ADVERTISEMENT

ಜೈವಿಕ ಇಂಧನ: 1.82 ಲಕ್ಷ ಕಿ.ಮೀ ಓಡಿದ ಕಾರು!

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 4:41 IST
Last Updated 29 ಆಗಸ್ಟ್ 2019, 4:41 IST
ಜೈವಿಕ ಇಂಧನ ಘಟಕಕ್ಕೆ ಹೊಂಗೆ ಬೀಜ ಹಾಕುತ್ತಿರುವುದು (ಎಡಚಿತ್ರ). ಕಾರ್‌ಗೆ ಬಯೊ ಡೀಸೆಲ್‌ ಹಾಕುತ್ತಿರುವ ಡಾ.ಎಲ್‌. ಪ್ರಸನ್ನಕುಮಾರ್‌
ಜೈವಿಕ ಇಂಧನ ಘಟಕಕ್ಕೆ ಹೊಂಗೆ ಬೀಜ ಹಾಕುತ್ತಿರುವುದು (ಎಡಚಿತ್ರ). ಕಾರ್‌ಗೆ ಬಯೊ ಡೀಸೆಲ್‌ ಹಾಕುತ್ತಿರುವ ಡಾ.ಎಲ್‌. ಪ್ರಸನ್ನಕುಮಾರ್‌   

ಮಂಡ್ಯ: ಬದಲಿ ಇಂಧನ ಬಳಕೆಯ ಬಗ್ಗೆ ದೇಶದೆಲ್ಲೆಡೆ ಚಿಂತನೆ, ಸಂಶೋಧನೆ ನಡೆಯುತ್ತಿರುವಾಗ ನಗರದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಡಾ.ಎಲ್‌. ಪ್ರಸನ್ನಕುಮಾರ್‌, ತಮ್ಮ ಕಾರ್‌ಗೆ ಜೈವಿಕ ಇಂಧನ ಬಳಸಿ 1.82 ಲಕ್ಷ ಕಿ.ಮೀ. ಓಡಿಸಿದ್ದಾರೆ.

ಪರಿಸರ ಸ್ನೇಹಿ ಡ್ರೈವಥಾನ್‌ನಲ್ಲಿ ಪ್ರಥಮ ಬಹುಮಾನ ಪಡೆದಿರುವ ಪ್ರಸನ್ನಕುಮಾರ್‌, ಕಳೆದ 30 ವರ್ಷಗಳಿಂದ ಜೈವಿಕ ಇಂಧನ ಬಳಕೆಯ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ. ಕಾರು ಮಾತ್ರವಲ್ಲದೇ ಟ್ರ್ಯಾಕ್ಟರ್‌, ಟ್ರಕ್‌, ಟಿಲ್ಲರ್‌ಗಳಿಗೂ ಜೈವಿಕ ಇಂಧನ ಬಳಸಿ ಓಡಿಸಿದ್ದಾರೆ.

ನಗರದ ಇಂಡಿಯನ್‌ ಪಬ್ಲಿಕ್‌ ಶಾಲೆಯ ಮಕ್ಕಳ ವಾಹನಕ್ಕೆ ಇದನ್ನೇ ಬಳಸಿ ಓಡಿಸಿದ್ದಾರೆ. ಸ್ವತಃ ರೈತರೂ ಆಗಿರುವ ಅವರು ತಮ್ಮ ತೋಟದ ನೀರೆತ್ತುವ ಮೋಟಾರ್‌ಗೂ ಜೈವಿಕ ಇಂಧನವನ್ನೇ ಬಳಸುತ್ತಿದ್ದಾರೆ. ಹಳ್ಳಿ ಜನರಲ್ಲಿ ಇರ ಬಗ್ಗೆ ಅರಿವು ಮೂಡಿಸುತ್ತಿರುವ ಅವರು ಒಕ್ಕಣೆ ಯಂತ್ರ, ಉಳುಮೆಯಂತ್ರಗಳನ್ನೂ ಬಳಸುತ್ತಾ ಮಾದರ ಎನಿಸಿದ್ದಾರೆ.

