ADVERTISEMENT

ಕೊಪ್ಪಳದ ನೂತನ ಸಂಸದ ಯಾರು?

ಲೋಕಸಭಾ ಚುನಾವಣೆಯ ಮತ ಎಣಿಕೆ ಇಂದು, ಮಧ್ಯಾಹ್ನದ ಒಳಗೆ ಸ್ಪಷ್ಟ ಫಲಿತಾಂಶ, ಜಿಲ್ಲೆಯಾದ್ಯಂತ ಪೊಲೀಸ್‌ ಸರ್ಪಗಾವಲು

ಪ್ರಮೋದ
Published 4 ಜೂನ್ 2024, 4:29 IST
Last Updated 4 ಜೂನ್ 2024, 4:29 IST
ಮತ ಎಣಿಕೆ ನಡೆಯಲಿರುವ ಕೊಪ್ಪಳದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿಗೆ ಸೋಮವಾರ ಚುನಾವಣಾ ಸಾಮಾನ್ಯ ವೀಕ್ಷಕರಾದ ಹೇಮ ಪುಷ್ಪಶರ್ಮಾ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಎಸ್‌ಪಿ ಯಶೋಧಾ ವಂಟಗೋಡಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಹಾಜರಿದ್ದರು
ಮತ ಎಣಿಕೆ ನಡೆಯಲಿರುವ ಕೊಪ್ಪಳದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿಗೆ ಸೋಮವಾರ ಚುನಾವಣಾ ಸಾಮಾನ್ಯ ವೀಕ್ಷಕರಾದ ಹೇಮ ಪುಷ್ಪಶರ್ಮಾ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಎಸ್‌ಪಿ ಯಶೋಧಾ ವಂಟಗೋಡಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಹಾಜರಿದ್ದರು   

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಗೆಲುವಿನ ಹಾರ ಯಾರಿಗೆ ಸಿಗಲಿದೆ ಎಂದು ಒಂದು ತಿಂಗಳಿಂದ ಕಾಯುತ್ತಿದ್ದ ಜನರ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಮುಂದಿನ ಐದು ವರ್ಷಗಳ ಕಾಲ ಈ ಕ್ಷೇತ್ರದ ಸಂಸದ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೂ ಉತ್ತರ ಸಿಗಲಿದೆ.

ಇದಕ್ಕಾಗಿ ಇಲ್ಲಿನ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಮೇ 7ರಂದು ನಡೆದಿದ್ದ ಲೋಕಸಭಾ ಚುನಾವಣೆಯ ಮತ ಎಣಿಕ ಮಂಗಳವಾರ ನಡೆಯಲಿದ್ದು, ಸೋಲು ಗೆಲುವಿನ ಹಾಗೂ ಮತ ಗಳಿಕೆಗೆ ನಾನಾ ಲೆಕ್ಕಾಚಾರಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರ ಜಿಲ್ಲೆಯ ಕೊಪ್ಪಳ, ಯಲಬುರ್ಗಾ, ಕನಕಗಿರಿ, ಗಂಗಾವತಿ, ಕುಷ್ಟಗಿ, ರಾಯಚೂರು ಜಿಲ್ಲೆಯಲ್ಲಿ ಮಸ್ಕಿ, ಸಿಂಧನೂರು ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಂದಿದೆ. ಈ ಎಲ್ಲ ಕ್ಷೇತ್ರಗಳಿಂದ ಒಟ್ಟು 18,66,397 ಮತದಾರರು ಇದ್ದು 2045 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಆಗಿದ್ದ ಶೇ 68.41ಕ್ಕಿಂತಲೂ ಈ ಸಲ ಹೆಚ್ಚಿನ ಪ್ರಮಾಣದಲ್ಲಿ (ಶೇ 70.99) ಮತದಾನವಾಗಿದೆ. ಈ ಎಲ್ಲ ಮತಗಳು ಕಣದಲ್ಲಿರುವ 19 ಜನ ಅಭ್ಯರ್ಥಿಗಳ ಭವಿಷ್ಯ ಈಗ ನಿರ್ಧಾರವಾಗಲಿದೆ.

