ಕೊಪ್ಪಳ: ವಾತಾವರಣದ ಏರಿಳಿತ ಮತ್ತು ಮಾರುಕಟ್ಟೆಯಲ್ಲಿ ಫಸಲು ಕಡಿಮೆಯಾದ ಪರಿಣಾಮ ತರಕಾರಿ ಬೆಲೆ ಹಲವು ದಿನಗಳಿಂದ ನಿತ್ಯ ಏರಿಕೆಯಾಗುತ್ತಲೇ ಇದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ವ್ಯಾಪಾರಿಗಳಿಗೂ ಇದರ ಬಿಸಿ ತಟ್ಟುತ್ತಿದೆ.
ನಿತ್ಯ ಆಹಾರ ತಯಾರಿಕೆಯಲ್ಲಿ ಉಳ್ಳಾಗಡ್ಡಿ, ಟೊಮೆಟೊ, ಹಸಿಮೆಣಸಿನಕಾಯಿ ಬಳಕೆ ಸಾಮಾನ್ಯವಾಗಿದ್ದು, ಟೊಮೆಟೊ ಈಗ ಒಂದು ಕೆ.ಜಿಗೆ. ₹100 ಆಗಿದೆ. ಹಿಂದಿನ 20 ದಿನಗಳ ಹಿಂದೆ ₹40ರಿಂದ ₹50 ಆಸುಪಾಸಿನಲ್ಲಿದ್ದ ಟೊಮೆಟೊ ಬೆಲೆ ಹಂತಹಂತವಾಗಿ ಏರಿಕೆಯಾಗಿದ್ದು ಈಗ ಶತಕ ಬಾರಿಸಿದೆ. ಹಸಿ ಮೆಣಸಿನಕಾಯಿಯ ದಪ್ಪನೆಯ ಕಾಯಿಗೆ ಪ್ರತಿ ಕೆ.ಜಿ.ಗೆ ₹80 ಇದ್ದರೆ, ಗಿಡ್ಡಕಾಯಿ ಬೆಲೆ ₹120ಕ್ಕೆ ಏರಿಕೆಯಾಗಿದೆ. ಈ ಎರಡೂ ತರಕಾರಿಗೆ ಹೋಲಿಸಿದರೆ ಉಳ್ಳಾಗಡ್ಡಿ (ಪ್ರತಿ ಕೆ.ಜಿ.ಗೆ ₹50) ಬೆಲೆಯೇ ಕಡಿಮೆ.
ಹಲವು ತಿಂಗಳುಗಳಿಂದ ಏರಿಕೆಯ ಹಾದಿಯಲ್ಲಿಯೇ ಸಾಗಿರುವ ಬೀನ್ಸ್ ಈಗ ದ್ವಿಶತಕ ಬಾರಿಸಿದ್ದು ಒಂದು ಕೆ.ಜಿಗೆ. ₹200 ಆಗಿದೆ. ನಿತ್ಯದ ಅಗತ್ಯ ವಸ್ತುಗಳ ಸಾಲಿನಲ್ಲಿ ಬೀನ್ಸ್ ಇಲ್ಲದ ಕಾರಣ ಗ್ರಾಹಕರಿಂದಲೂ ಖರೀದಿ ಕಡಿಮೆಯಾಗಿದೆ. ವ್ಯಾಪಾರಿಗಳೂ ಸಗಟು ಮಾರುಕಟ್ಟೆಯಲ್ಲಿ ತರುವುದನ್ನು ಕಡಿಮೆ ಮಾಡಿದ್ದಾರೆ.
ವಾರದ ಹಿಂದೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಈ ವಾರ ಜಿಲ್ಲೆಯಲ್ಲಿ ಬಿಸಿಲು, ಮೋಡಕವಿದ ವಾತಾವರಣ. ಹವಾಮಾನದ ಏರಿಳಿತ ತರಕಾರಿಗಳ ಮೇಲೂ ಆಗಿ ಫಸಲು ಕಡಿಮೆಯಾಗುತ್ತಿದೆ. ವಿಜಯಪುರ, ಬೆಳಗಾವಿಯಿಂದ ಇಲ್ಲಿನ ಮಾರುಕಟ್ಟೆಗೆ ಹೆಚ್ಚು ತರಕಾರಿ ಬರುತ್ತಿದ್ದರೆ, ಜಿಲ್ಲೆಯ ರೈತರು ಇಲ್ಲಿನ ಎಪಿಎಂಸಿಯಲ್ಲಿನ ಅವ್ಯವಸ್ಥೆ ರೋಸಿ ಹೊರಜಿಲ್ಲೆಗಳಿಗೆ ವ್ಯಾಪಾರಕ್ಕೆ ತೆರಳುತ್ತಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಹಿರೇಕಾಯಿ ₹120, ಬೆಂಡೆಕಾಯಿ ₹80, ಸೌತೇಕಾಯಿ ₹80, ಚವಳೆಕಾಯಿ ₹80, ದೊಣ್ಣ ಮೆಣಸಿನಕಾಯಿ ₹120 ಇದೆ.
