ADVERTISEMENT

ನರಿ. ತೋಳ ಧಾಮ ಇದ್ದರೂ ಸುರಕ್ಷತೆ ಕೊರತೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:19 IST
Last Updated 19 ಏಪ್ರಿಲ್ 2021, 4:19 IST
ಕುಷ್ಟಗಿ ತಾಲ್ಲೂಕಿನಲ್ಲಿ ಈಚೆಗೆ ಕಾಣಿಸಿಕೊಂಡಿದ್ದ ವಿಶೇಷ ತಳಿಯ ನರಿ 
ಕುಷ್ಟಗಿ ತಾಲ್ಲೂಕಿನಲ್ಲಿ ಈಚೆಗೆ ಕಾಣಿಸಿಕೊಂಡಿದ್ದ ವಿಶೇಷ ತಳಿಯ ನರಿ    

ಕುಷ್ಟಗಿ:ಕುಷ್ಟಗಿಮತ್ತು ಯಲಬುರ್ಗಾ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ತೋಳ, ನರಿ, ಕತ್ತೆಕಿರುಬ, ಕಾಡು ಬೆಕ್ಕು ಸೇರಿದಂತೆ ಸಹಜ ಪರಿಸರದಲ್ಲಿ ಅಪರೂಪದ ಪ್ರಾಣಿಗಳ ಸಂತತಿ ಇದ್ದು, ಗಣಿಗಾರಿಕೆ, ಕ್ರಷರ್‌ ಘಟಕಗಳಿಂದ ಈ ಪ್ರಾಣಿಗಳ ಆವಾಸ ಸ್ಥಾನಕ್ಕೆ ಕುತ್ತು ಬಂದಿದೆ.

ಕುಷ್ಟಗಿ ತಾಲ್ಲೂಕಿನ ಮುದೇನೂರು, ಮುದ್ದಲಗುಂದಿ ಶಿರಗುಂಪಿ, ಟೆಂಗುಂಟಿ, ತೆಗ್ಗಿಹಾಳ, ಹಂಚಿನಾಳ, ಹಿರೇಮನ್ನಾಪುರ, ಲಿಂಗದಹಳ್ಳಿ, ಯಲಬರ್ತಿ ಮತ್ತಿತರ ಭಾಗಗಳಲ್ಲಿ ತೋಳಗಳು ಕಂಡುಬರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಯಲಬುರ್ಗಾ ತಾಲ್ಲೂಕಿನ ಮಂಡಲಮರಿ ಸುತ್ತಲಿನ ಕುರುಚಲು ಕಾಡಿನಲ್ಲಿ ತೋಳ, ನರಿಗಳ ಸಂಖ್ಯೆ ಹೆಚ್ಚು. ಇದು ಅವುಗಳ ಸಹಜ ಆವಾಸ ಸ್ಥಾನವಾಗಿದ್ದು, ಅನೇಕ ಕಿರುಚಿತ್ರಗಳನ್ನು ಕೂಡಾ ಇಲ್ಲಿ ನಿರ್ಮಿಸಲಾಗಿದೆ.

ಇವುಗಳ ಜತೆಗೆ ಕತ್ತೆಕಿರುಬ, ಕಾಡುಬೆಕ್ಕುಗಳು, ತೀರಾ ಅಪರೂಪದ್ದು ಎನ್ನಲಾದ ಕೊಂಬಿನಗೂಬೆ ಪಕ್ಷಿಗಳೂ ಇವೆ. ತಲ್ಲೂರು ಗ್ರಾಮದ ಬಳಿ ಜಾಕಲ್ ನರಿಗಳು ಇವೆ. ಕುಷ್ಟಗಿ ತಾಲ್ಲೂಕಿನ ಕಳಮಳ್ಳಿ ಗುಡ್ಡದಬಳಿ ಕೃಷ್ಣಮೃಗಗಳು ಕಂಡು ಬಂದಿರುವುದು ವಿಶೇಷ. ಚಿಕ್ಕನಂದಿಹಾಳ ಗ್ರಾಮದ ಸುತ್ತ ತೋಳ ಹಾಗೂ ಕತ್ತೆಕಿರುಬದ ಇರುವಿಕೆಯೂ ಪತ್ತೆಯಾಗಿದೆ ಎನ್ನುತ್ತಾರೆ ಪರಿಸರಪ್ರೇಮಿಗಳು.

ADVERTISEMENT

ದಶಕದ ಹಿಂದೆ ಹಿರೇಮನ್ನಾಪುರ ಬಳಿ ವೈಡ್‌ಲೈಫ್‌ ಸ್ವಯಂ ಸೇವಾ ಸಂಸ್ಥೆಯವರು ತಿಂಗಳಾನುಗಟ್ಟಲೇ ತೋಳಗಳ ಜೀವನಕ್ರಮದ ಬಗ್ಗೆ ಅಧ್ಯಯನ ನಡೆಸಿ ಸಾಕ್ಷ್ಯಚಿತ್ರ ತಯಾರಿಸಿದ್ದರು. ತೋಳಗಳ ಅಧ್ಯಯನಕ್ಕೆಂದೇ ಡೆಹರಡೂನ್‌ನಿಂದ ಬಂದಿದ್ದ ಸ್ವಯಂ ಸೇವಾ ಸಂಸ್ಥೆಯ ವಿದ್ಯಾರ್ಥಿಗಳು ಶಾಖಾಪುರ, ಲಿಂಗದಹಳ್ಳಿ ಸೀಮಾಂತರದಲ್ಲಿ ತೋಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು ಎಂಬುದು ತಿಳಿದುಬಂದಿದೆ.

ಮುದ್ದಲಗುಂದಿ, ಮುದೇನೂರು ಸೀಮಾಂತರದಲ್ಲಿ ತೋಳಗಳು ಇವೆ ಎಂಬುದರ ಬಗ್ಗೆ ವನ್ಯಜೀವಿ ಮಂಡಳಿಗೆ ವರದಿ ಸಲ್ಲಿಸಲಾಗಿದೆ. ಮಂಡಲಮರಿ ಮತ್ತು ಗಂಗಾವತಿ ತಾಲ್ಲೂಕಿನ ಬಂಕಾಪುರ ಬಳಿ ತೋಳ ವನ್ಯಜೀವಿ ಧಾಮ ಸ್ಥಾಪನೆಗೆ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದೆ. ಸಂರಕ್ಷಿತ ಪ್ರದೇಶ ಎಂದು ಗುರುತಿಸಿದರೆ ತೋಳಗಳ ಸಂತತಿ ಹೆಚ್ಚಳಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ಮತ್ತಿತರೆ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತದೆ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.