ಕುಷ್ಟಗಿ: ಪುರಸಭೆ ವ್ಯಾಪ್ತಿಯ ದಿನದ ಸಂತೆಯಲ್ಲಿ ವ್ಯಾಪಾರಿಗಳಿಂದ ವರ್ಷದ ಅವಧಿಗೆ ಶುಲ್ಕ ವಸೂಲಿ ಮಾಡುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮುಂಚಿತವಾಗಿ ಸಂಪೂರ್ಣ ಹಣ ಪಾವತಿಸದಿದ್ದರೂ ಸಂತೆಯಲ್ಲಿ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ.
ತರಕಾರಿ, ಮಾಂಸದ ಅಂಗಡಿಗಳು, ಹಣ್ಣು, ಮಾರಾಟದ ಬಂಡಿ, ಫಾಸ್ಟ್‌ಫುಡ್, ಹೋಟೆಲ್ ಸೇರಿ ವಾರದ, ದೈನಂದಿನ ಸಂತೆ ಹಾಗೂ ಜಾನುವಾರು ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಂದ ನಿಗದಿಪಡಿಸಿದ ಶುಲ್ಕ ವಸೂಲಿ ಮಾಡುವ ಹಕ್ಕನ್ನು ನೀಡಲು ಪುರಸಭೆ ಪ್ರತಿವರ್ಷ ಹೊರಗಿನ ವ್ಯಕ್ತಿಗಳಿಗೆ ಗುತ್ತಿಗೆ ನೀಡುವ ಪದ್ಧತಿ ಅನುಸರಿಸುತ್ತಿದೆ. ಬಹಿರಂಗ ಹರಾಜು ನಡೆಸಿ ಅತಿಹೆಚ್ಚು ಹಣ ನೀಡುವವರಿಗೆ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆ ಪಡೆದವರು ಪುರಸಭೆಯ ನಿಯಮಗಳ ಪ್ರಕಾರ ಶುಲ್ಕ ವಸೂಲಿ ಮಾಡುವುದು, ಗುತ್ತಿಗೆ ಪಡೆದವರು ನಿಯಮ ಉಲ್ಲಂಘಿಸಿದರೆ ನೀಡಿದ ಗುತ್ತಿಗೆ ರದ್ದುಪಡಿಸುವ ಅವಕಾಶ ಪುರಸಭೆ ಷರತ್ತುಗಳಲ್ಲಿದೆ.
ಆಗಿದ್ದೇನು: 2024-25ನೇ ವರ್ಷಕ್ಕೆ ಈ ಮೂರೂ ಸಂತೆಗಳಲ್ಲಿ ಶುಲ್ಕ ವಸೂಲಿ ಮಾಡುವ ಸಂಬಂಧ ಕಳೆದ ಫೆ.13 ರಂದು ಬಹಿರಂಗ ಹರಾಜು ನಡೆಸಲಾಗಿತ್ತು. ದಿನದ ಮತ್ತು ವಾರದ ಸಂತೆ ಹರಾಜಿನಲ್ಲಿ ಭಾಗಹಿಸುವವರು ತಲಾ ₹ 3.50 ಲಕ್ಷ, ಜಾನುವಾರು ಸಂತೆಯಾಗಿದ್ದರೆ ₹ 50 ಸಾವಿರ ಠೇವಣಿ ಮೊತ್ತದ ಡ್ರಾಫ್ಟ್ ಅನ್ನು ಹರಾಜಿಗೆ ಒಂದು ದಿನ ಮೊದಲೇ ಪುರಸಭೆಗೆ ಪಾವತಿಸಬೇಕು. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಮೀರಸಾಬ್ ಬುಡನ್‌ಸಾಬ್ ದಿನದ ಸಂತೆಯ ಗುತ್ತಿಗೆಯನ್ನು ₹ 7.90 ಲಕ್ಷಕ್ಕೆ, ವಾರದ ಸಂತೆಯ ಗುತ್ತಿಗೆಯನ್ನು ಹುಸೇನಪ್ಪ ಹಕ್ಕಲ ಎಂಬುವವರು ₹ 3.53 ಲಕ್ಷಕ್ಕೆ ಹಾಗೂ ಜಾನುವಾರು ಸಂತೆಯ ಗುತ್ತಿಗೆಯನ್ನು ಶರಣಪ್ಪ ಪೂಜಾರ ಎಂಬುವವರು ₹ 22 ಸಾವಿರಕ್ಕೆ ಪಡೆದುಕೊಂಡಿದ್ದಾರೆ.
