ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಹತ್ತಿ ಬೆಳೆದ ರೈತರು ಹತ್ತಿಯನ್ನು ಬಿಡಿಸಿಲು ಕೂಲಿ ಕಾರ್ಮಿಕರ ಕೊರತೆ ಎದುರಾಗಿರುವುದರಿಂದ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದ ರೈತರ ಮೊರೆ ಹೋಗಿದ್ದಾರೆ.
ತಾಲ್ಲೂಕಿನ ಸಮೀಪದ ಆಂಧ್ರ ಪ್ರದೇಶದ ಮಂತ್ರಾಲಯ, ಆದೋನಿ ಹಾಗೂ ತೆಲಂಗಾಣದ ಕೋಸಗಿ ಪ್ರದೇಶಗಳಿಂದ ಕೂಲಿ ಕಾರ್ಮಿಕರನ್ನು ಕರೆದು ತಂದು ಹತ್ತಿಯನ್ನು ಬಿಡಿಸಿಕೊಳ್ಳುತ್ತಿದಾರೆ.
3 ಸಾವಿರ ಕೂಲಿ ಕಾರ್ಮಿಕರು: ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಜನ ಕೂಲಿ ಕಾರ್ಮಿಕರು ತಮ್ಮ ಕುಟುಂಬ ಸಮೇತವಾಗಿ ಬಂದು ತಾಲ್ಲೂಕಿನ ರೋಟ್ನಡಗಿ, ವಡಗೇರಾ, ಹಾಲಗೇರಾ, ಬಿಳ್ಹಾರ, ಬೆಂಡೆಬಂಬಳಿ, ಕೋನಹಳ್ಳಿ ಗ್ರಾಮಗಳಲ್ಲಿ ಬಿಡಾರ ಹಾಕಿ ಹೂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ದಿನಕ್ಕೆ ₹1 ಸಾವಿರ ವರೆಗೆ ಗಳಿಕೆಗೆ ಅವಕಾಶ: ಇಲ್ಲಿನ ಪ್ರತಿಯೊಬ್ಬ ಕೂಲಿ ಕಾರ್ಮಿಕರು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಸುಮಾರು 1 ಕ್ವಿಂಟಲ್ ಹತ್ತಿಯನ್ನು ಬಿಡಿಸುತ್ತಾರೆ. 1 ಕೆ.ಜಿ ಹತ್ತಿ ಬಿಡಿಸಲು ಸುಮಾರು ₹10 ರಿಂದ ₹ 12 ನಿಗದಿಪಡಿಸಲಾಗಿದೆ. ಒಬ್ಬ ಕೂಲಿ ಕಾರ್ಮಿಕ ಏನಿಲ್ಲವೆಂದರೂ ದಿನಕ್ಕೆ ಸುಮಾರು ₹ 1 ಸಾವಿರ ಗಳಿಸುತ್ತಾರೆ. ಪತಿ–ಪತ್ನಿ ಇಬ್ಬರು ಸೇರಿ ದಿನ ಒಂದಕ್ಕೆ₹ 2 ಸಾವಿರದವರೆಗೂ ಗಳಿಸುತ್ತಾರೆ.
ಕುಟುಂಬ ಸಮೇತವಾಗಿ ವಲಸೆ: ಕಳೆದ ಒಂದು ತಿಂಗಳಿನಿಂದ ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ನೆಲೆಸಿರುವ ಈ ವಲಸೆ ಕೂಲಿ ಕಾರ್ಮಿಕರು, ತಮ್ಮ ಪುಟ್ಟ ಮಕ್ಕಳೊಂದಿಗೆ ಹಾಗೂ ಶಾಲೆಗೆ ಹೋಗುವ ಮಕ್ಕಳನ್ನು ತಮ್ಮ ಜತೆ ಕರೆದುಕೊಂಡು ಬಂದಿದ್ದಾರೆ. ತಾವು ಹತ್ತಿ ಬಿಡಿಸಲು ಹತ್ತಿ ಜಮೀನಿಗೆ ಹೋಗುವಾಗ ತಮ್ಮ ಕುಟುಂಬ ಸಮೇತವಾಗಿ ಜಮೀನುಗಳಿಗೆ ತೆರಳುತ್ತಾರೆ. ಮಕ್ಕಳು ಗುಡ್ಡೆ ಹಾಕಿರುವ ಹತ್ತಿ ಹಾಗೂ ಜಮೀನಿನಲ್ಲಿ ಆಟವಾಡಿದರೆ, ದೊಡ್ಡ ಮಕ್ಕಳು ತಮ್ಮ ಪಾಲಕರ ಜತೆ ಹತ್ತಿಯನ್ನು ಬಿಡಿಸುತ್ತಾರೆ.
