ADVERTISEMENT

ಮಂಡ್ಯ: ವಿ.ಸಿ.ಫಾರಂನಲ್ಲಿ 11 ಸಾವಿರ ಭತ್ತದ ತಳಿ!

ಉಪಯುಕ್ತ ವಂಶವಾಹಿಗಳ ಬಗ್ಗೆ ಸಂಶೋಧನೆ; ಸುಧಾರಿತ ತಳಿ ಅಭಿವೃದ್ಧಿಯ ಗುರಿ

ಸಿದ್ದು ಆರ್.ಜಿ.ಹಳ್ಳಿ
Published 10 ನವೆಂಬರ್ 2024, 0:20 IST
Last Updated 10 ನವೆಂಬರ್ 2024, 0:20 IST
<div class="paragraphs"><p>ಮಂಡ್ಯದ ವಿ.ಸಿ.ಫಾರಂನಲ್ಲಿ ಸಂಶೋಧನೆಗಾಗಿ ಭತ್ತದ ತಳಿಗಳನ್ನು ಬೆಳೆಸಲಾಗಿದೆ&nbsp; –</p></div>

ಮಂಡ್ಯದ ವಿ.ಸಿ.ಫಾರಂನಲ್ಲಿ ಸಂಶೋಧನೆಗಾಗಿ ಭತ್ತದ ತಳಿಗಳನ್ನು ಬೆಳೆಸಲಾಗಿದೆ  –

   

ಪ್ರಜಾವಾಣಿ ಚಿತ್ರ 

ಮಂಡ್ಯ: ದೇಶದ ಪ್ರಮುಖ ಆಹಾರ ಬೆಳೆಯಾದ ಭತ್ತದ 11,290 ವೈವಿಧ್ಯಮಯ ತಳಿಗಳನ್ನು ಒಂದೇ ಜಾಗದಲ್ಲಿ ಬಿತ್ತನೆ ಮಾಡಿ, ಏಕಕಾಲದಲ್ಲಿ ಬೆಳೆಸುವ ಮೂಲಕ ಮಹತ್ವದ ಸಂಶೋಧನೆಗೆ ತಾಲ್ಲೂಕಿನ ವಿ.ಸಿ. ಫಾರಂನಲ್ಲಿರುವ ಬೆಂಗಳೂರು ಕೃಷಿ ವಿ.ವಿ.ಯ ವಲಯ ಕೃಷಿ ಸಂಶೋಧನಾ ಕೇಂದ್ರ ಮುಂದಾಗಿದೆ.

ADVERTISEMENT

ಕೇಂದ್ರ ಸರ್ಕಾರದ ‘ಜೈವಿಕ ತಂತ್ರಜ್ಞಾನ ವಿಭಾಗ’ ನಿರ್ದೇಶನದ ಮೇರೆಗೆ ನಡೆಯುತ್ತಿರುವ ಈ ಸಂಶೋಧನಾ ಕಾರ್ಯಕ್ಕೆ ವಿ.ಸಿ.ಫಾರಂ ಸೇರಿದಂತೆ ರಾಷ್ಟ್ರಮಟ್ಟದ 14 ಕೃಷಿ ಸಂಶೋಧನಾ ಸಂಸ್ಥೆಗಳು ಮತ್ತು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳು ಕೈಜೋಡಿಸಿವೆ. ಐದು ವರ್ಷಗಳ ಸಂಶೋಧನೆಗೆ ಒಟ್ಟು ₹50 ಕೋಟಿ ಮೀಸಲಿಡಲಾಗಿದೆ. 

