ADVERTISEMENT

‘ಅಂಜನಾದ್ರಿ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ’

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 15:28 IST
Last Updated 27 ಏಪ್ರಿಲ್ 2024, 15:28 IST
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದಲ್ಲಿ ಶನಿವಾರ ಬಿಜೆಪಿಯಿಂದ ನಡೆದ ಲೋಕಸಭಾ ಚುನಾವಣೆ ಬಹಿರಂಗ ಸಭೆಗೆ ಜನಪ್ರತಿನಿಧಿಗಳು ಪಾಲ್ಗೊಂಡಿರುವುದು
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದಲ್ಲಿ ಶನಿವಾರ ಬಿಜೆಪಿಯಿಂದ ನಡೆದ ಲೋಕಸಭಾ ಚುನಾವಣೆ ಬಹಿರಂಗ ಸಭೆಗೆ ಜನಪ್ರತಿನಿಧಿಗಳು ಪಾಲ್ಗೊಂಡಿರುವುದು   

ಗಂಗಾವತಿ: ‘ಕೇಂದ್ರ ಸರ್ಕಾರದಿಂದ ಐದುಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನ ತಂದು ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟವನ್ನು ಅಯೋಧ್ಯೆ, ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ, ಇಡಿ ಜಗತ್ತೇ ಅಂಜನಾದ್ರಿಯತ್ತ ತಿರುಗಿ ನೋಡುವಂತೆ ಮಾಡುತ್ತೇನೆ. ಅಂಜನಾದ್ರಿ ಅಭಿವೃದ್ದಿಗಾಗಿ ಬಿಜೆಪಿಗೆ ಮತ ನೀಡಬೇಕು’ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.

ತಾಲ್ಲೂಕಿನ ಆನೆಗೊಂದಿ ಗ್ರಾಮದ ರಂಗನಾಥ ದೇವಸ್ಥಾನದ ಮುಂಭಾಗ ಶನಿವಾರ ನಡೆದ ಲೋಕಸಭೆ ಚುನಾವಣೆ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ವಿಧಾನಸಭಾ ಚುನಾವಣೆ ವೇಳೆ ಡಬಲ್ ಬೆಡ್ ರೂಂ, ಗಾರ್ಮೆಂಟರಿ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿ ಏನೆಲ್ಲಾ ಭರವಸೆ ನೀಡಿದ್ದೇನೋ, ಅದೆಲ್ಲ ಮುಂದಿನ ದಿನಗಳಲ್ಲಿ ಶೇ 100ರಷ್ಟು ಈಡೇರಿಸುತ್ತೇನೆ. ಈ ನಿಟ್ಟಿನಲ್ಲೇ ಅನುದಾನ ತರಲು ಬಿಜೆಪಿಗೆ ಸೇರಿದ್ದೇನೆ’ ಎಂದರು.

ADVERTISEMENT

ಮಾಜಿ ಶಾಸಕ ಪರಣ್ಣ ಮುನವಳ್ಳಿ ,ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಮಾತನಾಡಿದರು.

ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಚೆನ್ನಪ್ಪ ಮಳಗಿ, ಜೆಡಿಎಸ್ ಪಕ್ಷದ ರಾಜು ನಾಯಕ, ಆನೆಗೊಂದಿ ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ, ವಿರೂಪಾಕ್ಷಪ್ಪ ಸಿಂಗನಾಳ, ಚಂದ್ರಶೇಖರ, ಸಿದ್ದರಾ ಮಸ್ವಾಮಿ, ರುದ್ರೇಶ ಡ್ಯಾಗಿ, ವಿರೂಪಾಕ್ಷಪ್ಪ, ಮನೋಹರ ಗೌಡ ಹೇರೂರು, ದುರುಗಪ್ಪ ಆಗೋಲಿ, ಚನ್ನವೀರಗೌಡ ಕೋರಿ, ಹುಲಿಗೆಮ್ಮ ನಾಯಕ ಸೇರಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

‘ಕಾಂಗ್ರೆಸ್‌ ಸಂಸ್ಕೃತಿ ಇಲ್ಲದ ಪಕ್ಷ’ ‘

ಕಾಂಗ್ರೆಸ್ ಸಂಸ್ಕೃತಿ ಸಂಸ್ಕಾರ ಇಲ್ಲದ ಪಕ್ಷ. ಇಲ್ಲಿನ ನಾಯಕರು ಸಂಸ್ಕಾರ ಹೀನವಾಗಿ ಮಾತನಾಡು ತ್ತಾರೆ. ಇದಕ್ಕೆ ಸಚಿವ ತಂಗಡಗಿ ಇಕ್ಬಾಲ್ ಅನ್ಸಾರಿ ಬಿ.ಕೆ ಹರಿಪ್ರಸಾದ್‌ ಅವರ ಮಾತುಗಳೇ ಸಾಕ್ಷಿ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಕಿಡಿ ಕಾರಿದರು. ಬಹಿರಂಗ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ‘ತಂಗಡಗಿ ಅನ್ಸಾರಿ ಚುನಾವಣೆ ಸಭೆಗಳಲ್ಲಿ ನನ್ನ ವಿರುದ್ಧ ಏಕಚವನದಲ್ಲೇ ಮಾತನಾಡುತ್ತಾರೇ ನನಗೂ ಸಹ ‘ಲೇ’ ಎಂಬ ಪದ ಬಳಸಿ ಮಾತನಾಡಲು ಬರುತ್ತೆ. ಆದರೆ ನಾನು ಮಾತಾಡಲ್ಲ ನನಗೆ ಒಂದು ಸಂಸ್ಕಾರವಿದೆ ಅವರಿಗಿಲ್ಲ’ ಎಂದರು. ಬಿ.ಕೆ ಹರಿಪ್ರಸಾದ್ ಮೋದಿ ಸಾಕಷ್ಟು ಮಂಗಳಸೂತ್ರಗಳನ್ನು ಕಿತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಬಿ.ಕೆ ಹರಿಪ್ರಸಾದ್ ಚಲಾವಣೆ ಇಲ್ಲ ನಾಣ್ಯವಿದ್ದಂತೆ. ಅವರ ಬಗ್ಗೆ ಮಾತನಾಡುವ ಅವಶ್ಯಕತೆ ನನಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.