಲ್ಲಿ ನುಗ್ಗಲು ಪ್ರಯತ್ನಿಸಿದರು

   

–ಪ್ರಜಾವಾಣಿ ಚಿತ್ರ

ಕೊಪ್ಪಳ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ಮೊತ್ತದ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್‌ ಮಟ್ಟದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ADVERTISEMENT

ಅಶೋಕ ವೃತ್ತದಿಂದ ಆರಂಭವಾದ ಮೆರವಣಿಯುದ್ದಕ್ಕೂ ಪಕ್ಷದ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿಯೇ ಹಣ ವರ್ಗಾವಣೆಯಾಗಿದ್ದು ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಂತಿದೆ. ಹಣಕಾಸು ಇಲಾಖೆ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಜಿಲ್ಲಾಡಳಿತ ಭವನ ಪ್ರವೇಶಿಸುವ ದ್ವಾರದಲ್ಲಿಯೇ ತಡೆಯಲು ಮೊದಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಿದ್ಧತೆ ಮಾಡಿಕೊಂಡಿದ್ದರು. ಈ ಜಾಗದಲ್ಲಿ ಬಿಜೆಪಿಯವರು ಒಳಗಡೆ ಪ್ರವೇಶಿಸದಂತೆ ತಡೆದರೂ ಬ್ಯಾರಿಕೇಡ್‌ ದಾಟಿಕೊಂಡು ಒಳಗಡೆ ಬಂದರು.

ದಲಿತರ ₹187 ಕೋಟಿ ನುಂಗಿದ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ, ಸಚಿವರಾಗಿದ್ದ ಬಿ. ನಾಗೇಂದ್ರರನ್ನು ರಕ್ಷಣೆ ಮಾಡುತ್ತಿರುವ ಧಿಕ್ಕಾರ ಎನ್ನುವ ಘೋಷಣೆಗಳನ್ನು ಮೊಳಗಿಸಿದರು. ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಮೂಲಕ ಬಿಜೆಪಿ ನಾಯಕರು ಹಾಗೂ ಮುಖಂಡರು ಒಳಗಡೆ ಪ್ರವೇಶ ಮಾಡಲು ಪ್ರಯತ್ನಿಸಿದಾಗ ಪೊಲೀಸರು ತಡೆಯೊಡ್ಡಿದರು. ಈ ವೇಳೆ ಕಾರ್ಯಕರ್ತರು ಡಿವೈಎಸ್‌ಪಿ ಮುತ್ತಣ್ಣ ಸರವಗೋಳ ಜೊತೆ ವಾಗ್ವಾದ ನಡೆಸಿದರು.

ಪ್ರತಿಭಟನೆಯಲ್ಲಿ ತೊಡಗಿದ್ದ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಪೊಲೀಸರು ವಾಹನದಲ್ಲಿ ಕರೆದೊಯ್ದ ಕ್ಷಣ

ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಇಲ್ಲ. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿಯನ್ನು ಕರೆಸುತ್ತೇನೆ, ಅವರಿಗೆ ಮನವಿಕೊಡಿ ಎಂದು ಮುತ್ತಣ್ಣ ಅವರು ಹೇಳಿದರೂ ಪ್ರತಿಭಟನಾ ನಿರತರು ಕೇಳಲಿಲ್ಲ. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಬಂದರೂ ಅಧಿಕಾರಿಗಳು ಇಲ್ಲವೇ? ಎಂದು ಕಾರ್ಯಕರ್ತರು ಪ್ರಶ್ನಿಸಿದರು.  

ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಅವರು ಜಿಲ್ಲಾಧಿಕಾರಿಯೇ? ಹೋರಾಟದ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲ್ಲವೆಂದರೆ ಏನು ಅರ್ಥ? ಎಂದು ಪ್ರಶ್ನಿಸಿ ಒಳಗಡೆ ಹೋಗಲು ಬಿಡುವಂತೆ ಒತ್ತಾಯಿಸಿದರೂ ಸಾಧ್ಯವಾಗಲಿಲ್ಲ. ಅವರನ್ನು ಪೊಲೀಸರು ವಶಕ್ಕೆ ಪಡೆದು ಕೆಲ ಹೊತ್ತಿನ ಬಳಿಕ ಬಿಡುಗಡೆ ಮಾಡಿದರು.

ಶಾಸಕರಾದ ಜನಾರ್ದನ ರೆಡ್ಡಿ, ದೊಡ್ಡನಗೌಡ ಪಾಟೀಲ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಬಸವರಾಜ ದಢೇಸೂಗೂರು, ಪಕ್ಷದ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ, ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌, ಮಹಾಲಕ್ಷ್ಮಿ ಕಂದಾರಿ, ಗಣೇಶ ಹೊರತಟ್ನಾಳ, ಎಸ್‌.ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯ ತಾಳಿಕೇರಿ, ಎಸ್‌.ಟಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ವೀರಭದ್ರಪ್ಪ ನಾಯಕ, ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬಿಜೆಪಿಯ ಪ್ರತಿಭಟನಾ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು  
ಪೊಲೀಸರು ಕಾನೂನಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಯಾವುದೇ ಒಬ್ಬರ ಕೆಲಸ ಮಾಡಬೇಕು. ಮುಂದೆ ಸರ್ಕಾರ ಬದಲಾದರೆ ಪರಿಣಾಮ ಎದುರಿಸಬೇಕಾಗುತ್ತದೆ. ಪೊಲೀಸರನ್ನು ಬಳಸಿಕೊಂಡು ಸರ್ಕಾರ ನಮ್ಮ ಹೋರಾಟ ಹತ್ತಿಕ್ಕುತ್ತಿದೆ.
–ದೊಡ್ಡನಗೌಡ ಪಾಟೀಲ, ಶಾಸಕ
ಅಧಿಕಾರಿಗಳು ನಮ್ಮ ಹೋರಾಟಕ್ಕೆ ಹೆದರಿ ರಜೆಯ ಮೇಲೆ ತೆರಳಿ ಪಲಾಯನ ಮಾಡಿದ್ದಾರೆ. ದಲಿತರ ಸಲುವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಇನ್ನೂ ಮಾಡುತ್ತೇವೆ.
– ನವೀನ್‌ ಗುಳಗಣ್ಣನವರ್‌, ಬಿಜೆಪಿ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.