ಮಂಡ್ಯ: ಮಳವಳ್ಳಿ ಮೀಸಲು ಕ್ಷೇತ್ರದ ಜನರು 10 ವರ್ಷಗಳ ನಂತರ ಡಾ.ಕೆ.ಅನ್ನದಾನಿ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಅವರ ವಿರುದ್ಧ 1,03,038 ಮತ ಗಳಿಸಿ 26,760 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅನುಯಾಯಿ ಎಂಬ ಕಾರಣವೂ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿತು.
‘ಕುಮಾರಣ್ಣ ಮುಖ್ಯಮಂತ್ರಿ’ ಎಂಬ ವಿಷಯದ ಮೇಲೆ ಮತಯಾಚನೆ ಮಾಡಿ ಯಶಸ್ವಿಯೂ ಆದ ಅವರು ಕ್ಷೇತ್ರದೆಲ್ಲೆಡೆ ಸಂಚಾರ ಮಾಡಿ ವಿಜಯಮಾಲೆ ಹಾಕಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಡಾ.ಕೆ.ಅನ್ನದಾನಿ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.
* ಮಳವಳ್ಳಿ ತಾಲ್ಲೂಕು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಶೈಕ್ಷಣಿಕವಾಗಿ ನೀಡುವ ಕೊಡುಗೆಗಳೇನು?
ಹತ್ತು ವರ್ಷಗಳ ಹಿಂದೆ ನಾನು ಶಾಸಕನಾಗಿದ್ದಾಗ ಹಲವು ಶಾಲಾ, ಕಾಲೇಜುಗಳನ್ನು ಆರಂಭಿಸಿದ್ದೆ. ಹಲಗೂರಿನಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಿದ್ದೆ. ವಿವಿಧೆಡೆ ಆರು ಪ್ರೌಢಶಾಲೆಗಳು ನನ್ನ ಅವಧಿಯಲ್ಲಿ ಸ್ಥಾಪನೆಯಾಗಿದ್ದವು. ಬಾಲಕಿಯರ ಪದವಿಪೂರ್ವ ಕಾಲೇಜು ಸ್ಥಾಪನೆಯೂ ನನ್ನ ಕಾಲದಲ್ಲೇ ಆಗಿತ್ತು. ಡಿ.ಇಡಿ, ಐಟಿಐ ಕಾಲೇಜುಗಳೂ ಸ್ಥಾಪನೆಯಾದವು. ಆದರೆ ಬೇರೆ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದರೆ ನಮ್ಮ ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂಬದು ನಿಜ. ತಾಲ್ಲೂಕಿಗೊಂದು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡುವುದೇ ನನ್ನ ಗುರಿ. ಇಷ್ಟರಲ್ಲೇ ಪಾಲಿಟೆಕ್ನಿಕ್ ಆರಂಭವಾಗುತ್ತದೆ. ಎಂಜಿನಿಯರಿಂಗ್ ಕಾಲೇಜು ಆರಂಭಗೊಂಡರೆ ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ದೊರೆಯುತ್ತದೆ. ಇದರ ಜೊತೆಗೆ ವಸತಿ ಶಾಲೆಗಳು, ವಿದ್ಯಾರ್ಥಿನಿಯಲಯಗಳ ಸ್ಥಾಪನೆಗೂ ಆದ್ಯತೆ ನೀಡುತ್ತೇನೆ.
* ಕಸಬಾ ಹೋಬಳಿಗೆ ಕುಡಿಯುವ ನೀರು ಪೂರೈಸುವ ಇಗ್ಗಲೂರು ಬಲದಂಡೆ ಯೋಜನೆಗೆ ಪುನಶ್ಚೇತನ ನೀಡುತ್ತೀರಾ?
ಬಲದಂಡೆ ಯೋಜನೆ ಜಾರಿಗೊಳಿಸುವುದೇ ನನ್ನ ಮೊದಲ ಆದ್ಯತೆ. ಯೋಜನೆ ಕುರಿತ ಕಡತಗಳ ಪರಿಶೀಲನೆ ನಡೆಸುತ್ತಿದ್ದೇನೆ. ಯೋಜನೆಗೆ ಶೀಘ್ರ ಕಾಯಕಲ್ಪ ನೀಡುತ್ತೇನೆ. ಇಗ್ಗಲೂರು ಯೋಜನೆ ಜಾರಿಯಾದರೆ ಮಾತ್ರ ಕಸಬಾ ಹೋಬಳಿ ಜನರಿಗೆ ಕುಡಿಯುವ ನೀರು ಸಿಗುತ್ತದೆ. ಮಾಜಿ ಶಾಸಕರು ಹೊಸ ಯೋಜನೆಗಳತ್ತ ಹೆಚ್ಚು ಆಸಕ್ತಿ ತೋರಿದರು. ಆದರೆ ಹಳೆಯ ಯೋಜನೆಗಳ ಜಾರಿಗೆ ನಿರ್ಲಕ್ಷ್ಯ ವಹಿಸಿದರು. ಹೀಗಾಗಿ ಬಲದಂಡೆ ಯೋಜನೆ ನನೆಗುದಿಗೆ ಬಿತ್ತು.
