ಮಂಡ್ಯ: ‘ಸಕ್ಕರೆ ನಾಡು’ ಮಂಡ್ಯದಲ್ಲಿ ಡಿ.20ರಿಂದ ಮೂರು ದಿನ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಪಟ್ಟಕ್ಕೆ ನಾಡಿನ ಎಲ್ಲೆಡೆಯಿಂದ ಅರ್ಜಿಗಳ ಮಹಾಪೂರವೇ ಹರಿದು ಬರುತ್ತಿದೆ.
‘ಕತೆ, ಕಾವ್ಯ, ನಾಟಕ, ಕಾದಂಬರಿ ಕ್ಷೇತ್ರದಲ್ಲಿ ಕೃಷಿ ಮಾಡಿರುವ ಕವಿ ಮತ್ತು ಸಾಹಿತಿಗಳ ಜತೆಗೆ ವೈದ್ಯಕೀಯ, ವಿಜ್ಞಾನ, ಕ್ರೀಡೆ, ಮಾಧ್ಯಮ, ಸಂಗೀತ ಮತ್ತು ಸಿನಿಮಾ ಸಾಹಿತ್ಯದಲ್ಲಿ ಕೃಷಿ ಮಾಡಿರುವವರನ್ನೂ ಸಮ್ಮೇಳನಾಧ್ಯಕ್ಷರನ್ನಾಗಿ ನೇಮಿಸಲು ಪರಿಗಣಿಸಬೇಕು’ ಎಂದು ಕೇಂದ್ರ ಕಸಾಪ ಅಧ್ಯಕ್ಷರಿಗೆ ಅರ್ಜಿ ಮತ್ತು ಚೀಟಿಗಳು ವಿವಿಧ ಜಿಲ್ಲೆಗಳಿಂದ ಬಂದಿವೆ.
ವಿಶೇಷವೆಂದರೆ, ‘ಸಾಹಿತ್ಯ ರಚನೆ ಮತ್ತು ಪ್ರಕಟಣೆಯಲ್ಲಿ ತೊಡಗಿರುವ ಸ್ವಾಮೀಜಿ, ಕನ್ನಡದಲ್ಲಿ ತೀರ್ಪು ಕೊಟ್ಟ ನ್ಯಾಯಮೂರ್ತಿ, ಕೃತಿಗಳನ್ನು ರಚಿಸಿರುವ ರಾಜಕಾರಣಿಗಳನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು’ ಎಂದು ಹಲವರು ದುಂಬಾಲು ಬಿದ್ದಿದ್ದಾರೆ.
‘ಸಮ್ಮೇಳನಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಲೇಖಕಿಯರನ್ನು ನಿರಂತರವಾಗಿ ಕಡೆಗಣಿಸುತ್ತಿರುವುದರಿಂದ, ಈ ಬಾರಿ ಲೇಖಕಿ ಅಥವಾ ಕವಯತ್ರಿಗೆ ಆದ್ಯತೆ ನೀಡಿ’ ಎಂಬ ಸಲಹೆಗಳೂ ಬಂದಿವೆ.
87 ಪುಸ್ತಕಗಳು
ಮಂಡ್ಯದಲ್ಲಿ ನಡೆಯುವ 87ನೇ ನುಡಿಜಾತ್ರೆಗೆ 87 ಪುಸ್ತಕಗಳನ್ನು ಹೊರತರಲು ಕಸಾಪ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ಮಂಡ್ಯ ಜಿಲ್ಲೆಯ ಪ್ರಾತಿನಿಧಿಕ ಪುಸ್ತಕಗಳು 40 ಮತ್ತು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪ್ರಕಟಗೊಂಡಿರುವ 47 ಮೌಲ್ಯಯುತ ಪುಸ್ತಕಗಳನ್ನು ಮರುಮುದ್ರಿಸುವ ಚಿಂತನೆ ನಡೆದಿದೆ.
‘ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ರಾಜಕೀಯ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವ ಕೃತಿಗಳು ಮತ್ತು ತಾಲ್ಲೂಕು ದರ್ಶನ ಪುಸ್ತಕಗಳನ್ನು ಹೊರತರಬೇಕು’ ಎಂಬ ಅಭಿಲಾಷೆ ಜಿಲ್ಲಾ ಕಸಾಪ ಪದಾಧಿಕಾರಿಗಳದ್ದು. ಮಂಡ್ಯದಲ್ಲಿ 1974ರಲ್ಲಿ ನಡೆದ 48ನೇ ಸಾಹಿತ್ಯ ಸಮ್ಮೇಳನ ಮತ್ತು 1994ರಲ್ಲಿ ನಡೆದ 63ನೇ ಸಮ್ಮೇಳನದ ‘ಸ್ಮರಣ ಸಂಚಿಕೆ’ಗಳನ್ನು ಮರು ಮುದ್ರಿಸುವ ಬಗ್ಗೆ ಚರ್ಚೆ ನಡೆದಿದೆ.
