ADVERTISEMENT

ಶ್ರೀಗಂಧ ಬೆಳೆಯಲು ಸರ್ಕಾರದ ಅನುಮತಿ ಬೇಕಿಲ್ಲ

ಕಟ್ಟೆದೊಡ್ಡಿಯಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ; ಪ್ರಗತಿಪರ ರೈತ ವೆಂಕಟಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಮೇ 2018, 10:43 IST
Last Updated 29 ಮೇ 2018, 10:43 IST

ಮಂಡ್ಯ: ‘ಶ್ರೀಗಂಧ ಬೆಳೆಯಲು ಸರ್ಕಾರದ ಅನುಮತಿ ಬೇಕು ಎಂಬ ತಪ್ಪು ತಿಳಿವಳಿಕೆ ಜನರಲ್ಲಿದೆ. ಆದರೆ 2002ರ ನಂತರ ಸರ್ಕಾರ ಮುಕ್ತ ಅವಕಾಶ ನೀಡಿದೆ. ಜನರು ಆರ್ಥಿಕ ಸದೃಢತೆಗಾಗಿ ಶ್ರೀಗಂಧ ಬೆಳೆಯಬೇಕು‍’ ಎಂದು ಕೋಲಾರ ಜಿಲ್ಲೆಯ ಪ್ರಗತಿಪರ ರೈತ ಜಿ.ವೆಂಕಟಪ್ಪ ಹೇಳಿದರು.

ತಾಲ್ಲೂಕಿನ ಕಟ್ಟೇದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಮತ್ತು ಸಾವಯವ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಹಿಂದೆ ಅರಣ್ಯ, ಕೃಷಿ ಇಲಾಖೆಯಿಂದ ಮಾತ್ರ ಶ್ರೀಗಂಧ ಬೆಳೆಯಲಾಗುತ್ತಿತ್ತು. ಶ್ರೀಗಂಧ ಮರಕ್ಕೆ ಕಳ್ಳಕಾಕರ ಭಯವೂ ಇತ್ತು. ಹೀಗಾಗಿ ರೈತರು ಶ್ರೀಗಂಧ ಬೆಳೆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕೆಲವರು ಅದನ್ನು ಶ್ರೀಮಂತರ ಬೆಳೆ ಎನ್ನುತ್ತಿದ್ದರು. ಆದರೆ ಈಗ ರೈತರೂ ಶ್ರೀಗಂಧ ಬೆಳೆಯಬಹುದು. ಮನೆಯ ಮುಂದೆಯೇ ಶ್ರೀಗಂಧ ಕೃಷಿ ಆರಂಭಿಸಬೇಕು. ಒಂದು ಹೆಣ್ಣು ಮಗು ಹುಟ್ಟಿದರೆ ಆ ಮಗುವಿನ ನೆನಪಿನಲ್ಲಿ 10 ಶ್ರೀಗಂಧ ಸಸಿ ನೆಡಬಹುದು. 20 ವರ್ಷಗಳು ತುಂಬುವ ಹೊತ್ತಿಗೆ ಮಗಳನ್ನು ಮದುವೆ ಮಾಡಲು, ಉನ್ನತ ವಿದ್ಯಾಭ್ಯಾಸ ಕೊಡಿಸಲು ಮರಗಳು ಆರ್ಥಿಕ ಸಹಾಯ ಮಾಡುತ್ತವೆ’ ಎಂದು ಹೇಳಿದರು.

ADVERTISEMENT

‘ಮಾರುಕಟ್ಟೆಯಲ್ಲಿ ಕೆ.ಜಿ ಶ್ರೀಗಂಧಕ್ಕೆ ₹ 6 ಸಾವಿರ ಬೆಲೆ ಇದೆ. ಒಂದು ಮರದಲ್ಲಿ 50 ಕೆಜಿ ಶ್ರೀಗಂಧ ದೊರೆಯುತ್ತದೆ. ಒಂದು ಮರ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುತ್ತದೆ. ಆದ್ದರಿಂದ ರೈತರು ಸಾಂಪ್ರದಾಯಿಕ ಬೆಳೆ ತೆಗೆಯುವ ಬದಲು ಶ್ರೀಗಂಧಕ್ಕೆ ಆದ್ಯತೆ ನೀಡಬೇಕು. ಕೋಲಾರ ಜಿಲ್ಲೆಯಲ್ಲಿ ನೀರಿನ ಕೊರತೆ ಇದೆ. ಆದರೂ ಅಲ್ಲಿಯ ರೈತರು ಜಾಗೃತರಾಗಿದ್ದು ಮನೆಮನೆಯಲ್ಲೂ ಶ್ರೀಗಂಧ ಸಸಿ ಹಾಕಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ನೀರಾವರಿ ಸೌಲಭ್ಯ ಇದೆ. ಇದನ್ನು ಸದುಪಯೋಗ ಮಾಡಿ ಕೊಂಡು ಶ್ರೀಗಂಧ ಬೆಳೆಯ ಬೇಕು. ಇದಕ್ಕೆ ಹೆಚ್ಚಿನ ನೀರಿನ ಅವಶ್ಯಕತೆಯೂ ಇಲ್ಲ. ಮಂಡ್ಯ ಜಿಲ್ಲೆ ಈ ಬೆಳೆಗೆ ಸೂಕ್ತ ಸ್ಥಳ’ ಎಂದು ಹೇಳಿದರು.

