ADVERTISEMENT

ಮಂಡ್ಯ: 290 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿ ಜಪ್ತಿ

ಜಿಲ್ಲೆಯಲ್ಲಿ ಮುಂದುವರಿದ ಅಕ್ಕಿ ಅವ್ಯವಹಾರ, ರೈಸ್‌ಮಿಲ್‌ಗಳ ಮೇಲೆ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 16:46 IST
Last Updated 26 ಸೆಪ್ಟೆಂಬರ್ 2021, 16:46 IST
ಅಕ್ಕಿ
ಅಕ್ಕಿ   

ಮಂಡ್ಯ: ತಾಲ್ಲೂಕಿನ ಉಮ್ಮಡಹಳ್ಳಿ ಗೇಟ್‌ ಬಳಿ ನಿಂತಿದ್ದ ಲಾರಿಯಲ್ಲಿ ಶನಿವಾರ ರಾತ್ರಿ 250 ಕ್ವಿಂಟಲ್‌ ಅನ್ನಬಾಗ್ಯ ಅಕ್ಕಿ ಪತ್ತೆಯಾಗಿದೆ. ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಭಾನುವಾರ ಬೆಳಿಗ್ಗೆ ಲಾರಿ ಹಾಗೂ ಅಕ್ಕಿ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಕಿ ಚೀಲ ತುಂಬಿದ 12 ಚಕ್ರದ ಲಾರಿ ನಿಂತಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಶನಿವಾರ ರಾತ್ರಿ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಬಂದ ಪೊಲೀಸರು ಲಾರಿ ಜಪ್ತಿ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಗೆ ಪಡಿತರ ಅಕ್ಕಿ ಕೊಂಡೊಯ್ಯಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಸ್ಥಳಕ್ಕೆ ಭೇಟಿ ನೀಡಿದಾಗ ಲಾರಿಯ ಮೊದಲನೇ ಸಾಲಿನಲ್ಲಿದ್ದ ಸುಮಾರು 15 ಅಕ್ಕಿ ಚೀಲ ಕಣ್ಮರೆಯಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆಹಾರ ಮತ್ತು ನಾಗರಿಕ ಇಲಾಖೆ ಉಪ ನಿರ್ದೇಶಕಿ ಸೌಮ್ಯ ದೂರು ನೀಡಿದ್ದು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ADVERTISEMENT

ರೈಸ್‌ಮಿಲ್‌ ಮೇಲೆ ದಾಳಿ: ಘಟನೆಯ ನಂತರ ಭಾನುವಾರ ಆಹಾರ ಇಲಾಖೆ ಅಧಿಕಾರಿಗಳು ಹಲವು ರೈಸ್‌ಮಿಲ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಗಾಣಧಾಳು ಗ್ರಾಮದ ಪರಮೇಶ್ವರ ರೈಸ್‌ಮಿಲ್‌ನಲ್ಲಿ 40 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದೆ. ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಮಿಲ್‌ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಿಂದ ರಾಜ್ಯದ ವಿವಿಧೆಡೆಗೆ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸರಬರಾಜಾಗುತ್ತಿರುವ ಬಗ್ಗೆ ಹಲವು ದೂರುಗಳು ದಾಖಲಾಗಿವೆ. ಬೆಂಬಲ ಬೆಲೆಯಲ್ಲಿ ಸಂಗ್ರಹಿಸಿದ ಭತ್ತವನ್ನೂ ಅಕ್ರಮವಾಗಿ ಸಾಗಣೆ ಮಾಡಿರುವ ಬಗ್ಗೆ ರೈಸಮಿಲ್‌ ಮಾಲೀಕರ ವಿರುದ್ಧ ದೂರು ದಾಖಲಾಗಿವೆ.

‘ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಗುತ್ತಿಗೆದಾರ ವಿಶ್ವನಾಥ್‌, ಗಾಣಧಾಳು ಗ್ರಾಮದ ಪರಮೇಶ್ವರ ರೈಸ್‌ ಮಿಲ್‌ ಮಾಲೀಕರ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗುವುದು’ ಎಂದು ಆಹಾರ ಇಲಾಖೆ ಉಪ ನಿರ್ದೇಶಕಿ ಸೌಮ್ಯಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.