ಭಾರತೀನಗರ: ರಾಜ್ಯದಲ್ಲಿ ನರಗುಂದ, ನವಲಗುಂದ, ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಸೇರಿದಂತೆ ವಿವಿಧೆಡೆ ನಡೆದ ಗೋಲಿಬಾರ್‌ನಿಂದ 159 ಮಂದಿ ರೈತರು ಪೋಲಿಸರ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಇಲ್ಲಿಯ ಕಾಡಾ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಭಾನುವಾರ ನಡೆದ ಗೆಜ್ಜಲಗೆರೆ ಗೋಲಿಬಾರ್‌ನಲ್ಲಿ ಮಡಿದ ರೈತರ 42ನೇ ವರ್ಷದ ಹುತಾತ್ಮ ದಿನಾಚರಣೆ ಅಂಗವಾಗಿ ತಾಲ್ಲೂಕು ಮಟ್ಟದ ಬೃಹತ್ ರೈತರ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.
ಪ್ರಾರಂಭದಲ್ಲಿ ಕಬ್ಬು ಬೆಳೆಗಾರರಿಗಾಗಿ ಸ್ಥಾಪಿಸಿದ್ದ ಸಂಘವೇ ಮುಂದೆ ರೈತ ಸಂಘವಾಯಿತು. ಇಲ್ಲಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯೂ ಸೇರಿದಂತೆ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳ ರೈತ ವಿರೋಧಿ ನೀತಿಯಿಂದಾಗಿ ನಡೆದ ರೈತ ಚಳವಳಿಗಳನ್ನು ಹತ್ತಿಕ್ಕಲು ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಗೋಲಿಬಾರ್ ಮಾಡಿಸಿದ್ದರು ಎಂದು ತಿಳಿಸಿದರು.
ಹುತಾತ್ಮರಾದ ಎಲ್ಲಾ ರೈತ ನಾಯಕರು, ರೈತಪರ ಹೋರಾಟಗಾರರ ದಾಖಲೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆರ ತಲುಪಿಸುವ ಸಲುವಾಗಿ ಯೋಜನೆ ರೂಪಿಸಲಾಗಿತದೆ. ರಾಜ್ಯದಾದ್ಯಂತ ಪ್ರತೀ ವಾರ್ಡ್‌ನಲ್ಲೂ ರೈತ ಕಾರ್ಯಕರ್ತರನ್ನು ಹುಟ್ಟುಹಾಕಲು ಸದಸ್ಯತ್ವ ನೋಂದಣಿ ಮಾಡಲಾಗುವುದು ಎಂದು ಹೇಳಿದರು.
ವಿಭಾಗೀಯ ಘಟಕದ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಇಲ್ಲಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ 1982 ರಲ್ಲಿ ಕಾರ್ಖಾನೆಗೆ ಒಪ್ಪಿಗೆ ಮಾಡಿದ ರೈತರಿಗೆ ಒಂದು ರೀತಿಯ ಹಣ, ಒಪ್ಪಿಗೆ ಮಾಡಿಸದ ರೈತರಿಗೆ ಒಂದು ರೀತಿಯ ಹಣ ನೀಡುತ್ತಿತ್ತು. ಇದರಿಂದ ಬೇಸತ್ತು ರೈತರು ಹೋರಾಟಕ್ಕಿಳಿದಿದ್ದು, ಬಂಡವಾಳ ಶಾಹಿಗಳ ಪರವಾಗಿದ್ದ ಗುಂಡೂರಾವ್ ಸರ್ಕಾರ ವಳಗೆರೆಹಳ್ಳಿ ನಾಥೇಗೌಡ, ಗೆಜ್ಜಲಗೆರೆ ಸಿದ್ದಪ್ಪ ಅವರನ್ನು ಗುಡಿಕ್ಕಿ ಕೊಂದಿತು. ಸಕ್ಕರೆ ಕಾರ್ಖಾನೆಗಳು ಇಂದಿಗೂ ಕೂಡ ಕಬ್ಬಿಗೆ ಸರಿಯಾದ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಯಧುಶೈಲ ಸಂಪತ್ ಧ್ವಜಾರೋಹಣ ನೆರವೇರಿಸಿದರು. ನಂತರ ಹುತಾತ್ಮ ರೈತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಚಾಮರಾಜನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹೇಶ್‌ಪ್ರಭು, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಸೇರಿದಂತೆ ಮತ್ತಿತರರು ಮಾತನಾಡಿದರು. ರಾಜ್ಯ ಹಾಗೂ ವಿವಿಧ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎಂವಿ.ರಾಜೇಗೌಡ, ವಿ.ಸಿ.ಉಮೇಶ್, ಶೈಲೇಂದ್ರ, ಮಲ್ಲಿಗೆರೆ ಅಣ್ಣಯ್ಯ, ಭಾಸ್ಕರ್, ರತ್ನಮ್ಮ, ಶಂಭೂಗೌಡ, ಬಾಲರಾಜು, ಕ್ಯಾತನಹಳ್ಳಿ ಗೋವಿಂದೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.