ಕೊಪ್ಪಳ: ‘ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಯ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಉಪಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕವಲ್ಲ, ಹೀಗಾಗಿ ಹೆಚ್ಚುವರಿ ನಾಲ್ವರನ್ನು ಡಿಸಿಎಂ ಮಾಡಿದರೂ ತಪ್ಪಿಲ್ಲ’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜುಲೈನಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದು, ವಿಸ್ತರಣೆಯಾದರೆ ನನ್ನನ್ನು ಮಂತ್ರಿ ಮಾಡುವುದಾಗಿ ತಿಳಿಸಿದ್ದಾರೆ. ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಮಾಡಬಹುದು ಅಥವಾ ಮಾಡದೆಯೂ ಇರಬಹುದು. ಹೇಳಿದಾಕ್ಷಣ ಮಾಡಲೇಬೇಕು ಎಂದೇನೂ ಇಲ್ಲ. ಆದರೆ ನನಗೆ ಸಚಿವನಾಗುವ ಭರವಸೆಯಿದೆ’ ಎಂದರು.
ಸಿದ್ದರಾಮಯ್ಯನವರೇ ಕಾಂಗ್ರೆಸ್ ಕೊನೆಯ ಮುಖ್ಯಮಂತ್ರಿ ಎನ್ನುವ ದೇವೇಗೌಡರ ವಿಚಾರಕ್ಕೆ ಪ್ರತಿಕ್ರಿಯಿಸಿ ‘ರಾಜಕೀಯವಾಗಿ ಯಾರು ಏನು ಬೇಕಾದರೂ ಮಾತನಾಡಬಹುದು. ಬಿಜೆಪಿಯವರು ಹಿಂದೆ ಕಾಂಗ್ರೆಸ್ ಕಥೆ ಮುಗಿಯಿತು ಎನ್ನುತ್ತಿದ್ದರು. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲವೇ’ ಎಂದು ಪ್ರಶ್ನಿಸಿದರು.
‘ಆರ್ಥಿಕ ಸಲಹೆಗಾರರಾಗಿ ಸರ್ಕಾರದ ವೇತನ ಹಾಗೂ ಸೌಲಭ್ಯ ಪಡೆಯುವುದಿಲ್ಲ. ಇದರು ಆರ್ಥಿಕ ಲಾಭಕ್ಕಾಗಿ ಇರುವ ಹುದ್ದೆಯಲ್ಲ, ಸೇವೆ. ಗ್ಯಾರಂಟಿ ಯೋಜನೆಗಳ ಸ್ವರೂಪ ಬದಲಾವಣೆ ಮಾಡಬೇಕಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.