ADVERTISEMENT

ಕ್ರೀಡಾ ಸೌಲಭ್ಯ ಕಲ್ಪಿಸಲು ಯಾವಾಗ ಆದ್ಯತೆ?

ಪ್ರತಿಭೆಯಿದ್ದರೂ ಅವಕಾಶಕ್ಕಾಗಿ ಅಲೆದಾಟ, ದುರಸ್ತಿಗೆ ಕಾದಿರುವ ತಾಲ್ಲೂಕು ಕ್ರೀಡಾಂಗಣಗಳು

ಪ್ರಮೋದ
Published 7 ನವೆಂಬರ್ 2022, 5:39 IST
Last Updated 7 ನವೆಂಬರ್ 2022, 5:39 IST
ಯಲಬುರ್ಗಾದ ತಾಲ್ಲೂಕು ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಆಸನಗಳು ಹಾಳಾಗಿರುವುದು
ಯಲಬುರ್ಗಾದ ತಾಲ್ಲೂಕು ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಆಸನಗಳು ಹಾಳಾಗಿರುವುದು   

ಕೊಪ್ಪಳ: ಕ್ರೀಡೆ ಈಗ ಕೇವಲ ಕ್ರೀಡೆಯಾಗಿ ಉಳಿದುಕೊಂಡಿಲ್ಲ. ಸುಂದರ ಭವಿಷ್ಯ ರೂಪಿಸಿಕೊಳ್ಳಲು, ದೇಶವನ್ನು ಪ್ರತಿನಿಧಿಸಿ ಕೀರ್ತಿ ತರಲು ಮತ್ತು ಜಗತ್ತೇ ಗುರುತಿಸುವಂತೆ ಆಗಲು ಉತ್ತಮ ವೇದಿಕೆಯಾಗಿದೆ. ಇದಕ್ಕೆ ತಳಮಟ್ಟದಿಂದಲೇ ತರಬೇತಿ ಹಾಗೂ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ.

ಆದರೆ, ಜಿಲ್ಲೆಯಲ್ಲಿ ಕ್ರೀಡೆಗೆ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದರಿಂದ ಜಿಲ್ಲೆಯ ಕ್ರೀಡಾಪಟುಗಳು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಪಲಾಯನ ಮಾಡುತ್ತಿದ್ದಾರೆ. ಅವರು ಅಲ್ಲಿ ದೊಡ್ಡ ಸಾಧನೆ ಮಾಡಿದರೂ ಜಿಲ್ಲೆಗೆ ಗೊತ್ತಾಗುವುದೇ ಇಲ್ಲ. ಆದ್ದರಿಂದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಸ್ಥಳೀಯವಾಗಿಯೇ ತರಬೇತಿ ಮತ್ತು ಕ್ರೀಡಾ ಸಲಕರಣೆಗಳು ಸಿಗುವಂತಾಗಬೇಕು. ಜಿಲ್ಲೆ ಮತ್ತು ತಾಲ್ಲೂಕು ಹಂತದ ಕ್ರೀಡಾಂಗಣಗಳು ಪೂರ್ಣವಾಗಿ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಕೆಯಾಗಬೇಕು.

ಕುಷ್ಟಗಿಯಲ್ಲಿ ರಾಷ್ಟ್ರೀಯ ಹಬ್ಬಗಳು, ಸರ್ಕಾರ ಸಾರ್ವಜನಿಕವಾಗಿ ಆಚರಿಸುವ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾತ್ರ ತಾಲ್ಲೂಕು ಕ್ರೀಡಾಂಗಣದ ಮುಖ್ಯದ್ವಾರಗಳು ತೆರೆದುಕೊಳ್ಳುತ್ತವೆ. ಉಳಿದ ದಿನಗಳಲ್ಲಿ ಬೀಗ ಖಾತರಿ. ಇಷ್ಟಕ್ಕೆ ಮಾತ್ರ ಸೀಮಿತಗೊಂಡಿದ್ದು ನಿಜವಾದ ಅರ್ಥದಲ್ಲಿ ಕ್ರೀಡಾಂಗಣದಿಂದ ಕ್ರೀಡಾಪಟುಗಳು ಅಥವಾ ವಿವಿಧ ಕ್ರೀಡೆಗಳಿಗೆ ಯಾವುದೇ ರೀತಿಯ ಪ್ರೋತ್ಸಾಹ ದೊರೆಯುತ್ತಿಲ್ಲ ಎನ್ನುವ ಕೊರಗು ಇಲ್ಲಿಯ ಜನರದು.

