ಕನಕಗಿರಿ (ಕೊಪ್ಪಳ ಜಿಲ್ಲೆ): ’ಹತ್ತು ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದರೂ ಸಿಗುತ್ತಿಲ್ಲ. ಆದಷ್ಟು ಬೇಗನೆ ಕನ್ಯಾ ಹುಡುಕಿಕೊಡಿ ಸರ್...’
ಇಲ್ಲಿನ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತದ ವತಿಯಿಂದ ಬುಧವಾರ ನಡೆದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಕನಕಗಿರಿಯ ಗೌಡರ ಓಣಿ ಯುವಕ ಸಂಗಪ್ಪ ಎಂಬುವವರು ತಮಗೆ ಕನ್ಯಾ ಹುಡುಕಿಕೊಡುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರಿಗೆ ಹೀಗೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಜನರ ಆಹವಾಲು ಸ್ವೀಕರಿಸುತ್ತಿದ್ದಾಗ ವೇದಿಕೆಯತ್ತ ಬಂದ ಸಂಗಪ್ಪ, ’ರೈತ ಕುಟುಂಬದಿಂದ ಬಂದಿದ್ದೇನೆ, ಹತ್ತಾರು ವರ್ಷಗಳಿಂದಲೂ ವಧು ಅನ್ವೇಷಣೆಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದೇನೆ. ಯಾರೂ ಕನ್ಯಾ ನೀಡಲು ಮುಂದೆ ಬರುತ್ತಿಲ್ಲ, ಹೀಗಾಗಿ ಮಾನಸಿಕವಾಗಿ ನೊಂದಿದ್ದೇನೆ, ನೀವಾದರೂ ಕನ್ಯಾ ಹುಡುಕಿ ನನ್ನ ಮದುವೆಗೆ ಸಹಕರಿಸಿ’ ಎಂದು ಲಿಖಿತ ಮನವಿ ಕೊಟ್ಟರು.
‘ಮೂಲತಃ ರೈತ ಕುಟುಂಬದಿಂದ ಬಂದಿರುವೆ, ಎಸ್‌ಎಸ್‌ಎಲ್‌ಸಿ ನಂತರ ಪಟ್ಟಣದಲ್ಲಿ ಖಾಸಗಿ ಪಿಯು ಕಾಲೇಜಿನಲ್ಲಿ ಒಂದು ವರ್ಷ ಪರಿಚಾರಕನಾಗಿ ಕೆಲಸ ಮಾಡಿದ್ದೇನೆ’ ಎಂದರು.
ಈ ವಿಷಯ ಕೇಳಿ ಜಿಲ್ಲಾಧಿಕಾರಿ ಹಾಗೂ ವೇದಿಕೆ ಮೇಲಿದ್ದ ಅಧಿಕಾರಿಗಳೆಲ್ಲರೂ ನಗೆಗಡಲಲ್ಲಿ ತೇಲಿದರು. ಪತ್ರ ಓದಿದ ಜಿಲ್ಲಾಧಿಕಾರಿ ಹಾಸ್ಯಭರಿತವಾಗಿ ಮಾತನಾಡಿ ಕೆಲ ಪ್ರಶ್ನೆಗಳನ್ನು ಯುವಕನಿಗೆ ಕೇಳಿದರು. ಕೊನೆಯಲ್ಲಿ ‘ತಹಶೀಲ್ದಾರ್ ನಿಮಗೆ ಕನ್ಯಾ ಹುಡುಕಿಕೊಡುತ್ತಾರೆ’ ಎಂದು ಚಟಾಕಿ ಹಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.