ಮಂಡ್ಯ: ಎಂಟು ತಿಂಗಳ ಅವಧಿಯಲ್ಲಿ ಮಂಡ್ಯ ಲೋಕಸಭೆಗೆ ಎರಡನೇ ಬಾರಿಗೆ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದ ಬಾರಿಯ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ದರೆ, ಉಪ ಚುನಾವಣೆಯಲ್ಲಿ ಸ್ಪರ್ಧೆಯಿಂದ ದೂರವಿದ್ದ ಬಿಜೆಪಿ ಹಾಗೂ ಬಿಎಸ್‌ಪಿ ಈ ಬಾರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.
ಈ ಚುನಾವಣೆಯು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗಿಂತ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಕುಟುಂಬದ ನಡುವಣ ಸೋಲು–ಗೆಲುವಿನ ಲೆಕ್ಕಾಚಾರವೂ ಇಲ್ಲಿ ಮುಖ್ಯವಾಗಿದೆ.
ಉಪ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಸ್ಥಾನವನ್ನು ಮರಳಿ ಪಡೆಯಲು ಜೆಡಿಎಸ್ ಮುಂದಾಗಿದ್ದರೆ, ಪಡೆದುಕೊಂಡಿದ್ದ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ, ಮತ್ತೊಂದು ಜಿದ್ದಾಜಿದ್ದಿಗೆ ಅಖಾಡ ಸಜ್ಜಾಗಿದ್ದು, ಮಂಡ್ಯದಲ್ಲಿ ‘ವೈಷಮ್ಯ ರಾಜಕಾರಣ’ವೇ ಅಕ್ಷರಶಃ ತೋಳೇರಿಸಿ ನಿಂತಂತೆ ಕಾಣುತ್ತಿದೆ.
ತಾರಾ ಮೌಲ್ಯ ಹೊಂದಿದ್ದ ರಮ್ಯಾ ಅವರನ್ನು ಕಾಂಗ್ರೆಸ್ ಪಕ್ಷವು ಕೊನೆಗಳಿಗೆಯಲ್ಲಿ ಕಣಕ್ಕೆ ಇಳಿಸುವ ಮೂಲಕ ಉಪ ಚುನಾವಣೆಯಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಈ ಬಾರಿಯೂ ಅವರನ್ನೇ ಕಣಕ್ಕೆ ಇಳಿಸಿದೆ. ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ದೇವೇಗೌಡ ಅವರ ‘ಮಾನಸ ಪುತ್ರ’ ಎಂದೇ ಗುರುತಿಸಿಕೊಂಡಿರುವ ಸಿ.ಎಸ್. ಪುಟ್ಟರಾಜು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ನರೇಂದ್ರ ಮೋದಿ ಅವರ ಅಲೆಯನ್ನು ನೆಚ್ಚಿಕೊಂಡು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರೊ.ಬಿ. ಶಿವಲಿಂಗಯ್ಯ ಅವರು ಮೊದಲ ಬಾರಿಗೆ ರಾಜಕೀಯ ಅಖಾಡಕ್ಕೆ ಧುಮುಕಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸ್ವಂತ ಬಲವನ್ನು ನೆಚ್ಚಿಕೊಂಡು ಬಿಎಸ್ಪಿಯಿಂದ ಎಂ. ಕೃಷ್ಣಮೂರ್ತಿ, ‘ಆಪ್’ನಿಂದ ಡಾ.ಹನುಮಂತಪ್ಪ ಕಣದಲ್ಲಿದ್ದಾರೆ.
ಕಾಂಗ್ರೆಸ್ ಕಿತ್ತಾಟ: ಕಾಂಗ್ರೆಸ್ ಮುಖಂಡರ ನಡುವಣ ಕಿತ್ತಾಟ ಜೋರಾಗಿದೆ. ಬಹಿರಂಗವಾಗಿ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯಸಭೆ ಸದಸ್ಯ ಎಸ್.ಎಂ. ಕೃಷ್ಣ ಹಾಗೂ ವಸತಿ ಸಚಿವ ಅಂಬರೀಷ್ ಬಣದವರಿಬ್ಬರಿಂದಲೂ ಹಾಲಿ ಸಂಸದೆ, ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಟೀಕೆಗೆ ಒಳಗಾಗಿದ್ದಾರೆ.
ಏಳು ತಿಂಗಳ ಹಿಂದೆ ಸಂಸದೆಯಾಗಿದ್ದ ರಮ್ಯಾ ಅವರು, ಕ್ಷೇತ್ರದ 500ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಮತದಾರರನ್ನು ನೇರವಾಗಿ ಸಂಪರ್ಕಿಸಿದ್ದಾರೆ. ಅವರ ಸಮಸ್ಯೆಗಳನ್ನು ಅರಿತುಕೊಳ್ಳಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್ಸಿನ ಕೆಲ ನಾಯಕರ ಕಣ್ಣು ಕೆಂಪಗಾಗಿಸಿದ್ದು, ಭಿನ್ನಮತದ ಬಾವುಟ ಹಿಡಿದು ನಿಂತಿದ್ದಾರೆ. ಜತೆಗೆ, ಗೆಲುವು ಸಾಧಿಸಿದರೆ ಪಕ್ಷದ ಮೇಲೆ ಹಿಡಿತ ಸಾಧಿಸುತ್ತಾರೆ. ಮುಂದಿನ ದಿನಗಳಲ್ಲಿ ಅವರು ಶಕ್ತಿಯಾಗಿಯೂ ಹೊಮ್ಮುತ್ತಾರೆ ಎಂಬ ಆತಂಕ ನಾಯಕರಲ್ಲಿದೆ. ಅದನ್ನು ಕೆಲವರು ಬಹಿರಂಗವಾಗಿ ವ್ಯಕ್ತಪಡಿಸಿಯೂ ಇದ್ದಾರೆ.
