ADVERTISEMENT

ಅಸಮರ್ಪಕ ಚರಂಡಿ ವ್ಯವಸ್ಥೆ

ನಗರ ಸಂಚಾರ

ಕೆ.ಚೇತನ್
Published 28 ಅಕ್ಟೋಬರ್ 2013, 5:01 IST
Last Updated 28 ಅಕ್ಟೋಬರ್ 2013, 5:01 IST

ಮಂಡ್ಯ: ನಗರಸಭೆಗೆ ಹೊಂದಿಕೊಂಡಂತಿರುವ, ಮಹಾವೀರ ವೃತ್ತದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆಯಿಲ್ಲದೆ ಇರುವುದರಿಂದ ಮಳೆ ಬಿದ್ದಾಗ ಇಲ್ಲಿನ ಸ್ಥಳ ಜಲಾವೃತ್ತವಾಗಿ ಈಜುಕೊಳದಂತೆ ಬದಲಾಗುತ್ತದೆ.

ಇದು, ಇತ್ತೀಚಿನ ಸಮಸ್ಯೆಯಲ್ಲ. ಬಹಳಷ್ಟು ವರ್ಷಗಳಿಂದ ಪರಿಹಾರ ಕಾಣದೇ ಉಳಿದಿರುವ ಹಳೆಯ ಸಮಸ್ಯೆ. ಮಳೆ ಬಿದ್ದರೆ, ಇಲ್ಲಿನ ರಸ್ತೆ ನೀರಿನಲ್ಲಿ ಮುಳುಗುತ್ತದೆ. ನೀರಿನ ರಭಸ ಹೆಚ್ಚಾದರೆ, ಅಂಗಡಿಗಳಿಗೂ ನುಗ್ಗುತ್ತದೆ.

ಮಳೆ ನೀರು ಸುಲಭವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದರಿಂದ ಈ ಭಾಗದ ಸುಮಾರು 100 ಮೀ. ವರೆಗಿನ ರಸ್ತೆ ನೀರಿನಲ್ಲಿ ಮುಳುಗುತ್ತದೆ. ರಸ್ತೆಯ ಮೇಲೆ ಸುಮಾರು ಮೂರ್ನಾಲ್ಕು ಅಡಿಗಳವರೆಗೆ ನೀರು ನಿಲ್ಲುತ್ತದೆ. ಪರಿಣಾಮ, ಸಂಚಾರದಲ್ಲಿ ವ್ಯತ್ಯಯ. ವ್ಯಾಪಾರಸ್ಥ­ರಲ್ಲಿ ನಡುಕವೂ ಶುರುವಾಗುತ್ತದೆ.

ವಿಶ್ವೇಶ್ವರಯ್ಯ ರಸ್ತೆ ಮೂಲಕ ಮೈಸೂರು– ಬೆಂಗಳೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಹಾವೀರ ವೃತ್ತದಲ್ಲಿ ಸಾಮಾನ್ಯ­ವಾಗಿ ಸಂಚಾರದ ಒತ್ತಡ ಹೆಚ್ಚಿರುತ್ತದೆ. ವಾಹನ­ಗಳು ನೀರಿನಲ್ಲಿ ಮುಳುಗುವುದರಿಂದ ವಾಹನ ಸವಾರರು, ಸುತ್ತಿಬಳಸಿ ಹೋಗಬೇಕಿರುವುದು ಅನಿವಾರ್ಯವಾಗಿದೆ.

ರಸ್ತೆಯ ಮಟ್ಟಕ್ಕಿಂತಲೂ ಚರಂಡಿ ಮಟ್ಟ ಸ್ವಲ್ಪ ಮೇಲಿರುವುದರಿಂದ ಮಳೆಯ ನೀರು ಸುಲಭವಾಗಿ ಮುಂದೆ ಹರಿದುಹೋಗುತ್ತಿಲ್ಲ. ಜೊತೆಗೆ, ಚರಂಡಿಯಲ್ಲಿ ತುಂಬಿರುವ ತ್ಯಾಜ್ಯವನ್ನು ತೆರವು ಮಾಡದಿರುವುದರಿಂದ ಮಳೆ ನೀರು ಒಂದೆಡೆಯೇ ಸಂಗ್ರಹವಾಗುತ್ತಿದೆ.

ಮಳೆ ಬಿದ್ದರೆ, ಅಂಚೆ ಕಚೇರಿ ಮುಂದಿನ ಚರಂಡಿ ಉಕ್ಕಿಹರಿ­ಯುತ್ತದೆ. ಈ ಕೊಳಚೆ ನೀರೂ, ರಸ್ತೆಗೆ ಇಳಿಯುತ್ತದೆ. ಸುತ್ತಲು ಕೆಟ್ಟವಾಸನೆ ಹರಡುತ್ತದೆ. ನಿಂತುಕೊಳ್ಳಲು ಆಗದ ಸ್ಥಿತಿ ನಿರ್ಮಾಣವಾಗುತ್ತದೆ.

ಇಲ್ಲಿನ ಪರಿಸ್ಥಿತಿ ಕುರಿತು ವ್ಯಾಪಾರಸ್ಥರನ್ನು ಪ್ರಶ್ನಿಸಿದರೇ, ನಗರಸಭೆ ಆಡಳಿತ, ಸದಸ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಧಿಕಾರಿಗಳು ಮತ್ತು ಸದಸ್ಯರ ಕಣ್ಣುಗಳು ಕರುಡಾಗಿದೆ ಎಂದು ಕಿಡಿಕಾರುತ್ತಾರೆ.

‘ನಗರಸಭೆಗೆ ಹೊಂದಿಕೊಂಡಿರೇ ಸ್ಥಳದಲ್ಲಿನ ಸಮಸ್ಯೆ ಬಗೆಹರಿಸಲಾಗದವರು ಇನ್ನೂ ನಗರದಲ್ಲಿನ ಸಮಸ್ಯೆಗಳಿಗೆ ಹೇಗೆ ಪರಿಹಾರ ಹುಡುಕುತ್ತಾರೆ. ಎಲ್ಲದ್ರೂ ಹೆಚ್ಚಿನ ಹಣ ಬರೋದಾದ್ರೇ ಹೇಳಿ, ಕಾಮಗಾರಿ ಮಾಡಿಸ್ತಾರೆ. ಇಲ್ಲೇಕೆ ಮಾಡಿಸ್ತಾರೆ ಸಾರ್‌. ಈ ಸಮಸ್ಯೆಯನ್ನು ನಗರಸಭೆ ಗಮನಕ್ಕೆ ತಂದು ನಮ್ಗೂ ಸಾಕಾಗಿದೆ’ ಎಂದು ಮಂಜುನಾಥ್‌, ರವಿ, ಮನುಕುಮಾರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಆಕಾಶದಲ್ಲಿ ಕಪ್ಪು ಮೋಡ ಕಟ್ಟಿದರೆ, ಇಲ್ಲಿನ ವ್ಯಾಪಾರಸ್ಥರ ಮನದಲ್ಲಿ ಆತಂಕದ ಕಾರ್ಮೋಡ ಕಟ್ಟುತ್ತದೆ. ಈಗ ಮಳೆಗಾಲ, ಮಳೆ ಸುರಿಯುವುದು ಸಾಮಾನ್ಯ. ಆತಂಕದ ಕಾರ್ಮೋಡವನ್ನು ತಿಳಿಗೊಳಿಸುವ ಕೆಲಸ ನಗರಸಭೆಯಿಂದ ಜರೂರಾಗಿ ಆಗಬೇಕು ಎನ್ನುವುದು ನಾಗರಿಕ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.