ADVERTISEMENT

ಸುಳ್ಳು ದಾಖಲೆ | 2.48 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ ರದ್ದು

ಸುಳ್ಳು ದಾಖಲೆ ಪತ್ತೆ ಹಚ್ಚಿದ ಕಾರ್ಮಿಕ ಕಲ್ಯಾಣ ಮಂಡಳಿ

ಸಿದ್ದು ಆರ್.ಜಿ.ಹಳ್ಳಿ
Published 18 ಅಕ್ಟೋಬರ್ 2024, 22:45 IST
Last Updated 18 ಅಕ್ಟೋಬರ್ 2024, 22:45 IST
   

ಮಂಡ್ಯ: ‘ರಾಜ್ಯದಲ್ಲಿ ನಕಲಿ ಕಾರ್ಮಿಕರ ಸಂಖ್ಯೆ ಮಿತಿಮೀರಿದ್ದು, ಸರ್ಕಾರಿ ಸವಲತ್ತುಗಳು ಅನರ್ಹರ ಪಾಲಾಗುತ್ತಿವೆ’ ಎಂಬ ದೂರು ಆಧರಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 31 ಜಿಲ್ಲೆಗಳಲ್ಲಿ 2.48 ಲಕ್ಷ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. 

ಮಂಡಳಿಯಲ್ಲಿ 18.49 ಲಕ್ಷ ಮಹಿಳೆಯರು, 27.83 ಲಕ್ಷ ಪುರುಷರು ಹಾಗೂ 9,076 ಇತರೆ ಸೇರಿ ಒಟ್ಟು 46.42 ಲಕ್ಷ ಕಾರ್ಮಿಕರು ನೋಂದಾಯಿಸಿಕೊಂಡು, ‘ಸ್ಮಾರ್ಟ್‌ ಕಾರ್ಡ್‌’ ಪಡೆದಿದ್ದರು.

ಹಾವೇರಿ (1.69 ಲಕ್ಷ) ಬೀದರ್‌ (25,759) ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ (6,900) ಅತಿ ಹೆಚ್ಚು, ರಾಯಚೂರು (383), ಉಡುಪಿ (210), ಕೊಡಗು (175) ಜಿಲ್ಲೆಯಲ್ಲಿ ಅತಿ ಕಡಿಮೆ ಕಾರ್ಡ್‌ಗಳು ಪತ್ತೆಯಾಗಿವೆ. 

ADVERTISEMENT

ಹಾವೇರಿ ಮಾದರಿ ಕಾರ್ಯಾಚರಣೆ:

ಹಾವೇರಿ ಜಿಲ್ಲೆಯೊಂದರಲ್ಲೇ 2.96 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದರು. ದೂರಿನ ಮೇರೆಗೆ, ರಾಜ್ಯದಲ್ಲೇ ಮೊದಲ ಬಾರಿಗೆ ಜನವರಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಬಳಿಕ, 2.23 ಲಕ್ಷ ಕಾರ್ಡ್‌ಗಳು ನಕಲಿ ಎಂಬುದು ಮೇಲ್ನೋಟಕ್ಕೆ ಪತ್ತೆಯಾಗಿತ್ತು. ನಂತರ ಬಂದ ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಿ, ದಾಖಲಾತಿ ಪರಿಶೀಲನೆ ನಡೆಸಿ 1.69 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ಅಧಿಕಾರಿಗಳು ರದ್ದುಪಡಿಸಿದ್ದಾರೆ. ಉಳಿದ ಜಿಲ್ಲೆಗಳಲ್ಲೂ ‘ಹಾವೇರಿ ಮಾದರಿ’ಯಲ್ಲೇ ಕಾರ್ಯಾಚರಣೆ ನಡೆಸಿ, ಅನರ್ಹರು ಪಡೆದಿದ್ದ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. 

ಶಿಕ್ಷಕರು, ಪೊಲೀಸರು, ಖಾಸಗಿ ಕಂಪನಿ ನೌಕರರು, ವಾಹನ ಚಾಲಕರು, ಟೈಲರ್‌ಗಳು, ಕೃಷಿ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹೋಟೆಲ್‌ ಕೆಲಸಗಾರರು ಸೇರಿದಂತೆ ಸಾವಿರಾರು ಮಂದಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ‘ಕಟ್ಟಡ ಕಾರ್ಮಿಕರ’ ಹೆಸರಿನಲ್ಲಿ ಸ್ಮಾರ್ಟ್‌ ಕಾರ್ಡ್‌ ಪಡೆದಿರುವುದು ಬಹಿರಂಗಗೊಂಡಿದೆ. 

ಸೌಲಭ್ಯಕ್ಕಾಗಿ ಸುಳ್ಳು ದಾಖಲೆ: 

‘ಕೋವಿಡ್‌ ವೇಳೆ ಕಟ್ಟಡ ಕಾರ್ಮಿಕರ ಕಾರ್ಡ್‌ಗಳು ದಿಢೀರ್‌ ಹೆಚ್ಚಾದವು. ಕಾರ್ಮಿಕ ಇಲಾಖೆಯಿಂದ ನೀಡಿದ ಆಹಾರ ಕಿಟ್‌ ಮತ್ತು ಕಾರ್ಮಿಕರ ಖಾತೆಗೆ ₹3 ಸಾವಿರ ಪ್ರೋತ್ಸಾಹಧನಕ್ಕಾಗಿ ಕಾರ್ಮಿಕರಲ್ಲದವರು ಕಾರ್ಡ್‌ ಮಾಡಿಸಿಕೊಂಡು, ಸೌಲಭ್ಯಕ್ಕೆ ಮುಗಿಬಿದ್ದರು. ಹಳ್ಳಿಗಳಲ್ಲಿ ಏಜೆಂಟರೂ ಹುಟ್ಟಿಕೊಂಡು ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡರು’ ಎಂದು ಕಾರ್ಮಿಕ ಅಧಿಕಾರಿಯೊಬ್ಬರು ತಿಳಿಸಿದರು.  

‘ಕಾರ್ಮಿಕರು ಸಲ್ಲಿಸಿದ ದಾಖಲಾತಿ ಪರಿಶೀಲನೆ ಜತೆಗೆ 90 ದಿನ ಕೆಲಸ ಮಾಡಿರುವುದನ್ನು ಖಚಿತಪಡಿಸಿಕೊಂಡು ಹೊಸ ನೋಂದಣಿ ಮತ್ತು ನವೀಕರಣ ಮಾಡುತ್ತಿದ್ದೇವೆ. ಮಂಡ್ಯ ಜಿಲ್ಲೆಯಲ್ಲೂ 396 ಅನರ್ಹರ ಕಾರ್ಡ್‌ಗಳನ್ನು ರದ್ದುಪಡಿಸಿದ್ದೇವೆ’ ಎಂದು ಕಾರ್ಮಿಕ ಅಧಿಕಾರಿ ಸುಭಾಷ್‌ ಆಲದಕಟ್ಟಿ ತಿಳಿಸಿದರು. 

ರಾಜ್ಯದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ, ಕಾರ್ಮಿಕರ ಸೌಲಭ್ಯ ಕಬಳಿಸುತ್ತಿದ್ದ 2.48 ಲಕ್ಷ ಅನರ್ಹರ ಕಾರ್ಡ್‌ಗಳನ್ನು ರದ್ದುಪಡಿಸಿದ್ದೇವೆ
ಡಿ.ಭಾರತಿ ಸಿಇಒ, ಕಾರ್ಮಿಕ ಕಲ್ಯಾಣ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.