ಕನಕಗಿರಿ: ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಗುರುವಾರ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಹಾಗೂ ಪ್ರತಿ ದೂರು ದಾಖಲಾಗಿದೆ. ಒಟ್ಟು 58 ಜನರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಾರಾಮಾರಿ
ಎರಡು ಗುಂಪುಗಳ ಜನ ಕಬ್ಬಿಣದ ಸರಳು, ಕಟ್ಟಿಗೆ, ಕಲ್ಲುಗಳನ್ನು ಹಿಡಿದುಕೊಂಡು ಹೊಡೆದಾಡಿದ್ದಾರೆ. ಯುವಕರು ಒಂದು ಸಮುದಾಯದವರ ಮನೆ, ಅಂಗಡಿಗಳಿಗೆ ತೆರಳಿ ದಾಂಧಲೆ ಮಾಡಿದ್ದು ಹತ್ತಕ್ಕೂ ಹೆಚ್ಚು ದ್ವಿ ಚಕ್ರ ವಾಹನಗಳನ್ನು ಕಲ್ಲಿನಿಂದ ಜಖಂಗೊಳಿಸಿದ್ದಾರೆ. ಜಿರಾಕ್ಸ್ ಪ್ರಿಂಟರ್ ಅನ್ನು ಬೀದಿಯಲ್ಲಿ ಬಿಸಾಕಿದ್ದಾರೆ. ಮನೆಯಲ್ಲಿರುವ ಅಲ್ಮಾರಾ ಒಡೆದು ಹಾಕಿದ್ದಾರೆ. ಗ್ರಾಮದಲ್ಲಿನ ಹಳೇ ವೈಷಮ್ಯವೇ ಘಟನೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊಕ್ಕಾಂ
ಘರ್ಷಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು ಗ್ರಾಮದಲ್ಲಿ ಇಬ್ಬರು ಡಿವೈಎಎಸ್‌ಪಿ, ಏಳು ಜನ ಸಿಪಿಐ, ಎಂಟು ಜನ ಪಿಎಸ್‌ಐ, 60ಕ್ಕೂ ಪೊಲೀಸರು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 5 ಹಾಗೂ ಕೆಎಸ್ಆರ್‌ಪಿಯ ಎರಡು ವಾಹನಗಳಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಗ್ರಾಮಕ್ಕೆ ಐಜಿಪಿ ಮನೀಷ್ ಖರ್ಬೀಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹಾಗೂ ತಹಶೀಲ್ದಾರ್ ಧನಂಜಯ ಮಾಲಗಿತ್ತಿ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಪರಿಸ್ಥಿತಿ ಶಾಂತವಾಗಿದ್ದರೂ ಬೂದಿಮುಚ್ಚಿದ ಕೆಂಡದಂತೆ ಇದೆ. ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹುಲಿಹೈದರ ಹಾಗೂ ಗ್ರಾಮದ ಎರಡು ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಘರ್ಷಣೆಯಿಂದ ಗ್ರಾಮದ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಭಯಗ್ರಸ್ತರಾಗಿದ್ದರು. ಶಾಲೆಗೆ ಬಂದಿದ್ದ ಹಲವಾರು ವಿದ್ಯಾರ್ಥಿಗಳನ್ನು ಪೊಲೀಸರ ಸಹಕಾರದಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು.
ಮೂರ್ತಿ ಪ್ರತಿಷ್ಠಾಪನೆ ಕಾರಣಕ್ಕೆ ಘರ್ಷಣೆ
‘ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ನಾಯಕ ಮತ್ತು ಮುಸ್ಲಿಂ ಸಮಾಜದ ನಡುವೆ ಘರ್ಷಣೆ ನಡೆದಿದ್ದು, ಇದು ಅತಿರೇಕಕ್ಕೆ ತಿರುಗಿದೆ. ಆದ್ದರಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ‘ ಎಂದು ಕೊಪ್ಪಳ ಉಪ ವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ತಾವು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
‘ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ಎರಡೂ ಸಮುದಾಯಗಳ ನಡುವೆ ಮೊದಲಿನಿಂದಲೂ ವೈ ಮನಸ್ಸು ಇತ್ತು. ಮೊಹರಂ ಹಬ್ಬದ ಮೂರನೇ ದಿನದ ಕಾರ್ಯಕ್ರಮದ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ. ಮುಸ್ಲಿಮರು ಗುರುವಾರ ವಿವಾದದ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಈ ವಿಷಯ ಘರ್ಷಣೆಗೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.
ಭದ್ರತೆಯಲ್ಲಿ ಅಂತ್ಯಸಂಸ್ಕಾರ
ಪಾಷವಲಿ ಮಾಳಿಗದ್ದಿ ಅವರ ಅಂತಿಮ ಸಂಸ್ಕಾರವನ್ನು ಹುಲಿಹೈದರ ಗ್ರಾಮದಲ್ಲಿ ಪೊಲೀಸ್ ಭದ್ರತೆಯಲ್ಲಿ ಮಾಡಲಾಯಿತು. ಗ್ರಾಮದಲ್ಲಿ ಮತ್ತೆ ಸಂಘರ್ಷ ನಡೆಯುವ ಆತಂಕದ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.