‘ಶ್ರೀಗಂಧವನ್ನು ವಿದೇಶಗಳಿಗೆ ರಫ್ತು ಮಾಡಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ. ಕಂಪನಿಗಳು ಮನೆಯ ಮುಂದಕ್ಕೆ ಬಂದು ಅವರೇ ಕಟಾವು ಮಾಡಿಕೊಂಡು ಹಣಕೊಟ್ಟು ಹೋಗುತ್ತಾರೆ. ಮೈಸೂರು ಸ್ಯಾಂಡಲ್‌ ಸೋಪು ಕಂಪನಿ ಕೂಡ ನಮ್ಮ ಹೊಲಗಳಿಗೆ ಬಂದು ಶ್ರೀಗಂಧ ಕೊಳ್ಳುತ್ತದೆ. ನಮ್ಮ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುತ್ತದೆ. ಹೀಗಾಗಿ ಇರುವ ಅವಕಾಶಗಳನ್ನು ಪಡೆದು ಶ್ರೀಗಂಧ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು’ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಮಾತನಾಡಿ ‘ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶದಲ್ಲಿ ಅಗತ್ಯಕ್ಕೆ ತಕ್ಕಂತೆ ಆಹಾರ ಉತ್ಪಾದನೆ ಮಾಡುವ ಸಲುವಾಗಿ ರಾಸಾಯನಿಕ ಗೊಬ್ಬರ ಬಳಕೆಗೆ ಉತ್ತೇಜನ ನಿಡಲಾಯಿತು. ದೇಶ ಇಂದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರೆ ರಾಸಾಯನಿಕ ಗೊಬ್ಬರಗಳ ಅತಿ ಯಾದ ಬಳಕೆಯಿಂದ ಜಮೀನು ಬಂಜರಾಗುತ್ತದೆ. ಈ ಹಂತದಲ್ಲಿ ರೈತರು ಎಚ್ಚೆತ್ತುಕೊಳ್ಳಬೇಕು. ಮೊದಲು ಇದ್ದ ಹಾಗೆ ಮತ್ತೆ ಕೊಟ್ಟಿಗೆ ಗೊಬ್ಬರಕ್ಕೆ ಹಿಂದಿರುಗುವ ಅವಶ್ಯಕತೆ ಎದುರಾಗಿದೆ’ ಎಂದು ಹೇಳಿದರು.