* ಕಿರುಗಾವಲು ಹೋಬಳಿ ರೈತರು ಕೆಆರ್‌ಎಸ್ ನೀರಿಗಾಗಿ ಸದಾ ಕಾಲ ಕಾಯುವ ಸ್ಥಿತಿ ಇದೆ. ಅವರಿಗೆ ನೀರು ಹರಿಸುವಿರಾ?
ಕಿರುಗಾವಲು ಹೋಬಳಿ ನಾಲೆಗಳ ಕೊನೇ ಭಾಗವಾಗಿದೆ. ಹೀಗಾಗಿ ಮೂರು ವರ್ಷಗಳಿಂದ ಅಲ್ಲಿಗೆ ಕೆಆರ್‌ಎಸ್ ನೀರು ಹರಿದು ಬಂದಿಲ್ಲ. ಜಲಾಶಯ ತುಂಬಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಆರ್‌ಎಸ್‌ನಲ್ಲಿ ನೀರು ಇಲ್ಲದಿದ್ದಾಗ ಸಮಸ್ಯೆ ಉಂಟಾಗುತ್ತದೆ. ಪ್ರತಿ ವರ್ಷ ಕೆರೆಗಳನ್ನಾದರೂ ತುಂಬಿಸಲು ಕ್ರಮ ಕೈಗೊಳ್ಳುತ್ತೇನೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನಿಗಾ ವಹಿಸುತ್ತೇನೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಮುಂದಾಗುತ್ತೇನೆ.
* ಪೂರಿಗಾಲಿ ಹನಿ ನೀರಾವರಿ ಯೋಜನೆಯ ಕಾಮಗಾರಿ ಚುರುಕುಗೊಳ್ಳುವುದೇ?
ಪ್ರಗತಿಯಲ್ಲಿರುವ ಎಲ್ಲ ಸರ್ಕಾರಿ ಕಾಮಗಾರಿಗಳೂ ಚುರುಕುಗೊಳ್ಳಲಿವೆ. ಹನಿ ನೀರಾವರಿ ಯೋಜನೆ ಬಗ್ಗೆ ಮೊದಲಿನಿಂದಲೂ ನನಗೆ ಅನುಮಾನವಿದೆ. ಹನಿ ನೀರಾವರಿ ಯಂತ್ರಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂದು ನಾನು ಕೇಳಿದ್ದೇನೆ. ಹೀಗಾಗಿ ಹಣಕಾಸಿನ ಅವ್ಯವಹಾರ ನಡೆಯಬಹುದು ಎಂಬ ಅನುಮಾನವೂ ಇತ್ತು. ಈಗ ಆ ಯೋಜನೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡುತ್ತೇನೆ. ಅದರಿಂದ ಆಗಬಹುದಾದ ಲಾಭಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಕಾಮಗಾರಿ ಎಂದಿನಂತೆ ನಡೆಯುತ್ತದೆ. ಜೊತೆಗೆ ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆ, ಭೀಮಾ ಜಲಾಶಯ ಯೋಜನೆಗೂ ಕಾಯಕಲ್ಪ ನೀಡುತ್ತೇನೆ.
* ಮಳವಳ್ಳಿ ಪಟ್ಟಣದ ಹೊಸ ಬಡಾವಣೆಗಳಿಗೆ ಮೂಲಸೌಲಭ್ಯ ಇಲ್ಲ ಎಂಬ ಆರೋಪ ಇದೆಯಲ್ಲಾ?
ಮಳವಳ್ಳಿಯ ಎನ್‌ಇಎಸ್ ಬಡಾವಣೆಯ ಮೂರನೇ ವಾರ್ಡ್‌ನಲ್ಲಿ ಸಮರ್ಪಕ ರಸ್ತೆಗಳು ಇಲ್ಲದೇ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಶೀಘ್ರ ಆ ಬಡಾವಣೆಗೆ ಭೇಟಿ ನೀಡಿ ಜನರ ಜೊತೆ ಮಾತನಾಡುತ್ತೇನೆ. ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅದಕ್ಕೆ ಪರಿಹಾರ ಹುಡುಕುತ್ತೇನೆ. ಮೊದಲು ಕುಡಿಯುವ ನೀರು, ವಿದ್ಯುತ್, ರಸ್ತೆ ಸೌಲಭ್ಯ ನೀಡಲು ಕ್ರಮ ಕೈಗೊಳ್ಳುತ್ತೇನೆ.