ಗರಿಗೆದರಿದ ಚಟುವಟಿಕೆ
ಸಮ್ಮೇಳನದ ದಿನಾಂಕವನ್ನು ಮುಖ್ಯಮಂತ್ರಿ ಘೋಷಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಸಿದ್ಧತೆಗಳು ಗರಿಗೆದರಿವೆ. ಸಮ್ಮೇಳನ ನಡೆಸಲು ‘ಚಿಕ್ಕಮಂಡ್ಯ ಕೆರೆ ಬಯಲು ಮತ್ತು ಮೈಸೂರು– ಬೆಂಗಳೂರು ರಸ್ತೆಯ ಅಮರಾವತಿ ಹೋಟೆಲ್ ಹಿಂಭಾಗದ 75 ಎಕರೆ ಜಾಗ ಗುರುತಿಸಿದ್ದು, ಸ್ಥಳವನ್ನು ಅಂತಿಮಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.
ಸಮಿತಿಗಳ ರಚನೆ, ಸ್ವಾಗತ ಸಮಿತಿ, ಸಮ್ಮೇಳನಾಧ್ಯಕ್ಷರ ಆಯ್ಕೆ, ಲಾಂಛನ ಬಿಡುಗಡೆ, ಪುಸ್ತಕಗಳ ಆಯ್ಕೆ, ಕಲಾತಂಡಗಳ ಆಯ್ಕೆ ಕುರಿತು ಚರ್ಚೆ ಆರಂಭವಾಗಿದೆ.
ಬೆಂಗಳೂರಿನ ಕಸಾಪ ಭವನದಲ್ಲಿ ಬುಧವಾರ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಕಾರ್ಯಕಾರಿ ಸಮಿತಿ, ಜಿಲ್ಲಾ ಕಸಾಪ ಪದಾಧಿಕಾರಿಗಳು ಮತ್ತು ಮಂಡ್ಯ ಹೆಚ್ಚುವರಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅಧ್ಯಕ್ಷರ ನಾಮನಿರ್ದೇಶನ
‘ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ರವಿಕುಮಾರ್ ಚಾಮಲಾಪುರ ಅವರು ಇದೇ ಮಾರ್ಚ್‌ನಲ್ಲಿ ಮೃತಪಟ್ಟಿದ್ದರಿಂದ, ಕಸಾಪ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಎಲ್ಲರ ಒಪ್ಪಿಗೆ ಮೇರೆಗೆ ಸಮ್ಮೇಳನದ ಜವಾಬ್ದಾರಿ ನಿರ್ವಹಿಸಲು ಅರ್ಹ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡುತ್ತೇವೆ. ಜನರ ಸಹಕಾರ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುತ್ತೇವೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
ಕಸಾಪ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯ ಮತ್ತು ಸರ್ಕಾರದ ಜತೆ ಸಮಾಲೋಚನೆ ಬಳಿಕ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ₹30 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ
–ಮಹೇಶ ಜೋಶಿ ಕಸಾಪ ಅಧ್ಯಕ್ಷ
ಸಾಹಿತ್ಯಾಸಕ್ತರಿಗೆ ಮುದ್ದೆ ಬೆಣ್ಣೆಯ ಆತಿಥ್ಯ! ‘ಮಂಡ್ಯ ಸಮ್ಮೇಳನಕ್ಕೆ ನಿತ್ಯ ಸುಮಾರು 3 ಲಕ್ಷ ಜನ ಬರುವ ನಿರೀಕ್ಷೆಯಿದೆ. ಎಲ್ಲ ಸಾಹಿತ್ಯಾಸಕ್ತರಿಗೆ ಮುದ್ದೆ ಮತ್ತು ಸೊಪ್ಪಿನ ಸಾರು ನಾಟಿ ಬೆಣ್ಣೆ ಸಾವಯವ ಬೆಲ್ಲದ ಪಾಯಸ ಬಡಿಸಲು ಉತ್ಸುಕರಾಗಿದ್ದೇವೆ. ಮಂಡ್ಯದ ದೇಸಿ ಕಲೆಗಳಾದ ಕೋಲಾಟ ಗಾರುಡಿಗೊಂಬೆ ಪೂಜಾ ಕುಣಿತಗಳು ಮೇಳೈಸಲಿವೆ’ ಎಂದು ಮಂಡ್ಯ ಜಿಲ್ಲಾ ಕಸಾಪದ ಗೌರಾವಾಧ್ಯಕ್ಷ ಕೃಷ್ಣೇಗೌಡ ಹುಸ್ಕೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.