ಕುಷ್ಟಗಿ: ತಾಲ್ಲೂಕಿನ ಮುದೇನೂರು ಬೆಂಚಮಟ್ಟಿ ಗ್ರಾಮದ ಬಳಿ ನವಿಲುವನ್ಯಜೀವಿ ಧಾಮ ನಿರ್ಮಿಸುವಂತೆ ಗ್ರಾಮಸ್ಥ ಹುಸೇನಪ್ಪ ಹಿರೇಮನಿ ಅರಣ್ಯ ಇಲಾಖೆಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.
ಈ ಕುರಿತು ಇಲ್ಲಿಯ ಪ್ರಾದೇಶಿಕ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ ಅವರು, ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆಂಚಮಟ್ಟಿ ಸೇರಿದಂತೆ ಸುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ನವಿಲುಗಳು ಬಹಳಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಅದೇ ರೀತಿ ತೋಳ, ಕತ್ತೆಕಿರುಬ, ಕಾಡುಹಂದಿ, ಜಿಂಕೆ ಹೀಗೆ ಇನ್ನೂ ಅನೇಕ ಬಗೆಯ ವನ್ಯಜೀವಿಗಳು ಇವೆ.ಅವುಗಳ ರಕ್ಷಣೆ ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಆದರೆ ಸೂಕ್ತ ರಕ್ಷಣೆ ಇಲ್ಲದ ಕಾರಣ ಹಲವು ಪ್ರಾಣಿ, ಪಕ್ಷಿಗಳು ಅಕ್ರಮ ಬೇಟೆಗಾರರ ಪಾಲಾಗುತ್ತಿದ್ದು ವಿವಿಧ ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ. ನವಿಲುಧಾಮ ಅಥವಾ ವನ್ಯಜೀವಿ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡರೆ ಅಕ್ರಮ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ವನ್ಯಜೀವಿ ಸಂರಕ್ಷಿತ ಪ್ರದೇಶವನ್ನಾಗಿಸುವುದಕ್ಕೆ ಬೆಂಚಮಟ್ಟಿ ಸೀಮಾಂತರದಲ್ಲಿ ಕಂದಾಯ ಇಲಾಖೆಗೆ ಸೇರಿದ ಸುಮಾರು 56 ಎಕರೆ ಜಮೀನು ಲಭ್ಯವಿದ್ದು ಈ ಪ್ರದೇಶದಲ್ಲಿ ವನ್ಯಜೀವಿಧಾಮ ನಿರ್ಮಾಣ ಮಾಡಲು ಸಾಧ್ಯವಿದೆ. ಈ ವಿಷಯದಲ್ಲಿ ಅರಣ್ಯ ಇಲಾಖೆ ಮುತುವರ್ಜಿವಹಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಪ್ರಾದೇಶಿಕ ಅರಣ್ಯಾಧಿಕಾರಿ ಅನ್ವರ್, ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.