ಸ್ಥಳೀಯ ತಳಿಗಳ ಸಂರಕ್ಷಣೆ ಜೊತೆಗೆ ಅವುಗಳ ಗುಣಲಕ್ಷಣಗಳ ಅಧ್ಯಯನ ಹಾಗೂ ಅವುಗಳಲ್ಲಿರುವ ಉಪಯುಕ್ತ ವಂಶವಾಹಿಗಳ ಕುರಿತು ಸಂಶೋಧನೆ ನಡೆಸಿ, ಅಧಿಕ ಇಳುವರಿ ಮತ್ತು ರೋಗ ನಿರೋಧಕ ಗುಣಗಳಿರುವ ಸುಧಾರಿತ ತಳಿಗಳನ್ನು ಅಭಿವೃದ್ಧಿಪಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತರಹೇವಾರಿ ತಳಿ:

ರಾಜ್ಯದ ಸ್ಥಳೀಯ ಭತ್ತದ ತಳಿಗಳಾದ ಕರಿಚಿಪ್ಪಿಗ, ಗೌರಿಸಣ್ಣ, ಗಿಡ್ಡ ಬಂಗಾರಕೋವಿ, ಪರಿಮಳ ಸಣ್ಣ, ಜೀರಿಗೆ ಸಣ್ಣ, ಸಿದ್ದಸಾಲೆ, ನಂದಿ ಹಾಗೂ ಇತರ ರಾಜ್ಯಗಳ ತಳಿಗಳಾದ ಅಂಬೆಮೋಹರ್‌, ಕಾಲಜೀರಾ, ಕಾಲನಮಕ್‌, ಪೋಕ್ಕಾಲಿ, ಮಾಪಿಲ್ಲೈ ಸಾಂಬಾ ಸೇರಿದಂತೆ ಸಾವಿರಾರು ಭತ್ತದ ಪ್ರಭೇದಗಳ ವೈವಿಧ್ಯತೆಯ ಸಿರಿಯನ್ನು ವಿ.ಸಿ. ಫಾರಂನಲ್ಲಿ ಕಾಣಬಹುದಾಗಿದೆ. 

ಹಕ್ಕಿಗಳ ಕಾಟದಿಂದ ಈ ಅಪರೂಪದ ತಳಿಗಳನ್ನು ಸಂರಕ್ಷಿಸಲು ಭತ್ತದ ಗದ್ದೆಯಲ್ಲಿ ಬಲೆ ಕಟ್ಟಲಾಗಿದೆ. ಕೀಟ ಮತ್ತು ರೋಗಬಾಧೆ ನಿಯಂತ್ರಿಸಲು ಕೃಷಿ ವಿಜ್ಞಾನಿಗಳ ತಂಡ ವಿಶೇಷ ನಿಗಾ ಇಟ್ಟಿದೆ. 

ತಳಿ ಸಂರಕ್ಷಣೆ:

ದೇಶದಲ್ಲಿ ‘ಹಸಿರು ಕ್ರಾಂತಿ’ಯ ನಂತರ ಅಧಿಕ ಇಳುವರಿ ನೀಡುವ ಸಾಮರ್ಥ್ಯದ ಭತ್ತದ ತಳಿಗಳ ಅಭಿವೃದ್ಧಿಯಿಂದ ಸ್ಥಳೀಯ ತಳಿಗಳು ನಶಿಸಿ ಹೋಗುವುದರೊಂದಿಗೆ ರೈತರ ಜಮೀನುಗಳಿಂದ ಕಣ್ಮರೆಯಾಗುತ್ತಿವೆ. ಈ ಬೆಲೆ ಕಟ್ಟಲಾಗದಂತಹ ಸ್ಥಳೀಯ ತಳಿಗಳನ್ನು ಸಂರಕ್ಷಿಸುವುದು ನವದೆಹಲಿಯಲ್ಲಿರುವ ‘ರಾಷ್ಟ್ರೀಯ ಸಸ್ಯ ಅನುವಂಶಿಕ ಸಂಪನ್ಮೂಲಗಳ ಸಂಸ್ಥೆ’ಯ (ಎನ್‌.ಬಿ.ಪಿ.ಜಿ.ಆರ್‌) ಜವಾಬ್ದಾರಿಯಾಗಿದೆ. ಹೀಗಾಗಿ ಇಲ್ಲಿ ಒಂದು ಲಕ್ಷಕ್ಕೂ ಅಧಿಕ ಭತ್ತದ ತಳಿಗಳನ್ನು ಸಂಗ್ರಹಿಸಿ ಇಡಲಾಗಿದೆ. ಇಲ್ಲಿಂದಲೇ ವಿ.ಸಿ.ಫಾರಂಗೆ 11 ಸಾವಿರ ಭತ್ತದ ತಳಿಗಳನ್ನು ಕಳುಹಿಸಿ ಕೊಡಲಾಗಿದೆ’ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

