ಮಂಡ್ಯ: ‘ವಕ್ಫ್‌ಬೋರ್ಡ್‌ನವರು ಮೊದಲು ಬೆಂಗಳೂರಿನಲ್ಲಿರುವ ಐಷಾರಾಮಿ ಹೋಟೆಲ್‌ಗಳಾದ ವಿಂಡ್ಸರ್ ಮ್ಯಾನರ್, ರ್‍ಯಾಡಿಸನ್ ಬ್ಲೂ, ಏರ್‌ಲೈನ್ಸ್ ಹೊಟೇಲ್‌ಗಳನ್ನು ವಶಕ್ಕೆ ಪಡೆದು ‘ವಕ್ಫ್ ಆಸ್ತಿ’ ಎಂದು ಫಲಕ ಹಾಕಲಿ. ಆ ಜಾಗಗಳು ಸಾವಿರಾರು ಕೋಟಿ ರೂಪಾಯಿ ಮೌಲ್ಯದ್ದಾಗಿವೆ. ಅದನ್ನು ಬಿಟ್ಟು ರೈತರ ಜಾಗವನ್ನು ಕಬಳಿಕೆ ಮಾಡಲು ಬಂದರೆ ಸುಮ್ಮನಿರುವುದಿಲ್ಲ’ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ರವಿಕುಮಾರ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಮುತ್ತೇಗೆರೆ ಗ್ರಾಮದಲ್ಲಿ ₹10 ಕೋಟಿ ವೆಚ್ಚದಲ್ಲಿ ಬಸರಾಳು-ಮುತ್ತೇಗೆರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಬಿಜೆಪಿ- ಜೆಡಿಎಸ್ ಅಧಿಕಾರ ಅವಧಿಯಲ್ಲಿ ವಕ್ಫ್ ಆಸ್ತಿಗಳನ್ನು ಗುರುತಿಸಿ ನೋಟಿಸ್ ನೀಡಲಾಗಿತ್ತು. ಮೊಳಕೆ ಹಾಕಿದ್ದೂ ಅವರೇ, ಅದಕ್ಕೆ ನೀರು, ಗೊಬ್ಬರ ಹಾಕಿ ಪೋಷಿಸಿ ಈಗ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸಲು ಕುತಂತ್ರ ನಡೆಸುತ್ತಿದ್ದಾರೆ. ಯಾವ ಕುತಂತ್ರವೂ ನಡೆಯುವುದಿಲ್ಲ. ಇದೊಂದು ರೀತಿಯಲ್ಲಿ ರಾಜಕಾರಣದ ಭಯೋತ್ಪಾದನೆಯಾಗಿದೆ ಎಂದು ಟೀಕಿಸಿದರು.
ಶಾಲಿನಿ ರಜನೀಶ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ವೇಳೆ 26 ಸಾವಿರ ಎಕರೆ ಪ್ರದೇಶವನ್ನು ವಕ್ಫ್ ಆಸ್ತಿಯನ್ನಾಗಿ ಘೋಷಿಸಿದ್ದರೆ ಅವರ ವಿರುದ್ಧವೂ ತನಿಖೆಯಾಗಲಿ. ನೋಟಿಸ್ ಹಿಂಪಡೆಯುವ ಜತೆಗೆ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಮಾಡಿರುವ ಅಧಿಸೂಚನೆಯನ್ನೂ ವಾಪಸ್ ಪಡೆಯಬೇಕು ಎಂದು ತಮ್ಮದೇ ಸರ್ಕಾರವನ್ನು ಒತ್ತಾಯಿಸಿದರು.
ಬಸವರಾಜ ಬೊಮ್ಮಾಯಿ ಅವರಿಗೆ ಎರಡು ನಾಲಿಗೆ. ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸವನ್ನು ಮಾಡುತ್ತಾರೆ ಎಂದು ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಬೊಮ್ಮಾಯಿ ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಗೆಲ್ಲಲಿದ್ದಾರೆ. ಯಾವುದೇ ಒಳ ಒಪ್ಪಂದವಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನಾವೇ ನಿಜವಾದ ಒಕ್ಕಲಿಗರು. ರೆಬಲ್ ಒಕ್ಕಲಿಗರಲ್ಲ. ಆದರೆ ಜನ ಚುನಾವಣೆಗಳಲ್ಲಿ ನಮ್ಮನ್ನು ಏಕೆ ಬೆಂಬಲಿಸುವುದಿಲ್ಲ ಎಂಬುದು ಅರ್ಥವಾಗದ ಪ್ರಶ್ನೆಯಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ ಅವರು 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಕಳೆದ ಬಾರಿ ಕುಮಾರಸ್ವಾಮಿ ಗೆದ್ದಿದ್ದರು. ಆದರೆ, ಆ ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆಯೂ ಸರಿಯಾಗಿಲ್ಲ. ಹೀಗಾಗಿಯೇ ನಿಖಿಲ್ ಮೊನ್ನೆ ಬೈಕ್‌ನಲ್ಲಿ ಬಿದ್ದಿದ್ದು’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.