ADVERTISEMENT

ಪ್ರೇಕ್ಷಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಹೊರತುಡಿಸಿದರೆ ಕ್ರೀಡಾಂಗಣದಲ್ಲಿ ಬೇರೆ ಸೌಲಭ್ಯಗಳು ಇಲ್ಲ. ಮೈದಾನ ಇದ್ದರೂ ಹುಲ್ಲುಕಂಟಿ, ಮುಳ್ಳುಗಳು ಬೆಳೆದು ನಿಂತಿವೆ. ವಾಲಿಬಾಲ್‌, ಕಬಡ್ಡಿ, ಥ್ರೋಬಾಲ್, ಕೊಕ್ಕೊ ಹೀಗೆ ಇತರೆ ನಿರ್ದಿಷ್ಟ ಕ್ರೀಡೆಗಳಿಗೆ ಅಗತ್ಯವಾಗಿರುವ ಅಂಕಣಗಳು ಇಲ್ಲವೇ ಇಲ್ಲ. ಮಣ್ಣಿನ ಟ್ರ್ಯಾಕ್‌ ಅರ್ಧದಷ್ಟು ಮಾತ್ರ ಮಾಡಲಾಗಿದೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವಂತಿದ್ದರೂ ಹೆಸರಿಗೆ ಮಾತ್ರ ಕ್ರೀಡಾಂಗಣ ಇದೆ. ಸಿಂಥೆಟಿಕ್‌ ಮೈದಾನ ಬೇಡಿಕೆಗೆ ಕ್ರೀಡಾ ಇಲಾಖೆ ಗಮನಹರಿಸಿಲ್ಲ. ಇನ್ನು ಕೋಟ್ಯಂತರ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದ್ದು ಕಟ್ಟಡ ನಿರುಪಯುಕ್ತವಾಗಿದೆ.

ಹನುಮಸಾಗರ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ 5 ಶಾಲೆಗಳಿದ್ದು, ಈ ಆವರಣದಲ್ಲಿ ನರೇಗಾ ಯೋಜನೆಯಡಿ ₹ 10 ಲಕ್ಷ ವೆಚ್ಚದಲ್ಲಿ ಮೈದಾನ ಅಭಿವೃದ್ಧಿ ಮಾಡಲಾಗಿದೆ. ಈ ಮೊದಲು ಕ್ರೀಡಾಂಗಣದಲ್ಲಿ ಕ್ರಿಕೆಟ್, ಟಗರಿನ ಕಾಳಗ, ಕಬಡ್ಡಿ ಸ್ಪರ್ಧೆಗಳು ನಡೆಯುತ್ತಿದ್ದವು. ಈಗ 200 ಮೀಟರ್‌ ಓಟದ ಟ್ರ್ಯಾಕ್‌, ಕೊಕ್ಕೊ, ಕಬಡ್ಡಿ, ವಾಲಿಬಾಲ್‌, ಬಾಲ್‌ ಬ್ಯಾಡ್ಮಿಂಟನ್‌ ಅಂಕಣ ಮಾಡಲಾಗಿದೆ.

