ADVERTISEMENT

ಕಟ್ಟಿ ತುಗಾಂವ್ | ರಸ್ತೆಯ ಮೇಲೆಯೇ ಹರಿಯುವ ಕೊಳಚೆ: ಚರಂಡಿ ನಿರ್ಮಿಸಲು ಆಗ್ರಹ

ಗಿರಿರಾಜ ಎಸ್ ವಾಲೆ
Published 29 ಜೂನ್ 2024, 5:30 IST
Last Updated 29 ಜೂನ್ 2024, 5:30 IST
ಖಟಕಚಿಂಚೋಳಿ ಹೋಬಳಿಯ ಕಟ್ಟಿ ತುಗಾಂವ್ ಗ್ರಾಮದಲ್ಲಿ ಸೂಕ್ತವಾದ ಚರಂಡಿ ಇಲ್ಲದಿರುವುದರಿಂದ ತ್ಯಾಜ್ಯ ಸಂಗ್ರಹವಾಗಿರುವುದು
ಖಟಕಚಿಂಚೋಳಿ ಹೋಬಳಿಯ ಕಟ್ಟಿ ತುಗಾಂವ್ ಗ್ರಾಮದಲ್ಲಿ ಸೂಕ್ತವಾದ ಚರಂಡಿ ಇಲ್ಲದಿರುವುದರಿಂದ ತ್ಯಾಜ್ಯ ಸಂಗ್ರಹವಾಗಿರುವುದು    

ಖಟಕಚಿಂಚೋಳಿ: ಸಮೀಪದ ಕಟ್ಟಿ ತುಗಾಂವ್ ಗ್ರಾಮದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಹೊಲಸು ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಎಲ್ಲೆಡೆ ಹೊಲಸು ವಾಸನೆ ಹರಡುತ್ತಿದೆ.

ಸದ್ಯ ಮಳೆಗಾಲವಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ.ಇದರಿಂದ ಎಲ್ಲೆಡೆ ಗಬ್ಬು ನಾರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಮಳೆ ಬಂದರೆ ಸಾಕು ಕಲುಷಿತ ವಾತಾವರಣ ನಿರ್ಮಾಣ ಆಗುತ್ತದೆ. ಚರಂಡಿ ತುಂಬಿದ ನೀರು ಸುಲಭವಾಗಿ ಹೋಗುವಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕರು ಬಳಸಿದ ನೀರು, ಬಚ್ಚಲು ನೀರು ಕೊಚ್ಚೆ ರೂಪ ತಾಳಿ ಮುಖ್ಯರಸ್ತೆ ಮೇಲೆ ನಿಂತು ಗಬ್ಬು ನಾರುತ್ತಿದೆ. ದಿನದಿಂದ ದಿನಕ್ಕೆ ಸೊಳ್ಳೆಗಳ ಕಾಟವೂ ವಿಪರೀತವಾಗುತ್ತಿದೆ. ಇದರಿಂದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ADVERTISEMENT

ಗ್ರಾಮದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ಆದರೂ ಗ್ರಾಮ ಪಂಚಾಯಿತಿಯವರು ಹೊಸದಾಗಿ ಚರಂಡಿ ನಿರ್ಮಿಸುವ ಗೋಜಿಗೆ ಹೋಗುತ್ತಿಲ್ಲ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡಾವಣೆಯ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

‘ಮೂಲಸೌಕರ್ಯಕ್ಕೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ತಿಪ್ಪೆ ಮುಚ್ಚಿಸುವಂತೆ ಮನವಿ ಮಾಡಿದರೆ ಬೇಜವಾಬ್ದಾರಿ ಮಾತುಗಳನ್ನಾಡುತ್ತಾರೆ' ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

‘ಗ್ರಾಮದಲ್ಲಿ ತಲೆದೂರಿರುವ ಚರಂಡಿ ಸಮಸ್ಯೆಯನ್ನು ಅಭಿವೃದ್ಧಿ ಅಧಿಕಾರಿಗಳು ಶೀಘ್ರದಲ್ಲಿ ಬಗೆಹರಿಸಿ ಗ್ರಾಮಸ್ಥರು ಆರೋಗ್ಯವಂತರಾಗಿ ಬಾಳಲು ಅನುಕೂಲ ಮಾಡಿಕೋಡಬೇಕು' ಎಂದು ಮುಖಂಡ ವಿಶ್ವನಾಥ ಆಗ್ರಹಿಸಿದ್ದಾರೆ.

‘ಪ್ರತಿ ದಿನ ಗ್ರಾಮದ ಜನರು ಚರಂಡಿ ನೀರಿನ ಮೇಲೆ ಓಡಾಡುವುದನ್ನು ಕಂಡರು ಗ್ರಾಮ ಪಂಚಾಯ್ತಿಯವರು ಚರಂಡಿ ಸ್ವಚ್ಛಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ನಿರ್ಮಿಸಬೇಕು. ಇಲ್ಲದಿದ್ದರೆ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು’ ಎಂದು ಕನ್ನಡ ಸೇನೆ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಕೆನಾಡೆ ಎಚ್ಚರಿಕೆ ನೀಡಿದ್ದಾರೆ.

ಖಟಕಚಿಂಚೋಳಿ ಹೋಬಳಿಯ ಕಟ್ಟಿ ತುಗಾಂವ್ ಗ್ರಾಮದಲ್ಲಿ ಸೂಕ್ತವಾದ ಚರಂಡಿ ಇಲ್ಲದಿರುವುದರಿಂದ ತ್ಯಾಜ್ಯ ಸಂಗ್ರಹವಾಗಿರುವುದು
ಖಟಕಚಿಂಚೋಳಿ ಹೋಬಳಿಯ ಕಟ್ಟಿ ತುಗಾಂವ್ ಗ್ರಾಮದಲ್ಲಿ ಸೂಕ್ತವಾದ ಚರಂಡಿ ಇಲ್ಲದಿರುವುದರಿಂದ ತ್ಯಾಜ್ಯ ಸಂಗ್ರಹವಾಗಿರುವುದು
ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದೆಲ್ಲೆಡೆ ಸೂಕ್ತವಾದ ಚರಂಡಿ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು
- ಗೀತಾ ನಿಡಗುಂದೆ ಪಿಡಿಒ ಚಳಕಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.