* ನಿಮ್ಮ ಕ್ಷೇತ್ರದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ಅದಕ್ಕೇನು ಕ್ರಮ ಕೈಗೊಳ್ಳುವಿರಿ?
ಸಣ್ಣ ಕೈಗಾರಿಕೆ ಇಲಾಖೆಯ ಜೊತೆ ಮಾತನಾಡಿ ರೈತರಿಗೆ ಅನುಕೂಲವಾಗುವ ಗುಡಿ ಕೈಗಾರಿಕೆ ಸ್ಥಾಪನೆಗೆ ಕ್ರಮ ವಹಿಸುತ್ತೇನೆ. ಮುಖ್ಯಮಂತ್ರಿಗಳ ಜೊತೆ ಈ ವಿಚಾರವನ್ನು ಬಹಳ ಗಂಭೀರವಾಗಿ ಚರ್ಚೆ ಮಾಡುತ್ತೇನೆ. ನಮ್ಮ ಯುವಕರು ಬೇರೆ ಜಿಲ್ಲೆಗಳಿಗೆ ವಲಸೆ ಹೋಗದಂತೆ ಅವರು ಇರುವ ಸ್ಥಳದಲ್ಲೇ ಉದ್ಯೋಗ ಕಲ್ಪಿಸಲು ಯತ್ನಿಸುತ್ತೇನೆ. ಜೊತೆಗೆ ಗಾರ್ಮೆಂಟ್ ಕಾರ್ಖಾನೆ ಸ್ಥಾಪನೆಗೂ ಕ್ರಮ ಕೈಗೊಳ್ಳುತ್ತೇನೆ.
ಜನರು ಅತಿ ಹೆಚ್ಚು ಮತಗಳ ಅಂತರದಿಂದ ನಿಮ್ಮನ್ನು ಗೆಲ್ಲಿಸಿದ್ದಾರೆ. ಅವರಿಗೇನು ಹೇಳುವಿರಿ?
ಪ್ರತಿಯೊಬ್ಬ ವ್ಯಕ್ತಿಯ ಮನೆ, ಮನಗಳನ್ನು ತಲುಪಲು ಯತ್ನಿಸುತ್ತೇನೆ. ಸರ್ಕಾರ ರಚನೆ ಅಂಗವಾಗಿ ಕೆಲ ದಿನಗಳ ಕಾಲ ಕ್ಷೇತ್ರಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ಇನ್ನುಮುಂದೆ ಕ್ಷೇತ್ರದಲ್ಲೇ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಜನರನ್ನು ಭೇಟಿಯಾಗಿ ಮುಖತಃ ಮಾತನಾಡುತ್ತೇನೆ. ಅವರ ಪ್ರೀತಿಗೆ ಸದಾ ಋಣಿಯಾಗಿರುತ್ತೇನೆ. ಎಲ್ಲ ವರ್ಗ, ಸಮಾಜಗಳ ನಡುವೆ ಯಾವುದೇ ಭೇದ ಭಾವ ಮಾಡದೇ ಸರ್ಕಾರಿ ಸೌಲಭ್ಯಗಳನ್ನು ಕಡೇ ವ್ಯಕ್ತಿಯವರೆಗೂ ತಲುಪಿಸುತ್ತೇನೆ. ಮಳವಳ್ಳಿ ಕ್ಷೇತ್ರವನ್ನು ಜಿಲ್ಲೆಯಲ್ಲಿ ಮಾದರಿಯಾಗಿ ರೂಪಿಸಲು ಕ್ರಮ ವಹಿಸುತ್ತೇನೆ.
ಶಾಸಕರ ಡೈರಿ
ಶೈಕ್ಷಣಿಕ ಅರ್ಹತೆ: ಎಂ.ಎ., ಪಿಎಚ್‌ಡಿ
ಪತ್ನಿ: ರುಕ್ಮಿಣಿ
ಪುತ್ರ: ಅಂಶು
ರಾಜಕೀಯ ಹಾದಿ
1999ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ: ಸೋಲು
2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ: ಗೆಲುವು
2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ: ಸೋಲು
2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ: ಸೋಲು
2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ: ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.