ಹನುಮಸಾಗರ: ಮಹಿಳೆಯರ ಸಾರಥ್ಯದಲ್ಲಿ ಗ್ರಾಮ ನೈರ್ಮಲ್ಯ ಕಾರ್ಯ ಆರಂಭವಾಗಿದ್ದು, ಸಂಜೀವಿನಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸ್ವಸಹಾಯ ಸಂಘದ ಒಕ್ಕೂಟಗಳಿಂದ ಆಸಕ್ತ ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ಚಾಲನಾ ತರಬೇತಿ ನೀಡಲಾಗಿದೆ.
ಸದ್ಯ ಈ ಚಾಲಕಿಯರು ಬೆಳಿಗ್ಗೆ ಕಸ ಸಂಗ್ರಹಕ್ಕಾಗಿ ಗ್ರಾಮದ ಬೀದಿ ಬೀದಿಗಳಲ್ಲಿ ವಾಹನ ತೆಗೆದುಕೊಂಡು ಬಂದಾಗ ಗ್ರಾಮದ ಜನರು ಅಭಿಮಾನ ವ್ಯಕ್ತಪಡಿಸುವುದರ ಜೊತೆಗೆ ಗ್ರಾಮ ಸ್ವಚ್ಛತೆಗೆ ಮುಂದಾಗಿರುವುದು ಕಂಡು ಬರುತ್ತಿದೆ.
ಸಮೀಪದ ಚಳಗೇರಿ ಗ್ರಾಮದ ಪೂರ್ಣಿಮಾ ಗುಡುಗುಡಿ ಆರಂಭದಲ್ಲಿ ವಾಹನ ಚಾಲನೆಗೆ ಮುಜುಗುರು ತೋರಿದ್ದರು, ಆದರೆ ಗ್ರಾಮಸ್ಥರ ಪ್ರೋತ್ಸಾಹದಿಂದಾಗಿ ಈಗ ಇದೀಗ ನಿರ್ಭೀತಿಯಿಂದಾಗಿ ವಾಹನ ಚಾಲನೆ ಮಾಡುತ್ತಿದ್ದಾರೆ.
ಹಸಿ, ಒಣ ಕಸ ವಿಲೇವಾರಿಗಾಗಿ ಗ್ರಾಮ ಪಂಚಾಯಿತಿಗಳು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಕಸ ಸಂಗ್ರಹಣೆಗಾಗಿ ಸ್ವಚ್ಛತಾ ವಾಹಿನಿ ವಾಹನಗಳನ್ನು ಖರೀದಿಸಿ ಹಸ್ತಾಂತರಿಸಿದ್ದಾರೆ.
ಸದ್ಯ ತಾಲ್ಲೂಕಿನ ಚಳಗೇರಾದ ಪೂರ್ಣಿಮಾ ಯಮನೂರಪ್ಪ ಗುಡುಗುಡಿ, ಮುದೇನೂರು ಸುಧಾ ಈಳಿಗೇರ, ಕಂದಕೂರು ಗ್ರಾಮದ ಸುಮಂಗಲಾ ಹಿರೇಮಠ ಸ್ವಚ್ಛತಾ ವಾಹನದ ಚಾಲಕಿಯರಾಗಿ ಕಾರ್ಯ ಆರಂಭಿಸಿದ ಮೊದಲ ಮಹಿಳೆಯರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಸಂಜೀವಿನಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಣೆ ವಹಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಸಿಬ್ಬಂದಿ ನೇಮಕ ಮಾಡಿಕೊಂಡು ತರಬೇತಿ ನೀಡಲಾಗಿದೆ ಎಂದು ಸಂಜೀವಿನಿ ಯೋಜನೆಯ ಮೇಲ್ವಿಚಾರಕ ಮಾದೇಗೌಡ ಪೊಲೀಸ್ ಪಾಟೀಲ ತಿಳಿಸಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಕಸವನ್ನು ಸಂಸ್ಕರಣೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಚಳಗೇರಾ ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪರಸ್ಪರ ಒಡಂಬಡಿಕೆಯಾಗಿದ್ದು 5 ಜನ ಸ್ವಸಹಾಯ ಸಂಘದ ಮಹಿಳೆಯರು ಪ್ರತಿನಿತ್ಯ ಕಸವನ್ನು ಪ್ರತ್ಯೇಕಿಸುವ ಕಾರ್ಯ ಮಾಡುತ್ತಿದ್ದಾರೆ.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ ಮಾಹಿತಿ ನೀಡಿ, ಸ್ವಚ್ಛ ಭಾರತ ಮಿಷನ್ ಮತ್ತು ನರೇಗಾ ಯೋಜನೆಯಡಿ ಒಗ್ಗೂಡಿಸುವಿಕೆ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ.
ವಿಲೇವಾರಿಗಾಗಿ ಸಂಜೀವಿನಿ ಯೋಜನೆಯಡಿಯಲ್ಲಿ ರಚನೆಯಾಗಿರುವ ಗ್ರಾಮ ಪಂಚಾಯತಿ ಮಟ್ಟದ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು.
**
ಆರಂಭದಲ್ಲಿ ವಾಹನ ಚಲಾಯಿಸಲು ಮುಜುಗರ ಎನಿಸುತ್ತಿತ್ತು. ಇವಾಗ ಆ ರೀತಿ ಅನ್ನಿಸುತ್ತಿಲ್ಲ. ಕಸ ಸಂಗ್ರಹಿಸಲು ನಾವು ಹೋಗುವುದು ತಡವಾದರೆ ನಮ್ಮ ಗೆಳತಿಯರು ಹಾಗೂ ಸಾರ್ವಜನಿಕರು ಫೋನ್ ಮಾಡಿ ಕೇಳುತ್ತಾರೆ.
–ಪೂರ್ಣಿಮಾ ಗುಡುಗುಡಿ, ಸುಮಂಗಲಾ ಹಿರೇಮಠ, ಸುಧಾ, ಸ್ವಚ್ಛ ವಾಹಿನಿ ವಾಹನದ ಚಾಲಕಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.