ADVERTISEMENT

ಕಣದಲ್ಲಿ 19 ಜನ ಅಭ್ಯರ್ಥಿಗಳಿದ್ದರೂ ಮುಖ್ಯವಾಗಿ ಸ್ಪರ್ಧೆ ಇರುವುದು ಬಿಜೆಪಿಯ ಡಾ.ಬಸವರಾಜ ಕ್ಯಾವಟರ್‌ ಮತ್ತು ಕಾಂಗ್ರೆಸ್‌ ಪಕ್ಷದ ರಾಜಶೇಖರ ಹಿಟ್ನಾಳ ಅವರ ನಡುವೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಸಂಸದರಾಗಿದ್ದ ಸಂಗಣ್ಣ ಕರಡಿ ಈ ಬಾರಿ ಕಾಂಗ್ರೆಸ್‌ ಪಾಳೆಯ ಸೇರಿದ್ದು, ಗ್ಯಾರಂಟಿ ಯೋಜನೆಗಳ ಲೆಕ್ಕಾಚಾರ, ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದು ಮತ್ತು ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋತ ಅನುಕಂಪ ಈ ಎಲ್ಲ ಲೆಕ್ಕಾಚಾರಗಳು ನಮ್ಮ ಪಾಲಿಗೆ ವರವಾಗಬಹುದು ಎನ್ನುವ ನಿರೀಕ್ಷೆ ಕಾಂಗ್ರೆಸ್‌ ಪಾಳೆಯದಲ್ಲಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್‌ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಹಿಂದಿನ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಪ್ರಭಾವ, ಬೂತ್‌ ಮಟ್ಟದಿಂದ ಹೊಂದಿರುವ ಕಾರ್ಯಕರ್ತರ ಪಡೆ ನಮ್ಮ ಗೆಲುವಿಗೆ ಕಾರಣವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮೋದಿಯ ಪ್ರಭಾವ ಕ್ಷೇತ್ರದಾದ್ಯಂತ ಗುಪ್ತವಾಗಿ ಕೆಲಸ ಮಾಡಿದೆ ಎನ್ನುವ ವಿಶ್ವಾಸ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರದ್ದು.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ ಪುರುಷರೇ ಹೆಚ್ಚಿನ ಪ್ರಮಾಣದಲ್ಲಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ಒಟ್ಟು 9,46,763 ಮಹಿಳಾ ಮತದಾರರ ಪೈಕಿ 6,55,275 ಮತ ಚಲಾಯಿಸಿದರೆ, 9,19,499 ಪುರುಷ ಮತದಾರರ ಪೈಕಿ 6,69,583 ಮತದಾನ ಮಾಡಿ ಅಗ್ರಸ್ಥಾನದಲ್ಲಿದ್ದಾರೆ. ಇದು ಕೂಡ ಫಲಿತಾಂಶವನ್ನು ನಿರ್ಧರಿಸುತ್ತದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ರಾಜಶೇಖರ ಹಿಟ್ನಾಳ ಸತತ ಎರಡನೇ ಬಾರಿಗೆ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಮೊದಲ ಬಾರಿಗೆ ಚುನಾವಣಾ ಅಗ್ನಿಪರೀಕ್ಷೆಗೆ ಒಳಗಾಗಿದ್ದಾರೆ. ಹೀಗಾಗಿ ಯಾರೇ ಗೆದ್ದರೂ ಮೊದಲ ಬಾರಿಗೆ ರಾಷ್ಟ್ರದ ರಾಜಧಾನಿಯಲ್ಲಿ ಸಂಸತ್ತು ಪ್ರವೇಶಿಸುವ ಅವಕಾಶ ಪಡೆದುಕೊಳ್ಳಲಿದ್ದಾರೆ.