ಕೃಷ್ಣ ಸಂಧಾನ: ಕೃಷ್ಣ ಅವರ ಮಧ್ಯಸ್ಥಿಕೆಯಲ್ಲಿ ಎರಡೂ ಬಣದ ನಡುವೆ ಸಂಧಾನ ಮಾಡಿಸುವ ಯತ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನಡೆಸಿದ್ದಾರೆ. ಇದರ ಫಲವಾಗಿ ಜಿಲ್ಲಾ ಘಟಕಕ್ಕೆ 44 ಮಂದಿ ನೇಮಕ ಮಾಡಲಾಗಿದೆ. ಈ ನೇಮಕದ ಬಗ್ಗೆಯೂ ಅಪಸ್ವರಗಳು ಎದ್ದಿರುವುದು ಕಾಂಗ್ರೆಸ್‌್ ನಾಯಕರಲ್ಲಿ ಆತಂಕ ಮೂಡಿಸಿದೆ.
ಸಂಧಾನ ಮೇಲ್ನೋಟಕ್ಕೆ ಫಲಪ್ರದವಾದಂತೆ ಕಂಡು ಬಂದಿದ್ದರೂ, ಆಂತರಿಕವಾಗಿ ಇನ್ನೂ ಮುನಿಸುಗಳಿವೆ. ಅವಕಾಶ ಸಿಕ್ಕಾಗಲೆಲ್ಲ ಹೊರಹಾಕುತ್ತಾಲೇ ಇದ್ದಾರೆ. ಶನಿವಾರ ಮಂಡ್ಯ ತಾಲ್ಲೂಕಿನ ಬೇಲೂರು ಹಾಗೂ ಸೂನಗನಹಳ್ಳಿಯಲ್ಲಿ ಎರಡೂ ಬಣಗಳ ಮುಖಂಡರು ಹಾಗೂ ಕಾರ್ಯಕರ್ತರು ಬೀದಿಯಲ್ಲಿ ಭಿನ್ನಮತ ಪ್ರದರ್ಶಿಸಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಸಾಕು ತಂದೆ ಆರ್.ಟಿ. ನಾರಾಯಣ್ ಅವರನ್ನು ಕಳೆದುಕೊಂಡಿದ್ದ ಅನುಕಂಪದ ಅಲೆ ಈ ಬಾರಿ ಕಾಣಿಸುವುದಿಲ್ಲವಾದರೂ, ಸಿನಿಮಾ ತಾರೆಯೆಂಬ ಕಾರಣಕ್ಕಾಗಿ ಜನರನ್ನು ಸೆಳೆಯುವ ಶಕ್ತಿ ಇನ್ನೂ ಇದೆ. ಅದು ಮತವಾಗಿ ಪರಿವರ್ತನೆಯಾದರೆ ಗೆಲುವಿನ ಹಾದಿ ಒಂದಷ್ಟು ಸುಗಮವಾಗುತ್ತದೆ.
ಕಳೆದ ಬಾರಿ ತಮ್ಮ ಪಕ್ಷದ ಐವರು ಶಾಸಕರಿದ್ದಾರೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ಮೈಮರೆತ ಜೆಡಿಎಸ್ ಫಲಿತಾಂಶದಲ್ಲಿ ಮುಗ್ಗರಿಸಿತ್ತು. ಆ ಪಕ್ಷದ ನಾಯಕರಲ್ಲಿನ ಆಂತರಿಕ ವೈಮನಸ್ಸು ಫಲಿತಾಂಶದಲ್ಲಿಯೂ ಕಾಣಿಸಿಕೊಂಡಿತ್ತು. ಈ ಬಾರಿ ಒಗ್ಗಟ್ಟಾಗಿದ್ದೇವೆ ಎಂದು ಹೇಳಿಕೊಂಡು ಮುನ್ನುಗ್ಗಿದ್ದಾರೆ. ಜತೆಗೆ ಪಕ್ಷದ ಅಸ್ತಿತ್ವದ ಪ್ರಶ್ನೆಯೂ ಅವರನ್ನು ಕಾಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕಾ ಪ್ರಹಾರವೂ ಅವರನ್ನು ಕೆಣಕುತ್ತಿದೆ. ಒಗ್ಗಟ್ಟಿನ ಪ್ರದರ್ಶನದ ಮೂಲಕ ಮತಗಳನ್ನು ಒಗ್ಗೂಡಿಸದ ಹೊರತು ಗೆಲುವು ಕಷ್ಟ.