ಗಂಗಾವತಿ ತಾಲ್ಲೂಕು ಕ್ರೀಡಾಂಗಣ ವಿಸ್ತಾರವಾಗಿದ್ದರೂ ಮೂಲ ಸೌಲಭ್ಯಗಳ ವ್ಯವಸ್ಥೆ ಮಾತ್ರ ಇಲ್ಲ. ಮೈದಾನದಲ್ಲಿ ಹಾಗೂ ಅದರ ಸುತ್ತಮುತ್ತಲೂ ಮುಳ್ಳು ಕಂಟಿಗಳು ಬೆಳೆದಿದ್ದು, ಯುವಜನತೆಗೆ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಮೈದಾನ ಕುರಿ, ಮೇಕೆ, ಬಿಡಾಡಿ ದನಗಳಿಗೆ ನಿವಾಸ ಹಾಗೂ ಮೇಯುವ ಸ್ಥಳವಾಗಿದೆ. ಹಾಗೇ ಮೈದಾನದಲ್ಲಿ ಎಲ್ಲೆಂದರಲ್ಲೆ ಗುಟ್ಕ, ಸಿಗರೇಟ್, ಮದ್ಯದ ಬಾಟಲಿ ಕಾಣಸಿಗುತ್ತವೆ.

ಕೊಪ್ಪಳ ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರ ಅಳವಂಡಿಯಲ್ಲಿಯೂ ಸೌಲಭ್ಯಗಳದ್ದೇ ಕೊರತೆ. ಕ್ರೀಡೆಗೆ ಪೂರಕವಾದ ವಾತಾವರಣವಿಲ್ಲ. ಶಾಲಾ ಮೈದಾನದಲ್ಲಿ ಕೊಕ್ಕೊ, ಕಬಡ್ಡಿ ಮಾತ್ರ ಆಡಲಾಗುತ್ತದೆ. ಗುಂಪು ಆಟಗಳನ್ನು ಆಡಲು ಗ್ರಾಮದ ಸುತ್ತಲಿನ ರೈತರ ಜಮೀನುಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.

ಕಾಯಕಲ್ಪಕ್ಕೆ ಕಾಯ್ದಿರುವ ಕ್ರೀಡಾಂಗಣ: ಯಲಬುರ್ಗಾದಲ್ಲಿ 15 ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವ ತಾಲ್ಲೂಕು ಕ್ರೀಡಾಂಗಣ ಈಗ ಸಂಪೂರ್ಣ ಅವಸಾನದತ್ತ ಸಾಗಿದ್ದು, ಕಾಯಕಲ್ಪಕ್ಕೆ ಎದುರು ನೋಡುತ್ತಿದೆ.

ಮೈದಾನದಲ್ಲಿ ಕುಡಿಯುವ ನೀರು, ವಿದ್ಯುತ್ ಸೌಲಭ್ಯವಿಲ್ಲ. ಪ್ರೇಕ್ಷಕರು ಕೂಡುವ ಮೆಟ್ಟಿಲುಗಳು ಬಹುತೇಕ ಕಿತ್ತು ಹೋಗಿವೆ. ಮಳೆ ಬಂದರೆ ಕ್ರೀಡಾ ಮೈದಾನ ಸಂಪೂರ್ಣ ಕೆಸರುಗದ್ದೆಯಂತಾಗುತ್ತದೆ. ಟ್ರ್ಯಾಕ್ ಸೌಲಭ್ಯ, ಕಾಂಪೌಂಡ್‌ ನಿರ್ಮಿಸಿಲ್ಲ.

ಐದು ವರ್ಷಗಳಿಂದಲೂ ದುರಸ್ತಿಗೆ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಳಜಿ ತೋರುತ್ತಿಲ್ಲ, ನಿರ್ಲಕ್ಷ್ಯತನದಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬುದು ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಕ್ರೀಡಾ ಸೌಲಭ್ಯಗಳ ಕೊರತೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕಿ ನಿರ್ದೇಶಕಿ ಗ್ರೇಸಿ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಹೊಸ ತಾಲ್ಲೂಕುಗಳಿಗೆ ಇಲ್ಲ ಮೈದಾನ