ಡಾ. ಬಸವರಾಜ ಕ್ಯಾವಟರ್‌
ರಾಜಶೇಖರ ಹಿಟ್ನಾಳ

ಯಾರೇ ಗೆದ್ದರೂ ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶದ ಅವಕಾಶ ಕಾರ್ಯಕರ್ತರು, ಮುಖಂಡರಿಂದ ಸೋಲು ಗೆಲುವಿನ ಲೆಕ್ಕಾಚಾರ   ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ

ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೆಲಸಕ್ಕೆ ತಕ್ಕಷ್ಟು ಸಿಬ್ಬಂದಿಯನ್ನೂ ನಿಯೋಜಿಸಲಾಗಿದ್ದು ಆದಷ್ಟು ಬೇಗನೆ ಫಲಿತಾಂಶ ಕೊಡಲು ಅವರೆಲ್ಲರೂ ಕೆಲಸ ಮಾಡುವರು.

-ನಲಿನ್‌ ಅತುಲ್‌ ಜಿಲ್ಲಾಧಿಕಾರಿ ಕೊಪ್ಪಳ

ಚುನಾವಣಾ ವೀಕ್ಷಕರಿಂದ ಪರಿಶೀಲನೆ ಕೊಪ್ಪಳ: ಇಲ್ಲಿನ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾದ ಹೇಮ ಪುಷ್ಪಶರ್ಮಾ ಅವರು ಸೋಮವಾರ ಮತ ಎಣಿಕಾ ಕೇಂದ್ರಕ್ಕೆ ಭೇಟಿ ಪರಿಶೀಲಿಸಿದರು. ಕೇಂದ್ರದಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಮಾಧ್ಯಮ ಕೇಂದ್ರ ಭದ್ರತಾ ಕೊಠಡಿಗಳು ಸಿ.ಸಿ.ಟಿ.ವಿ. ಕ್ಯಾಮೆರಾ ವ್ಯವಸ್ಥೆ ಬ್ಯಾರಿಕೇಡಿಂಗ್ ವ್ಯವಸ್ಥೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ವಾಹನಗಳ ಸಂಚಾರ ದಟ್ಟಣೆ ತಡೆಯಲು ವಿವಿಧ ಕಡೆಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಇದ್ದರು.

- ನಾವೇ ಗೆಲ್ಲುತ್ತೇವೆ; ಪೋಸ್ಟರ್‌ ಹರಿಬಿಟ್ಟ ಕಾರ್ಯಕರ್ತರು ಮತದಾನದ ಮರುದಿನದಿಂದಲೂ ಯಾರು ಗೆಲ್ಲುತ್ತಾರೆ ಎನ್ನುವ ಚರ್ಚೆ ಕ್ಷೇತ್ರದಾದ್ಯಂತ ಜೋರಾಗಿದ್ದರೂ ಎಲ್ಲ ಏಳು ಹಂತಗಳ ಮತದಾನ ಪೂರ್ಣಗೊಂಡ ಬಳಿಕ ಚರ್ಚೆ ಚುರುಕು ಪಡೆದುಕೊಂಡಿದೆ. ಮತದಾನೋತ್ತರ ಸಮೀಕ್ಷೆ ಬಹಿರಂಗವಾದ ನಂತರ ಚರ್ಚೆ ಮತ್ತಷ್ಟು ಜೋರಾಗಿದೆ. ಸೋಮವಾರದಿಂದಲೇ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರು ’ಕೊಪ್ಪಳದಲ್ಲಿ ಈ ಸಲ ನಮ್ಮದೇ ಆಡಳಿತ’ ಎನ್ನುವ ಸಂದೇಶ ಹಾಕಿದ್ದಾರೆ. ಇನ್ನೂ ಕೆಲವರು ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ಅಂತರ ಒಂದು ಲಕ್ಷ ದಾಟಲಿದೆ ಎನ್ನುವ ಪೋಸ್ಟರ್‌ ಹಾಕಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.