ADVERTISEMENT

ಶ್ರೀರಂಗಪಟ್ಟಣ: ನಡುಗಡ್ಡೆಯಲ್ಲಿ ಸಿಲುಕಿದ ಅಗ್ನಿಶಾಮಕ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 16:03 IST
Last Updated 1 ಆಗಸ್ಟ್ 2024, 16:03 IST
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಸಮೀಪ ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಗೌತಮ ಕ್ಷೇತ್ರದಲ್ಲಿರುವ ಗಜಾನನ ಸ್ವಾಮೀಜಿ ಮತ್ತು ಇಬ್ಬರು ಮಹಿಳೆಯರನ್ನು ಕರೆತರಲು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ ಮತ್ತು ಇಬ್ಬರು ಅಗ್ನಿಶಾಮಕರು ಡೀಸೆಲ್‌ ಯಂತ್ರ ಚಾಲಿತ ಫೈಬರ್‌ ದೋಣಿಯಲ್ಲಿ ಗುರುವಾರ ನಡುಗಡ್ಡೆಗೆ ತೆರಳಿದ ದೃಶ್ಯ
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಸಮೀಪ ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಗೌತಮ ಕ್ಷೇತ್ರದಲ್ಲಿರುವ ಗಜಾನನ ಸ್ವಾಮೀಜಿ ಮತ್ತು ಇಬ್ಬರು ಮಹಿಳೆಯರನ್ನು ಕರೆತರಲು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ ಮತ್ತು ಇಬ್ಬರು ಅಗ್ನಿಶಾಮಕರು ಡೀಸೆಲ್‌ ಯಂತ್ರ ಚಾಲಿತ ಫೈಬರ್‌ ದೋಣಿಯಲ್ಲಿ ಗುರುವಾರ ನಡುಗಡ್ಡೆಗೆ ತೆರಳಿದ ದೃಶ್ಯ   

ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಬಳಿ ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಗಜಾನನ ಸ್ವಾಮೀಜಿ ಮತ್ತು ಇಬ್ಬರು ಮಹಿಳೆಯರನ್ನು ಕರೆತರಲು ತೆರಳಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ, ಮುಖ್ಯಅಗ್ನಿಶಾಮಕ ಹರೀಶ್‌ ಮತ್ತು ಅಗ್ನಿಶಾಮಕ ರಿಜ್ವಾನ್‌ ವಾಪಸ್‌ ಬರಲಾಗದೆ ಅಲ್ಲಿಯೇ ಸಿಲುಕಿದ್ದಾರೆ.

ನಡುಗಡ್ಡೆಗೆ ತೆರಳಿದ ಬಳಿಕ, ಡೀಸೆಲ್‌ ಯಂತ್ರ ಚಾಲಿತ ಫೈಬರ್‌ ದೋಣಿಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದೇ ಅದಕ್ಕೆ ಕಾರಣ. ಹಗ್ಗವೊಂದರ ಸಹಾಯದಿಂದ ಅವರು ನಡುಗಡ್ಡೆಯನ್ನು ತಲುಪಿದರೂ, ಸಂತ್ರಸ್ತರನ್ನು ಕರೆತರಲು ಆಗಲಿಲ್ಲ.

‘ದೋಣಿಯ ಕೆಳಭಾಗದಲ್ಲಿದ್ದ ಫ್ಯಾನ್‌ಗೆ ಮರ ಮತ್ತು ಬಳ್ಳಿಗಳು ಸಿಲುಕಿ, ದೋಣಿಗೆ ಆಧಾರವಾಗಿದ್ದ ಹಗ್ಗವೂ ತುಂಡಾಯಿತು. ನಡುಗಡ್ಡೆ ಬಳಿ ನೀರಿನ ಸೆಳೆತವೂ ಹೆಚ್ಚಾಯಿತು. ಅಲ್ಲಿಂದ ವಾಪಸ್‌ ಬರಲು ಒಂದೂವರೆ ತಾಸು ಪ್ರಯತ್ನ ನಡೆಯಿತು. ಸಾಧ್ಯವಾಗಲಿಲ್ಲ. ಹಾಗಾಗಿ ಅಧಿಕಾರಿ, ಸಿಬ್ಬಂದಿಯೂ ನಡುಗಡ್ಡೆಯಲ್ಲೇ ಉಳಿದುಕೊಂಡಿದ್ದಾರೆ’ ಎಂದು ದರಸಗುಪ್ಪೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪಗೌಡ ತಿಳಿಸಿದರು.

ADVERTISEMENT

‘ನಡುಗಡ್ಡೆಯಲ್ಲಿರುವ ಆರು ಮಂದಿಯನ್ನು ಬೇರೆ ದೋಣಿಯಲ್ಲಿ ಕರೆತರಲು ಕೆಆರ್‌ಎಸ್‌ನಿಂದ ಕೋಸ್ಟಲ್‌ ಗಾರ್ಡ್‌ಗಳನ್ನು ಕರೆಸಲಾಗಿದೆ. ಆದರೆ, ಕ್ಷೇತ್ರಕ್ಕೆ ಇದ್ದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಕತ್ತಲು ಆವರಿಸಿದೆ. ಶುಕ್ರವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಸ್ವಾಮೀಜಿ ತಾಯಿಗೆ ವಯಸ್ಸಾಗಿದೆ. ಕತ್ತಲಲ್ಲಿ ನದಿ ದಾಟುವುದು ಉಚಿತವಲ್ಲ ಎಂಬ ಕಾರಣಕ್ಕೆ ಮೂವರು ಅಲ್ಲಿಯೇ ಉಳಿದಿದ್ದೇವೆ’ ಎಂದು ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.