ಜಾನುವಾರು ಸಂತೆಯ ಗುತ್ತಿಗೆ ಪಡೆದಿರುವ ಶರಣಪ್ಪ ಪೂಜಾರ ಮತ್ತು ವಾರದ ಸಂತೆ ಗುತ್ತಿಗೆ ಪಡೆದಿರುವ ಹುಸೇನಪ್ಪ ಹಕ್ಕಲ ಎಂಬುವವರು ಮಾತ್ರ ಪೂರ್ತಿ ಮೊತ್ತವನ್ನು ಪುರಸಭೆಗೆ ಸಂದಾಯ ಮಾಡಿದ್ದಾರೆ. ಮೀರಸಾಬ್ ಎಂಬುವವರು ಹರಾಜು ಸಂದರ್ಭದಲ್ಲಿ ನೀಡಿದ್ದ ₹3.50 ಲಕ್ಷ ಹಣವನ್ನು ಡ್ರಾಫ್ಟ್ ಮೂಲಕ ಪಾವತಿಸಿದ್ದರೆ, ಉಳಿದ ₹ 4.40 ಲಕ್ಷ ಬಾಕಿ ಹಣವನ್ನು ಉಳಿಸಿಕೊಂಡಿದ್ದಾರೆ. ಗುತ್ತಿಗೆ ಹಣ ಸಂಪೂರ್ಣ ಪಾವತಿಸದ್ದರೂ ಮೀರಸಾಬ್ ಅವರು ಕಳೆದ ಏ.1 ರಿಂದ ದಿನದ ಸಂತೆಯಲ್ಲಿ ಸಣ್ಣ ವ್ಯಾಪಾರಿಗಳು, ರೈತರಿಂದ ಶುಲ್ಕ ವಸೂಲಿ ಮಾಡುತ್ತಿರುವುದು ಪುರಸಭೆ ಗಮನಕ್ಕೂ ಇದೆ. ಆದರೆ ಹರಾಜು ಪ್ರಕ್ರಿಯೆ ಮುಗಿದು 9 ತಿಂಗಳು ಕಳೆದರೂ ಗುತ್ತಿಗೆದಾರರಿಂದ ಹರಾಜಿನ ಮೊತ್ತ ವಸೂಲಿ ಮಾಡಲು ಪುರಸಭೆ ಮುಂದಾಗಿಲ್ಲ.
ಈ ಕುರಿತು ಪ್ರತಿಕ್ರಿಯಿಸಿದ ಗುತ್ತಿಗೆದಾರ ಮೀರಸಾಬ್, ಹಣ ಪಾವತಿಸಲಾಗಿದೆ ಎಂದು ಹೇಳಿದರೆ, ಮೀರಸಾಬ್ ಅವರಿಂದ ಬಾಕಿ ಮೊತ್ತ ಪಾವತಿಯಾಗಿಲ್ಲ ಎಂದು ಪುರಸಭೆ ಕಂದಾಯ ಶಾಖೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲಾಡಳಿತಕ್ಕೆ ದೂರು
ಹರಾಜಿನ ಹಣ ಪಾವತಿ ಮಾಡದಿದ್ದರೂ ದಿನದ ಸಂತೆಯಲ್ಲಿ ಸ್ಥಳ ಶುಲ್ಕ ವಸೂಲಿಗೆ ಅವಕಾಶ ನೀಡುವ ಮೂಲಕ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಪುರಸಭೆಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಪಟ್ಟಣದ ನಿವಾಸಿ ಮರಿಯಪ್ಪ ಹಕ್ಕಲ ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗುತ್ತಿಗೆದಾರರ ಜತೆ ಮುಖ್ಯಾಧಿಕಾರಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೂರ್ಣ ಹಣ ಪಾವತಿಸುವಂತೆ ಗುತ್ತಿಗೆದಾರ ಮೀರಸಾಬ್ ಅವರಿಗೆ ಸೂಚಿಸಲಾಗಿದೆ. ನೋಟಿಸ್ ಸಹ ನೀಡಿದ್ದೇವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು- ಡಿ.ಎನ್.ಧರಣೇಂದ್ರಕುಮಾರ, ಮುಖ್ಯಾಧಿಕಾರಿ ಕುಷ್ಟಗಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.