ಕನಕಗಿರಿ ತಾಲ್ಲೂಕು ರಚನೆಯಾಗಿ ಐದು ವರ್ಷಗಳಾದರೂ ತಾಲ್ಲೂಕು ಕ್ರೀಡಾಂಗಣವಿಲ್ಲದೆ ಕ್ರೀಡಾಪಟುಗಳು ಖಾಸಗಿ ವ್ಯಕ್ತಿಗಳ ಬೀಳು ಬಿಟ್ಟ ಹೊಲ ಹಾಗೂ ಇಲ್ಲಿನ‌ ಪಿಯು ಕಾಲೇಜಿನ ಮೈದಾನ ಅವಲಂಭಿಸಿದ್ದಾರೆ.

ಆರೇಳು ವರ್ಷಗಳಿಂದಲೂ ಕ್ರೀಡಾಂಗಣ ನಿರ್ಮಾಣದ ವಿಷಯ ಚರ್ಚೆಯಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪ್ರತಿ ವರ್ಷ ಕನಕಗಿರಿ ಪ್ರೀಮಿಯರ್ ಲೀಗ್ ಹಾಗೂ ಸರ್ಕಾರಿ ನೌಕರರ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಪ್ರತ್ಯೇಕವಾಗಿ ಇಲ್ಲಿನ‌ ಪಿಯು ಕಾಲೇಜಿನ ಮೈದಾನದಲ್ಲಿ ನಡೆಯುತ್ತಿದ್ದರೂ ಉದ್ಘಾಟನೆಗೆ ಬರುವ ಜನಪ್ರತಿನಿಧಿಗಳು ಕ್ರೀಡಾಂಗಣ ‌ಕುರಿತು ಚಕಾರ ಎತ್ತದಿರುವುದು ಕ್ರೀಡಾಪಟು ಹಾಗೂ ಕ್ರೀಡಾಭಿಮಾನಿಗಲ್ಲಿ ಬೇಸರ ಮೂಡಿಸಿದೆ.

ಎಪಿಎಂಸಿ ಗೋಧಾಮ, ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಒಳಾಂಗಣ ಕ್ರೀಡೆಗಳನ್ನು ಆಡುತ್ತಿರುವುದು ಕಂಡು ಬಂದಿದೆ.

ಕಾರಟಗಿ ತಾಲ್ಲೂಕು ಕೇಂದ್ರವಾದರೂ ಕ್ರೀಡಾಂಗಣ ನಿರ್ಮಿಸಿಲ್ಲ. ಕರ್ನಾಟಕ ಪಬ್ಲಿಕ್‌ ಶಾಲೆಯ ಸಿದ್ದೇಶ್ವರ ರಂಗಮಂದಿರದ ಆವರಣವನ್ನೇ ಕ್ರೀಡಾ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಇದೇ ಆವರಣ ರಾಜಕೀಯ, ಆಧ್ಯಾತ್ಮಿಕ, ರಾಷ್ಟ್ರೀಯ ಉತ್ಸವಗಳು ಮತ್ತಿತರ ಉದ್ದೇಶಕ್ಕೂ ಬಳಸಲಾಗುತ್ತಿದೆ. ಕುಕನೂರಿನಲ್ಲಿಯೂ ಮೈದಾನದ ಕೊರತೆ ಕಾಡುತ್ತಿದೆ.

ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದಾರೆ. ಅವರಿಗೆ ಕ್ರೀಡಾಂಗಣ ಸೌಲಭ್ಯ ಮತ್ತು ತರಬೇತುದಾರರು ಇಲ್ಲದೆ ತೊಂದರೆಯಾಗುತ್ತಿದೆ. ಗ್ರಾಮೀಣ ಭಾಗದ ಪ್ರತಿಭೆಗಳು ಮುಖ್ಯ ವಾಹಿನಿಗೆ ಬರಲು ಕ್ರೀಡಾಂಗಣದ ಅವಶ್ಯಕತೆ ಇದೆ.
ಬಸವರಾಜ ತಳಕಲ್, ಕ್ರೀಡಾ ಪ್ರೇಮಿ, ಅಳವಂಡಿ

