ಗಂಗಾವತಿ: ‘ಮೀಸಲಾತಿಯೊಂದರಿಂದ ನಾಯಕ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಶಿಕ್ಷಣ, ಸಂಘಟನೆ, ಹೋರಾಟ; ಮೂರು ಮಂತ್ರಗಳನ್ನು ಪಾಲಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಆನೆಗೊಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಮಹರ್ಷಿ ವಾಲ್ಮೀಕಿ ಸಂಘದ ಉದ್ಘಾಟನೆ ಹಾಗೂ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಸ್ಟಿ, ಎಸ್ಸಿ ಮೀಸಲಾತಿ ಹೆಚ್ಚಳ ಮಾಡಿದ್ದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ರಾಜ್ಯ ಸರ್ಕಾರ ಮನವಿ ಮಾಡಿದೆ. ಕೇಂದ್ರ ಸರ್ಕಾರ ಇದಕ್ಕೆ ಗಟ್ಟಿ ಮನಸ್ಸು ಮಾಡಬೇಕು. ಜನಪ್ರತಿನಿಧಿಗಳು ಹೋದ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಆಲಿಸಿ ಪರಿಹರಿಸಿದಾಗ ಕಾರ್ಯಕ್ರಮಕ್ಕೊಂದು ಅರ್ಥಸಿಗುತ್ತದೆ’ ಎಂದರು.
‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥದಲ್ಲಿ ಹನುಮನ ಜನ್ಮಭೂಮಿ ಬಗ್ಗೆ ಉಲ್ಲೇಖವಿದೆ. ಅದು ಅಂಜನಾದ್ರಿ, ಗಂಗಾವತಿ ತಾಲ್ಲೂಕಿನ ಕಿಷ್ಕಿಂದೆ ಸಮೀಪವಿದೆ. ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದ ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿದೆ. ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿಗಳ ಪುತ್ಥಳಿ ನಿರ್ಮಿಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಜನಾದ್ರಿಗೆ, ರಾಮಾಯಣ ಗ್ರಂಥಕ್ಕೆ ಇನ್ನಷ್ಟು ಮನ್ನಣೆ ಸಿಗಲಿದೆ’
‘ಸಾಂಕೇತಿಕವಾಗಿ ತಾವರಗೇರಾದಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಆರಂಭಿಸಿದ್ದು, ಕೆಎಎಸ್, ಐಎಎ ಸ್ ಸೇರಿ ವಿವಿಧ ಪರೀಕ್ಷೆಗಳ ತರಬೇತಿ ನೀಡಲಾಗುತ್ತಿದೆ. ಎಲ್ಲರೂ ಇದರ ಉಪಯೋಗ ಪಡೆಯಬೇಕು. ವಾಲ್ಮೀಕಿ ರಚಿಸಿದ ಗ್ರಂಥ ಈಗ ಹಲವು ರೀತಿಯಲ್ಲಿ ಬದಲಾ ಗಿದ್ದು, ರಾಮಾಯಣ ಗ್ರಂಥ ಯಾವುದು ಅಸಲು ಎಂಬುದು ಪತ್ತೆ ಹಚ್ಚಬೇಕು’ ಎಂದರು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕಂಪ್ಲಿ ಶಾಸಕ ಜಿ.ಎನ್.ಗಣೇಶಮಾತನಾಡಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಆನೆಗೊಂದಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು. ನೂತನ ಸಂಘಟನೆ ನಾಮಫಲಕ ಉದ್ಘಾಟಿಸಲಾಯಿತು.
ಮಾಜಿ ಶಾಸಕ ಜಿ.ವೀರಪ್ಪ, ಅಮರೇಗೌಡ ಭಯ್ಯಾಪುರ ಪಾಟೀಲ, ರಾಜಶೇಖರ ಹಿಟ್ನಾಳ, ಜೆಡಿಎಸ್ ಮುಖಂಡ ರಾಜುನಾಯಕ, ಜೋಗದ ನಾರಾಯಣಪ್ಪ ನಾಯಕ, ಹನುಮೇಶ ನಾಯಕ, ಆನೆಗುಂದಿ ಗ್ರಾ.ಪಂ ಅಧ್ಯಕ್ಷೆ ಮಹಾದೇವಿ, ಸದಸ್ಯ ತಿಮ್ಮಪ್ಪ ಬಾಳೆಕಾಯಿ, ಸಿದ್ಧರಾಮಸ್ವಾಮಿ, ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ಮಂಜುನಾಥ ಕಲಾಲ್ ಸೇರಿ ಸಮಾಜದ ಮುಖಂಡರು, ಮಹಿಳೆಯರು ಇದ್ದರು.
ಮೀಸಲಾತಿ ಒಳ ಮೀಸಲಾತಿ ಗೊಂದಲಗಳಿಂದ ಸರ್ಕಾರಿ ಹುದ್ದೆಗಳಲ್ಲಿದ್ದ ನಾಯಕ ಸಮಾಜದವರ ಸಂಖ್ಯೆ 5 ಲಕ್ಷದಿಂದ 3 ಲಕ್ಷಕ್ಕೆ ಇಳಿದಿದೆ. ಈ ಬಗ್ಗೆ ವಿಚಾರ ಮಾಡಬೇಕುಸತೀಶ ಜಾರಕಿಹೊಳಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.