ಮಂಡ್ಯ: ಚುನಾವಣಾ ವೆಚ್ಚದ ವಿವರ ಸಲ್ಲಿಸದ ಕಾರಣ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಲ್ವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರನ್ನು ಅಭ್ಯರ್ಥಿಗಳನ್ನು ಕೇಂದ್ರ ಚುನಾವಣಾ ಆಯೋಗ ಅನರ್ಹಗೊಳಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸುಮಲತಾ ಅವರ ಜೊತೆಗೆ ಅವರದೇ ಹೆಸರಿನ ಮೂವರು ಸ್ಪರ್ಧಿಸಿ ಸೋತಿದ್ದರು. ಅವರಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು, ಟಿ.ಎಂ.ಹೊಸೂರು ಗ್ರಾಮದ ಸುಮಲತಾ, ಕೆ.ಆರ್.ಪೇಟೆ ತಾಲ್ಲೂಕು ಬಿಲ್ಲೇನಹಳ್ಳಿ ಗ್ರಾಮದ ಎಂ.ಸುಮಲತಾ ಅವರನ್ನು ಅನರ್ಹಗೊಳಿಸಲಾಗಿದೆ.
ಇವರ ಜೊತೆಗೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಎನ್.ಸಿ.ಪುಟ್ಟೇಗೌಡ, ಅರವಿಂದ್ ಪ್ರೇಮಾನಂದ್ ಅವರನ್ನೂ ಅನರ್ಹಗೊಳಿಸಲಾಗಿದೆ. ಜುಲೈ 7, 2022ರಿಂದ ಅನ್ವಯವಾಗುವಂತೆ ಅನರ್ಹಗೊಳಿಸಲಾಗಿದ್ದು ಜುಲೈ 7, 2025ರವರೆಗೆ 3 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸೂಚಿಸಲಾಗಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಅಭ್ಯರ್ಥಿಯಾಗಿದ್ದ ಎಸ್.ಎಸ್.ಲಿಂಗೇಗೌಡ, ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆ.ಆರ್.ಶಿವಮಾದೇಗೌಡ (ಇಬ್ಬರೂ ಮದ್ದೂರು ಕ್ಷೇತ್ರ), ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಎಸ್.ಗೌಡ ಅವರನ್ನು ಅನರ್ಹಗೊಳಿಸಲಾಗಿದೆ. ಇವರ ಅನರ್ಹತೆ ಡಿ.2, 2021ರಿಂದ ಅನ್ವಯವಾಗಲಿದ್ದು ಡಿ.2, 2024ರವರೆಗೂ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸೂಚಿಸಲಾಗಿದೆ.
‘ಜನಪ್ರತಿನಿಧಿಗಳ ಕಾಯ್ದೆ ಕಲಮು 10ಎ ಅಡಿ ವೆಚ್ಚದ ವಿವರ ನೀಡದ 7 ಮಂದಿಯನ್ನು ಜ.18, 2023ರಂದೇ ಅನರ್ಹಗೊಳಿಸಲಾಗಿದೆ. ಅನರ್ಹತೆ ಶಿಕ್ಷೆ ಅನುಭವಿಸುತ್ತಿರುವ ಇವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ. ಹೀಗಾಗಿ ಎಲ್ಲಾ ತಾಲ್ಲೂಕುಗಳ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.