‘ಒಂದು ಬಾಕ್ಸ್‌ನಲ್ಲಿ ಸಾಮಾನ್ಯವಾಗಿ 18ರಿಂದ 20 ಕೆ.ಜಿ. ಟೊಮೆಟೊ ಇರುತ್ತದೆ. ಹಲವು ದಿನಗಳ ಹಿಂದೆಯಷ್ಟೇ ನಿತ್ಯ 30 ಬಾಕ್ಸ್ ಮಾರಾಟ ಮಾಡುತ್ತಿದ್ದೆವು. ಒಂದು ಬಾಕ್ಸ್‌ಗೆ ₹500ರಿಂದ ₹600 ಇದ್ದ ಬೆಲೆ ಈಗ ₹1800ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಂದಷ್ಟು ಕೊಳೆತಿದ್ದರೂ ಬೆಲೆ ಕಡಿಮೆಯಿದ್ದ ಕಾರಣ ದೊಡ್ಡ ನಷ್ಟವಾಗುತ್ತಿರಲಿಲ್ಲ. ಈಗ ವಾತಾವರಣದ ಏರಿಳಿತದಿಂದಲೂ ಸ್ವಲ್ಪ ಟೊಮೆಟೊ ಕೆಟ್ಟು ಹೋದರೂ ಸಾಕಷ್ಟು ನಷ್ಟವಾಗುತ್ತಿದೆ’ ಎಂದು ಇಲ್ಲಿನ ಲೇಬರ್ ಸರ್ಕಲ್ ಬಳಿ ತರಕಾರಿ ವ್ಯಾಪಾರಿ ಮಾಡುತ್ತಿದ್ದ ರತ್ನಾ ದೊಡ್ಡಮನಿ ಹೇಳಿದರು.
’ಅತ್ಯಂತ ಅವ್ಯವಸ್ಥೆಯಿರುವ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಸಗಟು ಮಾರುಕಟ್ಟೆಯಲ್ಲಿ ತರುವುದೇ ಸವಾಲು. ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ತರಕಾರಿ ತಂದು ದಿನಪೂರ್ತಿ ಮಾರಾಟ ಮಾಡಿದರೂ ಈಗ ಅಷ್ಟೊಂದು ವ್ಯಾಪಾರವಾಗುತ್ತಿಲ್ಲ. ಮೊದಲು ನಿತ್ಯ ₹20 ಸಾವಿರ ಆಗುತ್ತಿದ್ದ ವ್ಯಾಪಾರ ಈಗ ₹10 ಸಾವಿರಕ್ಕೆ ಇಳಿದಿದೆ’ ಎಂದು ತರಕಾರಿ ವ್ಯಾಪಾರಿ ಮಂಜುನಾಥ ಬೇಸರ ವ್ಯಕ್ತಪಡಿಸಿದರು.
ಎಲ್ಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೂ ಅಗತ್ಯವಿದ್ದಷ್ಟು ಖರೀದಿ ಮಾಡುವುದು ಅನಿವಾರ್ಯ. ಕನಿಷ್ಠ ಉಳ್ಳಾಗಡ್ಡಿ ಟೊಮೆಟೊ ಆದರೂ ಬೇಕೇ ಬೇಕುರಾಧಿಕಾ ಎಂ. ಗೃಹಿಣಿ ಕೊಪ್ಪಳ
ಬೆಲೆ ಕಡಿಮೆಯಿದ್ದಾಗ ಒಂದು ಕೆ.ಜಿ.ಯಷ್ಟು ಖರೀದಿ ಮಾಡುತ್ತಿದ್ದ ಟೊಮೆಟೊ ಹಸಿಮೆಣಸಿನಕಾಯಿ ಈಗ ಪಾವ್ ಕೆ.ಜಿ.ಯಷ್ಟು ಮಾತ್ರ ಖರೀದಿ ಮಾಡುತ್ತಿದ್ದೇನೆನಾಗರಾಜ ನಾಯಕ ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.