ಮಂಡ್ಯ: ಕವಿಗಳಿಗೆ ಕಲ್ಪನೆಯೇ ಐಸಿರಿ, ಎಲ್ಲಿಯವರೆಗೆ ಕಲ್ಪನೆ ಕೈ ಕೊಡೋದಿಲ್ಲವೋ, ಅಲ್ಲಿವರೆಗೆ ಬರಹದಲ್ಲಿ ಸಂಪದ್ಭರಿತರಾಗಿರುತ್ತಾರೆ ಎಂದು ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರು ಅಭಿಪ್ರಾಯಪಟ್ಟರು. ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಏರ್ಡಿಸಿದ್ದ ‘ಕಾವ್ಯಾರ್ಥ ಚಿಂತನ’ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆನಂದಕಂದರು, ಅರಸರ ಕಥೆಗೆ ಹಳ್ಳಿಗರ ರೂಪಕೊಟ್ಟು ಅಚ್ಚುಕಟ್ಟಾಗಿ ಕವಿತೆಯನ್ನು ರಚಿಸುತ್ತಿದ್ದರು. ಸಣ್ಣಕಥೆ, ಕಾದಂಬರಿ ರಚಿಸಿದ್ದಲ್ಲದೇ, ಪತ್ರಿಕಾರಂಗದಲ್ಲೂ ಕೆಲಸ ಮಾಡಿ ವಿದ್ವಾಂಸರಂತೆ ಕಂಗೊಳಿಸಿದ್ದಾರೆ ಎಂದರು.
ಕನ್ನಡದ ಹೋರಾಟದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕನ್ನಡ ಉಳಿಯಲು ಆಲೂರು ವೆಂಕಟಸ್ವಾಮಿ, ಆನಂದಕಂದರ ಶ್ರಮವಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ ಲೈಂಗಿಕ ಶೋಷಣೆಗಳು ಹೆಚ್ಚುತ್ತಿವೆ. ಯುವಕರು ಹೆಣ್ಣುಮಕ್ಕಳನ್ನು ನೋಡುವ ರೀತಿ ಬದಲಾಯಿಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.
ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ್ ಮಾತನಾಡಿ, ಆನಂದಕಂದರು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತಮ್ಮದೇ ಆದ ಕೊಡುಗೆಯನ್ನು ಜನಪದ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಆನಂದ ಕಂದರ ಸಾಹಿತ್ಯವನ್ನು ಪಸರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಲೀಲಾ ಅಪ್ಪಾಜಿ ಮಾತನಾಡಿ, ಕನ್ನಡ ನಾಡಿನ ಕವಿಗಳನ್ನು ನಾವು ಮರೆ ಮಾಚಿದ್ದೇವೆ, ಕವಿಗಳ ಪರಿಚಯ ಹಾಗೂ ಪ್ರಚಾರವನ್ನು ದೊಡ್ಡದಾಗಿ ಮಾಡಬೇಕಿದೆ. ಸಾಹಿತ್ಯ ಪ್ರೀತಿ ಬೆಳೆಸಿಕೊಳ್ಳೋಣ ಎಂದರು. ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಸದಸ್ಯ ಸತೀಶ್ ಕುಲಕರ್ಣಿ, ಸರ್ಕಾರಿ ಮಹಿಳಾ ಕಾಲೇಜಿನ ಡಾ.ಮದನ್‌ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.