ADVERTISEMENT

ಸರ್ಕಾರಿ ಸವಲತ್ತು ತಿಳಿಯದೇ 40 ವರ್ಷಗಳಿಂದ ದುಡಿಯುತ್ತಿರುವ ಹೋಟೆಲ್‌ ಕಾರ್ಮಿಕ

ಬಸವರಾಜ ಬೋಗಾವತಿ
Published 30 ಏಪ್ರಿಲ್ 2020, 19:45 IST
Last Updated 30 ಏಪ್ರಿಲ್ 2020, 19:45 IST
ಸದಾನಂದ ಶೆಟ್ಟಿ
ಸದಾನಂದ ಶೆಟ್ಟಿ   

ಮಾನ್ವಿ: ‘40 ವರ್ಷಗಳಿಂದ ಹೋಟೆಲ್‍ಗಳಲ್ಲಿ ಅಡುಗೆ ಕೆಲಸ ಮಾಡುತ್ತಾ ಬಂದಿದ್ದೇನೆ. ಹೋಟೆಲ್ ಕಾರ್ಮಿಕರ ಸಂಘಟನೆ ಮತ್ತು ಸರ್ಕಾರದಿಂದ ಯಾವುದೇ ಸವಲತ್ತುಗಳ ಬಗ್ಗೆ ಏನೂ ಹೇಳಿಲ್ಲ’ ಎಂದು ಪಟ್ಟಣದ ಹೋಟೆಲ್ ಕಾರ್ಮಿಕ ಸದಾನಂದ ಶೆಟ್ಟಿ ಸಂಕಷ್ಟ ಹೇಳಿಕೊಂಡರು.

ಪಟ್ಟಣದ ಎನ್‌ಇಕೆಆರ್‌ಟಿಸಿ ಬಸ್‌ ನಿಲ್ದಾಣದ ಕ್ಯಾಂಟೀನ್‍ನಲ್ಲಿ ಅಡುಗೆ ಕೆಲಸ ಮಾಡುವ ಸದಾನಂದ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕುಚ್ಚೂರು ಗ್ರಾಮದವರು. ತಾಯಿ, ಅತ್ತೆ, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಸ್ವಗ್ರಾಮ ಕುಚ್ಚೂರಿನಲ್ಲಿ ಇದ್ದಾರೆ.

ಮೈಸೂರು, ಬಾಗಲಕೋಟೆ, ಸುರಪುರ, ಅಥಣಿ ಸೇರಿದಂತೆ ಆಂಧ್ರ ಪ್ರದೇಶದ ಅನೇಕ ನಗರಗಳಲ್ಲಿನ ಉಡುಪಿ ಹೋಟೆಲ್ ಹಾಗೂ ಇತರ ಕ್ಯಾಂಟೀನ್‍ಗಳಲ್ಲಿ ಕೆಲಸ ಮಾಡಿದ್ದಾರೆ. ವರ್ಷಕ್ಕೆ ಎರಡು ಬಾರಿ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದ ಸದಾನಂದ ಶೆಟ್ಟಿಗೆ ಈ ಬಾರಿ ಲಾಕ್ ಡೌನ್ ಅಡ್ಡಿಯಾಗಿದೆ. ತಮ್ಮ ಸಂಬಳದಲ್ಲಿ ಮನೆ ಖರ್ಚಿಗೆಂದು ಪ್ರತಿ ತಿಂಗಳು ₹8 ಸಾವಿರ ಕಳುಹಿಸುತ್ತಿದ್ದರು. ಲಾಕ್‍ಡೌನ್ ಜಾರಿಯಿಂದ ಹೋಟೆಲ್ ಬಂದ್ ಆದ ಕಾರಣ ಕುಟುಂಬದವರಿಗೆ ಈ ಬಾರಿ ಹಣ ಕಳಿಸಲು ಸಾಧ್ಯವಾಗಿಲ್ಲ.

ADVERTISEMENT

ಮನೆಯಲ್ಲಿ ಕುಟುಂಬದ ಸದಸ್ಯರನ್ನು ಭೇಟಿಯಾಗದಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು. ಕಾರ್ಮಿಕರ ಜೀವನ ಭದ್ರತೆಗಾಗಿ ಸರ್ಕಾರದ ಸೌಲಭ್ಯಗಳನ್ನು ಇದುವರೆಗೆ ಪಡೆದಿಲ್ಲ. ಇವರಿಗೆ ಸ್ವಂತ ಮನೆಯೂ ಇಲ್ಲ. ಹೋಟೆಲ್ ಅಡುಗೆ ಕಾರ್ಮಿಕ ವೃತ್ತಿಯಲ್ಲಿ ಕುಟುಂಬ ನಿರ್ವಹಣೆ ಜತೆಗೆ ಇಬ್ಬರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಟ್ಟಿದ್ದಾರೆ. ಹಿರಿಯ ಮಗಳು ಸ್ವಾತಿ ಬಿಬಿಎ ಪದವಿ ದ್ವಿತೀಯ ವರ್ಷ ಹಾಗೂ ಕಿರಿಯ ಮಗಳು ಶೃತಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ಬುಧವಾರದಿಂದ ಲಾಕ್ ಡೌನ್ ಸಡಿಲಿಕೆಯಾಗಿ ಹೋಟೆಲ್ ಕಾರ್ಯಾರಂಭ ಮಾಡಿರುವುದು, ತಿಂಡಿ ಮತ್ತು ಊಟದ ಪಾರ್ಸಲ್‍ಗೆ ಅವಕಾಶ ಕಲ್ಪಿಸಿರುವ ಬಗ್ಗೆ ಅವರು ಸಮಾಧಾನ ವ್ಯಕ್ತಪಡಿಸಿದರು. ಕೋವಿಡ್ ರೋಗದಿಂದಾಗಿ ಹೋಟೆಲ್ ಲಾಕ್ ಡೌನ್ ಜಾರಿಯಾದ ಕಾರಣ ಜೀವನದಲ್ಲಿ ಇದೇ ಮೊದಲ ಬಾರಿಗೆ ತಿಂಗಳುಗಟ್ಟಲೆ ದುಡಿಮೆ ಇಲ್ಲದಾಗಿದೆ’ ಎಂದು ತಾಪತ್ರಯ ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.