ADVERTISEMENT

ಕಥೆ ಬರೆಯುವುದು ಸವಾಲಿನ ಕೆಲಸ: ಗಂಗಾವತಿ ಪ್ರಾಣೇಶ್ ಅಭಿಮತ

‘ಲಾಟರಿ ಹುಡುಗ’ ಪುಸ್ತಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 11:45 IST
Last Updated 23 ಡಿಸೆಂಬರ್ 2019, 11:45 IST
ಗಂಗಾವತಿಯ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಘವೇಂದ್ರ ಮಂಗಳೂರು ಅವರ ಲಾಟರಿ ಹುಡುಗ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು
ಗಂಗಾವತಿಯ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಘವೇಂದ್ರ ಮಂಗಳೂರು ಅವರ ಲಾಟರಿ ಹುಡುಗ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು   

ಗಂಗಾವತಿ: ‘ಕವನ ಎಲ್ಲರೂ ಬರೆಯುತ್ತಾರೆ. ಆದರೆ, ಕಥೆ ಬರೆಯುವುದು ಸವಾಲಿನ ಕೆಲಸ’ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅಭಿಪ್ರಾಯಪಟ್ಟರು.

ನಗರದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಾಘವೇಂದ್ರ ಮಂಗಳೂರು ಅವರ ‘ಲಾಟರಿ ಹುಡುಗ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕವನಗಳು ಆ ಕ್ಷಣದ ಆನಂದವನ್ನು ಕೊಟ್ಟರೆ, ಕಥೆಗಳು ಇಡೀ ಜೀವನಕ್ಕೆ ಆಗುವಷ್ಟು ಅನುಭವದ ಬುತ್ತಿಯನ್ನು ಕೊಡುತ್ತವೆ. ಹಾಗಾಗಿ ಕಥೆಗಾರನಿಗೆ ಮೂರು ʻಅʼ ಗಳು ಬಹಳ ಮುಖ್ಯ. ಅಧ್ಯಯನ, ಅರಿವು, ಅನುಭವ ಈ ಮೂರು ಇದ್ದಾಗ ಮಾತ್ರ ಯಶಸ್ವಿ ಕಥೆಗಾರನಾಗಲು ಸಾಧ್ಯ ಎಂದರು.

ADVERTISEMENT

ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಡಾ.ಆನಂದ ಋಗ್ವೇದಿ,‘ಕಥೆಯನ್ನಷ್ಟೇ ಓದುವುದಲ್ಲ. ಕಥೆಯೊಳಗಿನ ಕಥೆಯನ್ನು ಮತ್ತು ಕಥೆಯ ಕಾರಣವನ್ನು ಓದಬೇಕು. ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಕಥೆ ಬರೆಯುದಕ್ಕೆ ಸಾಧ್ಯವಾಗುತ್ತದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ,‘ಕವನ ಸಂಕಲನಗಳು ಹೆಚ್ಚು ಬಿಡುಗಡೆಯಾಗುತ್ತಿವೆ. ಹಾಗಾಗಿ ಕಥೆಗಾರರ ಸಂಖ್ಯೆ ಕಡಿಮೆಯಾಗಿದೆ ಏನೋ ಎಂಬ ಭಾವನೆ ಮೂಡಿತ್ತು. ನಗರದಲ್ಲಿ ಕಥಾ ಸಂಕಲನಗಳು ಬಿಡುಗಡೆಯಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.

ಬಳಿಕ ಹಿರಿಯ ಸಾಹಿತಿ ಲಿಂಗಾರೆಡ್ಡಿ ಪುಸ್ತಕದ ಕುರಿತು ಮಾತನಾಡಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಎಸ್.ಬಿ.ಗೊಂಡಬಾಳ್‌, ಪುಸ್ತಕದ ಲೇಖಕ ರಾಘವೇಂದ್ರ ಮಂಗಳೂರು, ಸಾಹಿತಿಗಳಾದ‌ ಡಾ.ಶರಬಸವ ಕೋಲ್ಕಾರ್, ಗುಂಡೂರು ಪವನ್‌ ಕುಮಾರ್, ಬಸವರೆಡ್ಡಿ ಆಡೂರು, ಶರಣಪ್ಪ ತಳ್ಳಿ, ಹಾಸ್ಯ ಭಾಷಣಕಾರರಾದ ಬಸವರಾಜ ಮಹಾಮನಿ ಹಾಗೂ ನರಸಿಂಹ ಜೋಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.