ADVERTISEMENT

ಅಯೋಧ್ಯೆ | ರಾಮಮಂದಿರ ನಿರ್ಮಾಣ, ಕಲಾಕೃತಿ ಕೆತ್ತನೆ: ಕೊಪ್ಪಳದ ಯುವಕನ ಕೈಚಳಕ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 14:29 IST
Last Updated 2 ಜನವರಿ 2024, 14:29 IST
ನಾಗಮೂರ್ತಿಸ್ವಾಮಿ
ನಾಗಮೂರ್ತಿಸ್ವಾಮಿ   

ಕೊಪ್ಪಳ: ಅಯೋಧ್ಯೆಯ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಲ್ಲಿ ಜ.22ರಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪಣೆ ಕಾರ್ಯಕ್ರಮ ಜರುಗಲಿದೆ. ಮಂದಿರ ನಿರ್ಮಾಣ ಮತ್ತು ಕಲಾಕೃತಿ ಕೆತ್ತನೆಯಲ್ಲಿ ಕೊಪ್ಪಳ ತಾಲ್ಲೂಕಿನ ಕಾತರಕಿ ಗುಡ್ಲಾನೂರು ಗ್ರಾಮದ ಯುವಶಿಲ್ಪಿ ನಾಗಮೂರ್ತಿಸ್ವಾಮಿ ಕೂಡ ಕೆಲಸ ಮಾಡುತ್ತಿದ್ದಾರೆ.

ಒಂದು ತಿಂಗಳಿನಿಂದ ಅಲ್ಲಿ ಕೆಲಸ ಮಾಡುತ್ತಿರುವ ನಾಗಮೂರ್ತಿ ಸ್ವಾಮಿ ಧಾರವಾಡದ ಹಿರಿಯ ಶಿಲ್ಪಿಯೊಬ್ಬರ ಮೂಲಕ ಅಲ್ಲಿಗೆ ತೆರಳಿ ರಾಮಮಂದಿರಕ್ಕಾಗಿ ಕೆಲಸ ಮಾಡುತ್ತಿರುವ ಅನೇಕ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.

ನಾಗಮೂರ್ತಿಸ್ವಾಮಿ ಒಂದು ದಶಕದಿಂದ ಶಿಲ್ಪಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿ ಕೆಲಸ ಮಾಡುವವರಿಗೆ ಮೊಬೈಲ್‌ ಬಳಕೆಗೆ ನಿಷೇಧವಿರುವ ಕಾರಣ ನೇರವಾಗಿ ಅವರು ಮಾತಿಗೆ ಲಭ್ಯರಾಗಿಲ್ಲ.

ADVERTISEMENT

ಸಹೋದರನಿಗೆ ಸಿಕ್ಕ ಅವಕಾಶದ ಬಗ್ಗೆ ಮಾತನಾಡಿದ ವಿರೂಪಾಕ್ಷಸ್ವಾಮಿ ‘ನನ್ನ ಸಹೋದರನಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಮಹಾಭಾಗ್ಯ’ ಎಂದು ಸಂತಸ ವ್ಯಕ್ತಪಡಿಸಿದರು.

ಅವರ ಸಹೋದರಿ ವೀಣಾ ಮತ್ತು ಅತ್ತಿಗೆ ರಂಜಿತಾ ‘ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಾಗಮೂರ್ತಿಸ್ವಾಮಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ. ಇಂಥ ಅವಕಾಶ ಸಿಕ್ಕಿರುವುದು ಕೆಲವರಿಗೆ ಮಾತ್ರ. ಅದರಲ್ಲಿ ನಮ್ಮ ಕುಟುಂಬ ಸದಸ್ಯರೂ ಇದ್ದಾರೆ ಎನ್ನುವುದು ವಿಶೇಷ’ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.