ದಿನಚರಿ: ಬೆಳಿಗ್ಗೆ 5 ಗಂಟೆಗೆ ಎದ್ದು ಬುತ್ತಿಯನ್ನು ಕಟ್ಟಿಕೊಂಡು ಜಮೀನುಗಳಿಗೆ ಹೋಗುವ ಕೂಲಿ ಕಾರ್ಮಿಕರು, ಸಂಜೆ 7ರ ಸುಮಾರಿಗೆ ಮರಳಿ ಬಂದು ಬಿಡಾರಗಳತ್ತ ಬರುತ್ತಾರೆ. ಹತ್ತಿಯ ಸುಗ್ಗಿ ಮುಗಿಯುವವರೆಗೂ ಇಲ್ಲೆ ಇದ್ದು ನಂತರ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ.
ಸ್ಥಳೀಯ ಕಾರ್ಮಿಕರ ಹಾಗೂ ಮಕ್ಕಳು ಭಾಗಿ: ಹತ್ತಿ ಬಿಡಿಲು ಕೂಲಿ ಕಾರ್ಮಿಕರ ಸಮಸ್ಯೆ ಇರುವುದರಿಂದ ಸ್ಥಳೀಯ ಪಾಲಕರು, ತಮ್ಮ ಮಕ್ಕಳಿಗೆ ಶಾಲೆ ಬಿಡಿಸಿ ಹತ್ತಿ ಬಿಡಿಸಲು ಖಾಸಗಿ ವಾಹನಗಳಲ್ಲಿ ಜಮೀನುಗಳಿಗೆ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯು ಕಡಿಮೆಯಾಗಿದೆ. ಇದರಲ್ಲಿ ಹೆಚ್ಚಿನವರು ಬಾಲ ಕಾರ್ಮಿಕರು ಹಾಗೂ ಕಿಶೋರಾವಸ್ಥೆಯವರು ಇದ್ದಾರೆ.
‘ಹತ್ತಿ ಬೆಳೆದ ರೈತರು ನಮ್ಮ ಭಾಗದ ಕೂಲಿ ಕಾರ್ಮಿಕರನ್ನು ಹತ್ತಿ ಬಿಡಿಸಲು ಬಳಸಿಕೊಂಡರೆ, ಅವರಿಗೆ ಕೊಡುವ ಕೂಲಿಯನ್ನು ನಮ್ಮ ಕೂಲಿ ಕಾರ್ಮಿಕರಿಗೆ ಕೊಟ್ಟರೆ ಆರ್ಥಿಕವಾಗಿ ಅನುಕೂಲ ಆಗುವದರ ಜತೆಗೆ ನಮ್ಮ ಜನಕ್ಕೆ ಕೆಲಸ ಕೊಟ್ಟಂತಾಗುತ್ತದೆ’ ಎಂದು ವಡಗೇರಾ ಕೃಷಿ ಅಧಿಕಾರಿ ಗಣಪತಿ ಪ್ರತಿಕ್ರಿಯಿಸಿದರು.
ನಮ್ಮ ಭಾಗದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ಹತ್ತಿ ಹಾಳಾಗಬಹುದು ಎಂಬ ಭಯದಿಂದ ದೂರದ ಸ್ಥಳಗಳಿಂದ ಕೂಲಿ ಕಾರ್ಮಿಕರನ್ನು ಕರೆದು ತಂದು ಹತ್ತಿ ಬಿಡಿಸಿಕೊಳ್ಳುವುದು ಅನಿವಾರ್ಯವಾಗಿದೆ.-ಶರಣಪ್ಪ ಜಡಿ ಚಂದಾಸಾ ಹುಲಿ ಶರಣು ಇಟಗಿ ರೈತರು
ಮಂತ್ರಾಲಯ ಭಾಗದಲ್ಲಿ ನಮಗೆ ಸದ್ಯ ಯಾವುದೇ ಕೆಲಸವಿಲ್ಲ. ಅದಕ್ಕಾಗಿ ಹತ್ತಿ ಬಿಡಿಸಲು 30 ಕುಟುಂಬಗಳು ಕುಟುಂಬ ಸಮೇತ ವಡಗೇರಾ ಪ್ರದೇಶದತ್ತ ಬಂದಿದ್ದೇವೆ. ನಾವು 12 ಗಂಟೆ ಕೆಲಸ ಮಾಡಿದರೆ 1 ಕ್ವಿಂಟಲ್ ಹತ್ತಿ ಬಿಡಿಸುತ್ತೇವೆ.- ಲಕ್ಷ್ಮಿ ಕೂಲಿ ಕಾರ್ಮಿಕ ಮಹಿಳೆ ಮಂತ್ರಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.