ಗಂಗಾವತಿ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ ಸಂಸ್ಥೆ ವಾರದಲ್ಲಿ ಎರಡು ಬಾರಿ ಕ್ರಿಕೆಟ್ ಟೂರ್ನಿ ನಡೆಸುತ್ತದೆ. ಮೈದಾನದಲ್ಲಿ ಹುಲ್ಲು ಬೆಳೆದು, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿ, ಕುಡುಕರ ತಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು.
ಗುರುಕಿರಣ, ಕ್ರೀಡಾಪಟು, ಗಂಗಾವತಿ ಇನ್‌ಸ್ಟಿಟ್ಯೂಟ್‌ ಆಫ್ ಕ್ರಿಕೆಟ್ ಸಂಸ್ಥೆ

ಆಸನಗಳ ವ್ಯವಸ್ಥೆ ಕಲ್ಪಿಸುವುದು, ಮಳೆನೀರು ಹೊರಗಡೆ ಸುಗಮವಾಗಿ ಹರಿದುಹೋಗಲು ವ್ಯವಸ್ಥೆ ಮಾಡುವುದು, ಸುತ್ತಲೂ ತಡೆಗೋಡೆ ನಿರ್ಮಿಸಿ ಅಭಿವೃದ್ಧಿಗೊಳಿಸುವುದರ ಜೊತೆಗೆ ಸಮರ್ಪಕವಾದ ನಿರ್ವಹಣೆಗೆ ಕ್ರಮಕೈಗೊಳ್ಳಬೇಕಾಗಿದೆ.
ಖುರ್ಷಿದ್‍ಅಲಿ ನೀಲಗಾರ, ಕ್ರೀಡಾಪಟು, ಯಲಬುರ್ಗಾ

ಕಾರಟಗಿ ತಾಲ್ಲೂಕು ಕೇಂದ್ರವಾದರೂ ಕ್ರೀಡಾಂಗಣವಿಲ್ಲದಿರುವುದು ದುರದೃಷ್ಟಕರ. ಕ್ರೀಡಾಂಗಣ, ಕ್ರೀಡಾ ಇಲಾಖೆ ಕಚೇರಿ, ಕ್ರೀಡೆಗಳ ತರಬೇತಿ ವ್ಯವಸ್ಥೆ, ಆರ್ಥಿಕವಾಗಿ ಅಶಕ್ತರಾದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆತರೆ ಮಾತ್ರ ಸಾಧನೆ ಮಾಡಲು ಸಾಧ್ಯ.
ಚನ್ನಕುಮಾರ ಕೊಟಗಿ, ಕ್ರೀಡಾಪಟು, ಕಾರಟಗಿ.

ಕ್ರೀಡಾಭಿಮಾನದ ಕೊರತೆಯಿಂದ ಕನಕಗಿರಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಪಟ್ಟಣದಲ್ಲಿ ಒಳ ಕ್ರೀಡಾಂಗಣ ಸಮಸ್ಯೆ ಇದೆ. ಕ್ರೀಡಾ ಸಾಮಗ್ರಿಗಳು ಸಹ ಸಿಗದಿರುವುದು ನೋವು ತಂದಿದೆ.
ಕಲ್ಲೇಶ ಅಕ್ಕನವರ್, ಕ್ರೀಡಾಪಟು ಕನಕಗಿರಿ

ಪೂರಕ ಮಾಹಿತಿ:ನಾರಾಯಣರಾವ್‌ ಕುಲಕರ್ಣಿ, ಕೆ. ಮಲ್ಲಿಕಾರ್ಜುನ, ಎನ್‌. ವಿಜಯ, ಮೆಹಬೂಬ ಹುಸೇನ್, ಜುನಸಾಬ ವಡ್ಡಟ್ಟಿ, ಉಮಾಶಂಕರ ಹಿರೇಮಠ, ಕಿಶನ್‌ರಾವ್‌ ಕುಲಕರ್ಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.