ADVERTISEMENT

ಗಂಗಾವತಿ | ಉದ್ಯೋಗ ಖಾತ್ರಿ ಕೆಲಸ ನೀಡಲು ಆಗ್ರಹ: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 3:13 IST
Last Updated 24 ಮೇ 2024, 3:13 IST
ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಗ್ರಾಮಸ್ಥರಿಗೆ ನರೇಗಾದಡಿ ಉದ್ಯೋಗ ಖಾತ್ರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ, ತಾ.ಪಂ ಕಚೇರಿ ಎದುರು ದಲಿತ ವಿಮೋಚನಾ ಸೇನೆ ಸಂಘಟನೆ ನೇತೃತ್ವದಲ್ಲಿ ಚಿಕ್ಕಜಂತಕಲ್ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಗ್ರಾಮಸ್ಥರಿಗೆ ನರೇಗಾದಡಿ ಉದ್ಯೋಗ ಖಾತ್ರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ, ತಾ.ಪಂ ಕಚೇರಿ ಎದುರು ದಲಿತ ವಿಮೋಚನಾ ಸೇನೆ ಸಂಘಟನೆ ನೇತೃತ್ವದಲ್ಲಿ ಚಿಕ್ಕಜಂತಕಲ್ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು    

ಗಂಗಾವತಿ: ‘ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಗ್ರಾಮಸ್ಥರಿಗೆ ನರೇಗಾದಡಿ ಉದ್ಯೋಗ ಖಾತ್ರಿ ಕೆಲಸ ನೀಡಬೇಕು’ ಎಂದು ಒತ್ತಾಯಿಸಿ, ತಾ.ಪಂ ಕಚೇರಿ ಎದುರು ದಲಿತ ವಿಮೋಚನಾ ಸೇನೆ ಸಂಘಟನೆ ನೇತೃತ್ವದಲ್ಲಿ ಚಿಕ್ಕಜಂತಕಲ್ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ಹುಲಗಪ್ಪ ಟೀಪುಡಿ ಮಾತನಾಡಿ, ‘ಚಿಕ್ಕಜಂತಕಲ್ ಗ್ರಾಮದ ಗ್ರಾಮಸ್ಥರಿಗೆ ಮೇ 20ರಿಂದ 26ರವರೆಗೆ ನರೇಗಾದಡಿ ಎನ್ಎಂಆರ್ ಶೀಟ್ ತೆಗೆದು 7 ದಿನ ಉದ್ಯೋಗ ಖಾತ್ರಿ ಕೆಲಸ ನೀಡಿದ್ದು, ಅದರಲ್ಲಿ 2 ದಿನ ಕಲಕೇರಿಯಲ್ಲಿ ಕೆಲಸ ಮಾಡಿದ್ದಾರೆ. ಎಲ್ಲ ಕೂಲಿಕಾರರಿಗೆ ಹಾಜರಾತಿಯು ಸಹ ನೀಡಲಾಗಿದೆ.

‘ಮಳೆಯಿಂದ ಕೆರೆ ತುಂಬಿದೆ ಎಂದು ಬಾಕಿ ಉಳಿದ 5 ದಿನಗಳ ಕೂಲಿ ಕೆಲಸ ಸ್ಥಗಿತಗೊಳಿಸಿದ್ದು, ಕೂಲಿಕಾರರಿಗೆ ತುಂಬಾ ತೊಂದರೆಯಾಗಿದೆ. ಕೆರೆ ಸ್ವಲ್ಪವೇ ತುಂಬಿದ್ದು, ಅದರಲ್ಲಿ ಕೆಲಸ ಮಾಡಲು ಸಾಕಷ್ಟು ಖಾಲಿ ಜಾಗವಿದೆ. ಆದರೆ ಪಿಡಿಒ, ತಾ.ಪಂ ಇಒ, ತಾಂತ್ರಿಕ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಕೆಲಸ ನೀಡುತ್ತಿಲ್ಲ’ ಎಂದು ದೂರಿದರು.

ADVERTISEMENT

ಗ್ರಾಮಸ್ಥ ನಾಗರಾಜ ಮಾತನಾಡಿ, ‘ಎನ್ಎಂಆರ್ ಶೀಟ್ ಆಧಾರದಡಿ ಗ್ರಾಮಸ್ಥರಿಗೆ ನೀಡಿದ 7ದಿನದ ಕೆಲಸ ಸಂಪೂ ರ್ಣ ಪೂರ್ತಿಯಾಗುವವರೆಗೆ ಕಾಯದೇ, ಬಾಕಿ ಉಳಿದ 5 ದಿನದ ಕೆಲಸ ಸ್ಥಗಿತಗೊಳಿಸಿ, ಬೇರೆ ಎನ್ಎಂಆರ್ ಶೀಟ್ ಪ್ರಕಾರ ಕೆಲಸ ನೀಡುತ್ತೇವೆ ಎನ್ನುತ್ತಿದ್ದಾರೆ. ನಮಗೆ ನೀಡಿದ ಎಲ್ಲ ದಿನಗಳ ಕೆಲಸವನ್ನು ಮಾಡಲು ಅವಕಾಶ ನೀಡಿ, ತದನಂತರ ಯಾವ ಸ್ಥಳದಲ್ಲಾದರೂ ಕೆಲಸ ನೀಡಿ ಎಂದು ತಾ.ಪಂ ಇಒ ಲಕ್ಷ್ಮೀದೇವಿ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ಇಒ ಪ್ರತಿಕ್ರಿಯಿಸಿ ಕೆರೆ ತುಂಬಿದ ಪರಿಣಾಮ ಅಲ್ಲಿ ಕೆಲಸ ನೀಡಲು ಕಷ್ಟ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಗ್ರಾಮಸ್ಥರಾದ ನಾಗರಾಜ, ನೀಲಪ್ಪ, ಶರಣಪ್ಪ ಅಂಗಜಲ್, ಚೆನ್ನಪ್ಪ, ಹನುಮವ್ವ, ಪಾರ್ವತಿ, ಶಂಕ್ರಮ್ಮ, ಮಂಜಮ್ಮ, ಬಸಮ್ಮ ಸೇರಿ ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.