ADVERTISEMENT

ತುಂಗಭದ್ರ ಜಲಾಶಯದಿಂದ ನದಿಗೆ ನೀರು: ಕಂಪ್ಲಿ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:33 IST
Last Updated 22 ಅಕ್ಟೋಬರ್ 2024, 15:33 IST
   

ಗಂಗಾವತಿ (ಕೊಪ್ಪಳ): ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಟ್ಟಿದ್ದು, ಗಂಗಾವತಿ-ಕಂಪ್ಲಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಮಂಗಳವಾರ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ವಾಹನ ಸಂಚಾರ ನಿಷೇಧದಿಂದ ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರಗಿ, ಹೈದರಾಬಾದ್‌, ಮಂತ್ರಾಲಯ ಸೇರಿದಂತೆ ಪ್ರಮುಖ ನಗರಗಳಿಗೆ ಗಂಗಾವತಿ–ಕಂಪ್ಲಿ ನಡುವೆ ವಾಹನ ಸಂಪರ್ಕ ನೇರವಾಗಿ ಕಡಿತಗೊಂಡಿದೆ. ಈ ಮಾರ್ಗಗಳಿಗೆ ತೆರಳುವವರು ಈಗ ಗಂಗಾವತಿಯಿಂದ ಕಡೇಬಾಗಿಲು ಮೂಲಕ ಸುತ್ತು ಹಾಕಿ ಸಂಚರಿಸಬೇಕಾಗಿದೆ.

ಸದ್ಯ ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಹಂಪಿ ಪುರಂದರ ಮಂಟಪ, ವಿಜಯನಗರದ ಕಾಲದ ಸೇತುವೆ, ಚಕ್ರತೀರ್ಥ, ಗಣೇಶ ದೇವಾಲಯ ಬಳಿಗೆ ನೀರು ನುಗ್ಗಿವೆ.

ADVERTISEMENT

ವಿರೂಪಾಪುರ ಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗ, ಆನೆಗೊಂದಿ ಕೃಷ್ಣದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ಜಲಾವೃತವಾಗಿ ನವವೃಂದಾವನಕ್ಕೆ ತೆರಳುವ ಸಂಪರ್ಕ ಕಡಿತವಾಗಿದೆ.

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಹನುಮನಹಳ್ಳಿ, ಸಾಣಾಪುರ ಸೇರಿ ನದಿಪಾತ್ರದ ಕೆಲ ಗ್ರಾಮಗಳ ರೈತರ ಭತ್ತ, ಬಾಳೆ ತೋಟದ ಬೆಳೆಗಳಿಗೆ ನೀರು ನುಗ್ಗಿವೆ. ತುಂಗಾಭದ್ರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಬರುತ್ತಿದ್ದು, ಜಲಾಶಯದ ಭದ್ರತೆ ದೃಷ್ಟಿಯಿಂದ ನದಿಗೆ ನೀರು ಹರಿಬಿಡಲಾಗಿದೆ.

ಯಾರೂ ನದಿಪಾತ್ರದಲ್ಲಿ ಓಡಾಡಬಾರದು. ಜಾನುವಾರುಗಳನ್ನು ಮೇಯಿಸಬಾರದು ಎಂದು ನದಿ ಸಮೀಪದ ಹಳ್ಳಿಗಳಿಗೆ ಗ್ರಾಮ‌‌ ತಾಲ್ಲೂಕು ಆಡಳಿತ ಮತ್ತು ಗ್ರಾ‌ಮ ಪಂಚಾಯಿತಿಯಿಂದ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.