‘ಮಾರುಕಟ್ಟೆಯಲ್ಲಿ ಸಾವಯವ ಗೊಬ್ಬರ ಕೊಳ್ಳಲು ಹೆಚ್ಚು ಹಣ ಖರ್ಚು ಮಾಡಬೇಕಿದೆ. ಹೀಗಾಗಿ ರೈತರು ಮನೆಯಲ್ಲಿ ತಾವೇ ಸಾವಯವ ಗೊಬ್ಬರ ಉತ್ಪಾದನೆ ಮಾಡಿಕೊಳ್ಳಬೇಕು. ಈಗ ಪೂರ್ವ ಮುಂಗಾರು ಮಳೆ ಚೆನ್ನಾಗಿದ್ದು ಈ ಕಾಲದಲ್ಲಿ ಹೊಲಕ್ಕೆ ಹಸಿರೆಲೆ ಬೀಜ ಚೆಲ್ಲುವ ಮೂಲಕ ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳಬೇಕು. ಕೇವಲ ಚಂಬೆಯಂತ ಬೀಜ ಮಾತ್ರವಲ್ಲದೇ ದ್ವಿದಳ ಧಾನ್ಯಗಳನ್ನು ಹಸಿರೆಲೆ ಗೊಬ್ಬರವಾಗಿ ಬಳಸಬಹುದು. ಬೀಜ ಚೆಲ್ಲಿ ಭೂಮಿಯಲ್ಲೇ ಬಿಟ್ಟರೆ ಅದು ಗೊಬ್ಬರವಾಗಿ ರೈತರಿಗೆ ಅನುಕೂಲ ವಾಗುತ್ತದೆ. ಹಸಿರೆಲೆ ಗೊಬ್ಬರದ ಬೀಜಗಳಿಗೆ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನ ನೀಡಲಾಗುತ್ತಿದೆ’ ಎಂದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾವಯವ ಗೊಬ್ಬರ ಉತ್ಪಾದನೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ರಾಜ್ಯ ಸರ್ಕಾರದ ಸಾವಯವ ಭಾಗ್ಯ ಸೇರಿ ಹಲವು ಯೋಜನೆಗಳು ಇವೆ. ಈ ಯೋಜನೆಯ ಲಾಭ ಪಡೆದು ರೈತರು ತಮ್ಮ ಜಮೀನಿಗೆ ಅವಶ್ಯವಿರುವ ಗೊಬ್ಬರವನ್ನು ಉತ್ಪಾದನೆ ಮಾಡಿಕೊಳ್ಳಬೇಕು. ಎರೆಹುಳು ಗೊಬ್ಬರ ತಯಾರಿಕೆಗೆ ಸರ್ಕಾರ ಸಹಾಯಧನದಲ್ಲಿ ಕಂಟೇನರ್‌ಗಳನ್ನು ನೀಡುತ್ತಿದೆ. ಜೊತೆಗೆ ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದೆ’ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮೈಸೂರು ಆಕಾಶ ವಾಣಿ ಸಹಾಯಕ ನಿರ್ದೇಶಕ ಎಚ್‌.ಶ್ರೀನಿವಾಸ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು, ಚೌಡೇಗೌಡ ಇದ್ದರು.

ಶ್ರೀಗಂಧ ಬೆಳೆಯುವ ಕ್ರಮ ಹೀಗಿದೆ

‘8 ರಿಂದ 10 ಅಡಿಗಳ ಅಂತರದಲ್ಲಿ ಶ್ರೀಗಂಧ ಸಸಿ ನೆಡಬೇಕು. ಮೂರು ಅಡಿ ಆಳದ ಗುಂಡಿಯಲ್ಲಿ ಸಸಿ ನಾಟಿ ಮಾಡಬೇಕು. ಸಸಿ ನೆಟ್ಟು ಎರಡು ಅಡಿ ಮಾತ್ರ ಗುಂಡಿಯನ್ನು ಸಾವಯವ ಗೊಬ್ಬರದಿಂದ ಮುಚ್ಚಬೇಕು. ಶ್ರೀಗಂಧ ಆರಂಭದಲ್ಲಿ ಪರಾವಲಂಬಿಯಾಗಿದ್ದು ಪಕ್ಕದಲ್ಲೇ ತೊಗರಿ ಅಥವಾ ನುಗ್ಗೆ ಗಿಡ ನೆಡಬೇಕು. ಅವುಗಳ ಸಹಾಯದಿಂದ ಶ್ರೀಗಂಧ ಸಸಿ ಬೆಳೆಯುತ್ತದೆ’ ಎಂದು ವೆಂಕಟಪ್ಪ ಹೇಳಿದರು.

‘2ರಿಂದ ಮೂರು ವರ್ಷಗಳ ಕಾಲ ನಿಯಮಿತವಾಗಿ ನೀರು ಹಾಕಬೇಕು. ನಂತರ ವಾರಕ್ಕೊಮ್ಮೆ ನೀರು ಹಾಕಿದರೂ ಗಿಡ ಸಹಿಸಿಕೊಳ್ಳುತ್ತದೆ. ಆರಂಭಿಕ ಪೋಷಣೆ ಅತಿ ಮುಖ್ಯ. ಮೂರು ವರ್ಷಗಳ ನಂತರ ಆಸರೆ ಇರುವ ತೊಗರಿ, ನುಗ್ಗೆ ಗಿಡಗಳನ್ನು ಕಟಾವು ಮಾಡಬಹುದು. ನಂತರ ಸ್ವಾವಲಂಬಿಯಾಗಿ ಬೆಳೆದುಕೊಳ್ಳುತ್ತದೆ. 10 ವರ್ಷ ತುಂಬಿಸಿದರೆ ಶ್ರೀಗಂಧ ಕೈಗೆ ಬರುತ್ತದೆ. ನಂತರ ಒಂದು ಮರ ₹ 1 ಲಕ್ಷ ಹಣ ತಂದುಕೊಡುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.