ಕಾರಟಗಿ: ಶ್ರಾವಣ ಮಾಸದ 2ನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವು ಮಹಿಳೆಯರಿಗೆ ಸಂಭ್ರಮದ ಹಬ್ಬಗಳಲ್ಲಿ ಒಂದಾಗಿದೆ. ಪೂಜೆ, ಅಲಂಕಾರ, ಅರಿಸಿಣ ಹಾಗೂ ಕುಂಕುಮದ ವಿನಿಮಯವನ್ನು ಮಹಿಳೆಯರು ಉತ್ಸಾಹದಿಂದ ಕೈಗೊಂಡರು.
ಬೆಳಿಗ್ಗೆಯಿಂದಲೇ ಮನೆ ಸ್ವಚ್ಛಗೊಳಿಸಿ, ಅಂಗಳದಲ್ಲಿ ಸಗಣಿ ನೀರು ಹಾಕಿ, ವಿವಿಧ ಬಣ್ಣಗಳ ರಂಗೋಲಿ ಹಾಕಿ, ಮನೆಯ ಬಾಗಿಲಿಗೆ ಮಾವಿನ ಎಲೆ, ಹೂವು, ಬಾಳೆಗೊನೆ ಮತ್ತು ವಿವಿಧ ಅಲಂಕಾರಿಕ ವಸ್ತಗಳೊಂದಿಗೆ ಆಕರ್ಷಕ ಅಲಂಕಾರ ಮಾಡಲಾಗಿತ್ತು.
ವ್ರತ ಆಚರಿಸುವ ಮನೆಗಳಲ್ಲಿ ಹಬ್ಬದ ಸಂಭ್ರಮ. ಕುಟುಂಬದ ಸದಸ್ಯರೆಲ್ಲರೂ ಶುಭ್ರವಾದ ಬಟ್ಟೆ, ಆಭರಣ ಧರಿಸಿ ಲವಲವಿಕೆಯಿಂದ ಇದ್ದರು.
ಅಲಂಕಾರಿಕ ಹಾಗೂ ಆಕರ್ಷಕ ಮಂಟಪವಿಟ್ಟು, ತುಂಬಿದ ಕೊಡದ ಮೇಲೆ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ, ಸುತ್ತಲೂ ಅಲಂಕಾರದ ವಸ್ತಗಳನ್ನಿಟ್ಟು, ವಿವಿಧ ಹೂವುಗಳಿಂದ ಶೃಂಗರಿಸಲಾಗಿತ್ತು. ಲಕ್ಷ್ಮೀದೇವಿಗೆ ಚಿನ್ನ, ಬೆಳ್ಳಿಯ ಆಭರಣಗಳು, ನಾಣ್ಯಗಳಿಂದ ಅಲಂಕಾರ ಮಾಡಿ, ಶ್ರದ್ಧೆಯಿಂದ ಪೂಜೆ ಸಲ್ಲಿಸಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ಮಾಡುವುದರೊಂದಿಗೆ ಧನ್ಯತಾಭಾವ ಮೆರೆಯುತ್ತಿರುವುದು ವಿವಿಧೆಡೆ ಕಂಡುಬಂತು.
ವರಮಹಾಲಕ್ಷ್ಮಿ ಪ್ರತಿಷ್ಠಾಪಿಸಿದ ಮನೆಗಳಿಗೆ ತೆರಳಿ ಪೂಜೆಯಲ್ಲಿ ಪಾಲ್ಗೊಳ್ಳುವುದು. ತಮ್ಮ ನಿವಾಸಗಳಿಗೂ ಮಹಿಳೆಯರನ್ನು ಅಹ್ವಾನಿಸುವುದು ಸಹಜವಾಗಿತ್ತು. ಮಹಿಳೆಯರು ಪರಸ್ಪರ ಹರಿಸಿಣ, ಕುಂಕುಮ, ಹೂವು, ಬಳೆಗಳ ವಿನಿಮಯ ಮಾಡಿ ಪರಸ್ಪರ ಶುಭ ಹಾರೈಸುವ ದೃಶ್ಯಗಳು ಎಲ್ಲೆಡೆ ಕಂಡು ಬಂದವು.
ಕುಟುಂಬದ ಸದಸ್ಯರಲ್ಲದೇ, ಆತ್ಮೀಯರನ್ನೂ ಮನೆಗೆ ಅಹ್ವಾನಿಸಿ, ತರಾವರಿ ಭೋಜನ ಸವಿದು, ಉಭಯ ಕುಶಲೋಪರಿಯಲ್ಲಿ ತೊಡಗಿರುವ ಪ್ರಸಂಗಗಳು ಸಹಜವಾಗಿದ್ದವು. ಶ್ರಾವಣ ಮಾಸದ ಆರಂಭದಲ್ಲಿ ನಾಗರ ಚೌತಿ, ಪಂಚಮಿ ಹಬ್ಬದ ಬೆನ್ನಹಿಂದೆಯೇ ವರಮಹಾಲಕ್ಷ್ಮೀ ಹಬ್ಬದ ಸಡಗರವು ಮಹಿಳೆಯರಲ್ಲಿ ಉತ್ಸಾಹ ಹೆಚ್ಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.