ಈ ನಡುವೆ ಮೋದಿ ಅಲೆಯಲ್ಲಿ ತೇಲಲು ಬಿಜೆಪಿ ಮುಂದಾಗಿದೆ. ಬಿಜೆಪಿಯ ಪ್ರಾಥಮಿಕ ಸದಸ್ಯರೇ ಆಗಿರದಿದ್ದ ಪ್ರೊ.ಬಿ. ಶಿವಲಿಂಗಯ್ಯ ಅವರಿಗೆ ಟಿಕೆಟ್ ನೀಡಿದ್ದು, ಪಕ್ಷದಲ್ಲಿ ಅಸಮಾಧಾನ ಉಂಟು ಮಾಡಿತ್ತು. ಅದನ್ನು ಬಗೆಹರಿಸಿಕೊಂಡು ಬಿರುಸಿನ ಪ್ರಚಾರಕ್ಕೆ ಅಭ್ಯರ್ಥಿ ಮುಂದಾಗಿದ್ದಾರೆ. ಯುವ– ವಿದ್ಯಾವಂತ ಮತದಾರರಲ್ಲಿ ಮೋದಿ ಹೆಸರು ಕೇಳಿ ಬರುತ್ತಿದೆ.
ಶಾಸಕರ ಬಲಾಬಲ: ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಐವರು ಶಾಸಕರು ಜೆಡಿಎಸ್‌ನವರಿದ್ದರೆ; ಇಬ್ಬರು ಶಾಸಕರು ಕಾಂಗ್ರೆಸ್ ಪಕ್ಷದವರು. ಸರ್ವೋದಯ ಕರ್ನಾಟಕ ಪಕ್ಷದಿಂದ ಮೇಲುಕೋಟೆ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಸ್. ಪುಟ್ಟಣ್ಣಯ್ಯ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಕ್ಕೆ ನಿಂತಿದ್ದಾರೆ.
ಕ್ಷೇತ್ರದಲ್ಲಿ ಸುತ್ತಾಡಿದಾಗ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾಗಿ; ಇನ್ನು ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ಪರವಾಗಿ ಒಲವು ಕಂಡು ಬಂದರೆ, ನಗರ–ಪಟ್ಟಣ ಪ್ರದೇಶಗಳಲ್ಲಿ ಬಿಜೆಪಿ–ಮೋದಿ ಅಲೆಯ ಬಗೆಗೂ ಮಾತುಗಳು ಕೇಳಿಬಂದವು. ಹೆಚ್ಚಿನ ಯುವ ಮತದಾರರ ಒಲವು ರಮ್ಯಾ– ಮೋದಿಯತ್ತಲೇ ಸುಳಿದಾಡುತ್ತಿರುವುದು ಗಮನ ಸೆಳೆಯಿತು. ಆದರೂ, ಸದ್ಯದ ಪರಿಸ್ಥಿತಿಯಲ್ಲಿ ಮೇಲ್ನೋಟಕ್ಕೆ ಕಳೆದ ಉಪ ಚುನಾವಣೆಯಂತೆಯೇ ಕಾಂಗ್ರೆಸ್–ಜೆಡಿಎಸ್ ನಡುವೆಯೇ ನೇರ ಹಣಾಹಣಿ ಏರ್ಪಡುವ ಚಿತ್ರಣವಿದೆ.
ಆದರೆ, ಕಳೆದ ಉಪ ಚುನಾವಣೆಯಲ್ಲಿ ನೇಪಥ್ಯದಲ್ಲಿದ್ದು, ಈ ಬಾರಿ ಕಣಕ್ಕೆ ಇಳಿದಿರುವ ಬಿಜೆಪಿ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳು ಯಾರ ಮತಬುಟ್ಟಿಗೆ ಕೈಹಾಕುತ್ತಾರೆ; ಎಷ್ಟು ಮತಗಳನ್ನು ಕಸಿಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಕ್ಷೇತ್ರದೆಲ್ಲೆಡೆ ಸಾಮಾನ್ಯವಾಗಿ ಕೇಳಿಬಂದ ಮಾತು ‘ಯಾರೇ ಗೆದ್ದರೂ ಲೀಡ್ ಹತ್ತಿಪ್ಪತ್ತು ಸಾವಿರ ಮೀರುವುದಿಲ್ಲ’. ಇದೇ ಮಾತೇ ಪಕ್ಷಗಳ ವಲಯದಲ್ಲೂ ಪ್ರತಿಧ್ವನಿಸುತ್ತಿದೆ.
ಜಾತಿ ಲೆಕ್ಕಾಚಾರ
ಜಿಲ್ಲೆಯಲ್ಲಿ ಒಕ್ಕಲಿಗರು ಬಹುಸಂಖ್ಯಾತರಾಗಿದ್ದು, ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿರುವ ಮೂವರೂ ಅಭ್ಯರ್ಥಿಗಳು ಇದೇ ಜಾತಿಗೆ ಸೇರಿದವರಾಗಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ, ಮುಸ್ಲಿಂ, ಕುರುಬ ಸಮುದಾಯದವರು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.