‘ಈ ಸ್ಥಳೀಯ ಭತ್ತದ ಪ್ರಭೇದಗಳು ಜೈವಿಕ ಮತ್ತು ಅಜೈವಿಕ ಒತ್ತಡಗಳನ್ನು ಮೆಟ್ಟಿನಿಲ್ಲುವ ಗುಣಲಕ್ಷಣಗಳನ್ನು ಹೊಂದಿವೆ. ವಿವಿಧ ಮಣ್ಣಿನ ಪ್ರಕಾರಗಳಿಗೆ ಹೊಂದಿಕೊಂಡು ಬೆಳೆಯುವ ಮೂಲಕ ಲಕ್ಷಾಂತರ ಜನರಿಗೆ ಆಹಾರ ಭದ್ರತೆ ಖಾತ್ರಿಪಡಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ’ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ. 

ವೈವಿಧ್ಯಮಯ ಭತ್ತದ ತಳಿಗಳು 
11 ಸಾವಿರ ತಳಿಗಳ ಕುರಿತು ಸಂಶೋಧನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮುಂದಿನ ವರ್ಷ ವರದಿ ಸಲ್ಲಿಸುತ್ತೇವೆ. ಇದರಿಂದ ರೋಗ ನಿರೋಧಕ ಶಕ್ತಿಯುಳ್ಳ ತಳಿಗಳ ಅಭಿವೃದ್ಧಿಗೆ ನೆರವಾಗಲಿದೆ
ಎನ್‌.ಶಿವಕುಮಾರ್‌ ಸಹ ಸಂಶೋಧನಾ ನಿರ್ದೇಶಕ ವಿ.ಸಿ.ಫಾರಂ ಮಂಡ್ಯ
‘ಉಪಯಕ್ತ ಅಂಶಗಳ ವರ್ಗಾವಣೆ’
‘ಮಂಡ್ಯದ ವಿ.ಸಿ.ಫಾರಂನಲ್ಲಿ 11 ಸಾವಿರ ಭತ್ತದ ತಳಿಗಳ ಗುಣಧರ್ಮವನ್ನು ವಿಶ್ಲೇಷಿಸುವುದು ಮುಖ್ಯ ಧ್ಯೇಯವಾಗಿದೆ. ಎಲೆ ಬೆಂಕಿರೋಗ ಕುತ್ತಿಗೆ ಬೆಂಕಿರೋಗ ತೆನೆ ಕವಚ ಕೊಳೆ ರೋಗ ಮತ್ತು ಕಂದು ಜಿಗಿಹುಳುಗಳ ನಿರೋಧಕತೆ ಪರೀಕ್ಷಿಸಿ ಅವುಗಳ ವಿಶಿಷ್ಟತೆ ಏಕರೂಪತೆ ಮತ್ತು ಸ್ಥಿರತೆಯ ಗುಣಲಕ್ಷಣಗಳನ್ನು ಅಧ್ಯಯನ ಮಾಡುತ್ತೇವೆ. ಈ ಸಾವಿರಾರು ತಳಿಗಳಲ್ಲಿರುವ ಉಪಯುಕ್ತ ಅಂಶಗಳನ್ನು ಒಗ್ಗೂಡಿಸಿ ಹೊಸ ತಳಿಗಳಿಗೆ ವರ್ಗಾಯಿಸುವ ಉದ್ದೇಶ ಹೊಂದಲಾಗಿದೆ’ ಎಂದು ವಿ.ಸಿ.ಫಾರಂನ ಭತ್ತದ ತಳಿ ವಿಜ್ಞಾನಿ ಸಿ.ಎ. ದೀಪಕ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.