ADVERTISEMENT

ನಗರದ ನಿವೃತ್ತ ಕೃಷಿ ಇಲಾಖೆ ಅಧಿಕಾರಿ ನಿಂಗೇಗೌಡ, ತಮ್ಮ ಪ್ರೀತಿಯ ಫಿಯೆಟ್‌ ಕಾರನ್ನು ಇದೇ ಇಂಧನದಿಂದ ಓಡಿಸುತ್ತಿದ್ದಾರೆ. ಪಾಂಡವಪುರದ ವರದರಾಜು ತಮ್ಮ ಮೂರು ಟ್ರ್ಯಾಕ್ಟರ್‌, ಒಂದು ಗೂಡ್ಸ್‌ ಟೆಂಪೊಕ್ಕೂ ಜೈವಿಕ ಇಂಧನ ಬಳಸಿ ಓಡಿಸುತ್ತಿದ್ದಾರೆ. ನೇಹಾ ಟ್ರಾವೆಲ್ಸ್‌ ಮಾಲೀಕರು, ಕೆಲ ಆಟೊ ಚಾಲಕರೂ ಈ ಇಂಧನ ಬಳಕೆಗೆ ಮುಂದಾಗಿದ್ದಾರೆ.

‘ಈ ವಾಹನ ಬಯೊ ಡೀಸೆಲ್‌ನಿಂದ ಓಡುತ್ತಿದೆ’ ಎಂಬ ಘೋಷ ವಾಕ್ಯವನ್ನು ತಮ್ಮ ಕಾರಿನ ಹಿಂದೆ ಬರೆಸಿಕೊಂಡಿರುವ ಪ್ರಸನ್ನಕುಮಾರ್‌, ಜೈವಿಕ ಇಂಧನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

‘ಸ್ಥಳೀಯವಾಗಿ ಓಡಿಸಿದರೆ ಕಾರು ಲೀಟರ್‌ಗೆ 20 ಕಿ.ಮೀ ಕೊಡುತ್ತದೆ. ದೂರದ ದಾರಿಯಲ್ಲಿ ಓಡಿಸಿದರೆ 23 ಕಿ.ಮೀ ಬರುತ್ತದೆ. ನನ್ನ ಕಾರಿನಿಂದ ಪ್ರಕೃತಿಗೆ ನೀಡಿರುವ ಇಂಗಾಲದ ಪ್ರಮಾಣ ಶೂನ್ಯ. ಡೀಸೆಲ್‌ನಿಂದ ಓಡುವ ಯಾವುದೇ ವಾಹನಗಳಿಗೆ ಈ ಇಂಧನ ಬಳಸಬಹುದು ಎನ್ನುತ್ತಾರೆ ಪ್ರಸನ್ನಕುಮಾರ್ ಭೂಗರ್ಭ ವಿಜ್ಞಾನ ತಜ್ಞ: ಮಂಗಳೂರು ವಿವಿಯಲ್ಲಿ ಭೂಗರ್ಭ ವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಪ್ರಸನ್ನಕುಮಾರ್ ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ಸಿವಿಲ್‌ ವಿಭಾಗದಲ್ಲಿ ಭೂಗರ್ಭ ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಹಾಯದೊಂದಿಗೆ 2012ರಲ್ಲಿ ‘ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರ’ ಸ್ಥಾಪಿಸಿ ಜೈವಿಕ ಇಂಧನ ಉತ್ಪಾದನೆ ಹಾಗೂ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪಿಇಎಸ್ ಕಾಲೇಜು ಆವರಣದಲ್ಲೇ ಜೈವಿಕ ಇಂಧನ ತಯಾರಿಕಾ ಘಟಕ ಇದೆ. ಗ್ರಾಹಕರು ಇದನ್ನು ಬಳಸಲು ಮುಂದೆ ಬಂದರೆ ಅವರಿಗೆ ಇಂಧನ ಉತ್ಪಾದಿಸಿ ಕೊಡುತ್ತಾರೆ. ಲೀಟರ್‌ಗೆ ₹ 50 ದರ ಇದೆ. ಪ್ರಸನ್ನಕುಮಾರ್‌ ಅವರನ್ನು ಮೊ: 8660410905 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.