ಕೆ.ಆರ್.ಪೇಟೆ: ಮನೆಮನೆಯಲ್ಲೂ ವೈಯಕ್ತಿಕ ಶೌಚಾಲಯ, 11 ಗ್ರಾಮಗಳು ಬಯಲು ಬಹಿರ್ದೆಸೆಯಿಂದ ಮುಕ್ತ, ಬೀದಿಗಳಲ್ಲಿ ಎಲ್‌ಇಡಿ ಬಲ್ಬ್, ಕಾಂಕ್ರೀಟ್ ರಸ್ತೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಜೈವಿಕ ಎರೆಹುಳು ಘಟಕ, ಶುದ್ಧ ಕುಡಿಯುವ ನೀರಿನ ಘಟಕಗಳು, ಜಾನುವಾರುಗಳಿಗೆ ಕೊಟ್ಟಿಗೆ, ತೊಟ್ಟಿ ನಿರ್ಮಾಣ.
ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ಗ್ರಾಮಗಳಿಗೆ ನೀಡಿರುವ ಸೌಲಭ್ಯಗಳ ವಿವರಗಳಿವು. ಹೊಯ್ಸಳ ಕಾಲದ ದೇಗುಲ ಸಂಸ್ಕೃತಿಗೆ ಹೆಸರಾದ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಸತತ ನಾಲ್ಕನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ನಿಗದಿಪಡಿಸಿದ 150 ಅಂಕಗಳಲ್ಲಿ 141 ಅಂಕ ಸಾಧನೆ ಮಾಡಿರುವ ಈ ಗ್ರಾಮ ಪಂಚಾಯಿತಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿರುವುದು ವಿಶೇಷವಾದುದು.
2014-2015ರಿಂದ ಸತತವಾಗಿ ನಾಲ್ಕು ಬಾರಿ ಪ್ರಶಸ್ತಿ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ದಾಖಲೆ ನಿರ್ಮಿಸಿದೆ. ಗಾಂಧಿ ಜಯಂತಿ ಕಾರ್ಯಕ್ರಮದಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಶಸ್ತಿ ಫಲಕ ಹಾಗೂ ₹ 5 ಲಕ್ಷ ಪುರಸ್ಕಾರ ನೀಡಿ ಗೌರವಿಸಿದರು. ಆಡಳಿತ ನಡೆಸುವವರಲ್ಲಿ ಸಮಾಜಮುಖಿ ಕಾಳಜಿ ಇದ್ದರೆ ಅಭಿವೃದ್ಧಿ ತನ್ನಂದ ತಾನೇ ಆಗುತ್ತದೆ ಎಂಬುದಕ್ಕೆ ಈ ಗ್ರಾಮ ಪಂಚಾಯಿತಿ ನಿದರ್ಶನವಾಗಿ ನಿಲ್ಲುತ್ತದೆ.
ಕ್ರಿಯಾಶೀಲ ಕಾರ್ಯಕ್ಕೆ ಪುರಸ್ಕಾರ
ತೆರಿಗೆ ಸಂಗ್ರಹದಲ್ಲಿ ಗ್ರಾಮ ಪಂಚಾಯಿತಿ ಸದಾ ಮುಂದು. 14ನೇ ಹಣಕಾಸು ಯೋಜನೆಯಡಿ ಬರುವ ಅನುದಾನದ ಸಮರ್ಪಕ ಬಳಕೆಯ ಕೀರ್ತಿ ಪಂಚಾಯಿತಿಗಿದೆ. ತನ್ನ ವ್ಯಾಪ್ತಿಯ ಗ್ರಾಮಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದೆ. ಗ್ರಾಮದಲ್ಲಿ 1,529 ಕುಟುಂಬಗಳಿದ್ದು ಪ್ರತಿಕುಟುಂಬವೂ ಶೇ 100 ರಷ್ಟು ಶೌಚಾಲಯ ಹೊಂದಿವೆ. ಜೊತೆಗೆ ತನ್ನ ವ್ಯಾಪ್ತಿಯ ಎಲ್ಲಾ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಗ್ರಾಮದ ಬೀದಿಗಳಲ್ಲಿ ಎಲ್.ಇ.ಡಿ ಬಲ್ಬ್ ಅಳವಡಿಸಲಾಗಿದೆ. ಗ್ರಾಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಅಂತರ್ಜಲ ಹೆಚ್ಚಿಸಲು ಗ್ರಾಮದ ಬಾವಿ-ಕಟ್ಟೆ ಹಾಗೂ ಕಲ್ಯಾಣಿಗಳ ಪುನರ್ ನಿರ್ಮಾಣಮಾಡಲಾಗಿದೆ.
‘ನಾಲ್ಕು ಬಾರಿ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಗ್ರಾಮ ಪಂಚಾಯಿತಿ ನಮ್ಮದು. ಯೋಜನೆ ರೂಪಿಸುವುದು ಮಾತ್ರವಲ್ಲದೇ ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವ ಗುರಿ ನಮ್ಮದಾಗಿತ್ತು. ಬದ್ಧತೆ, ಶಿಸ್ತಿನಿಂದ ನಮ್ಮ ಕೆಲಸ ಮಾಡಿದೆವು. ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಾಕಾರ ಬಲು ದೊಡ್ಡದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ರಮೇಶಗೌಡ ಹೇಳಿದರು.
‘ಪಂಚಾಯಿತಿಗೆ ಬಂದ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಸಮಾನವಾಗಿ ಹಂಚಿದ್ದೇವೆ. ಸದಸ್ಯರ ವಿಶ್ವಾಸ ಪಡೆದು ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇವೆ’ ಎಂದು ಪಿಡಿಒ ದೇವೇಗೌಡ ಹೇಳಿದರು. ನಾಲ್ಕನೇ ಬಾರಿ ಪ್ರಶಸ್ತಿ ಬಂದಿದೆ ಎಂದ ಮಾತ್ರಕ್ಕೆ ಸ್ವರ್ಗವೇ ಧರೆಗಿಳಿದು ಬಂದಿದೆ ಎಂಬರ್ಥವಲ್ಲ. ಇಲ್ಲೂ ಕೆಲ ಸಮಸ್ಯೆಗಳಿವೆ. ಅವನ್ನು ಮೀರಿ ನಿಂತಿರುುದೇ ಈ ಪಂಚಾಯಿತಿಯ ವಿಶೇಷ. ಈ ಸಾಧನೆ ಬೇರೆ ಪಂಚಾಯಿತಿಗಳಿಗೆ ಸ್ಫೂರ್ತಿಯಾದಾಗ ಮಾತ್ರ ಗಾಂಧೀಜಿಯ ಸ್ವಚ್ಛಗ್ರಾಮ ಹಾಗೂ ಗ್ರಾಮಸ್ವರಾಜ್ಯ ಕಲ್ಪನೆಯ ಕನಸು ನನಸಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.