ಮಂಡ್ಯ: ಚಿತ್ರಕೂಟ ಆಯೋಜಿಸಿರುವ ಪೂರ್ಣಚಂದ್ರ ತೇಜಸ್ವಿ–86 ಅಂಗವಾಗಿ ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ ಕಾರ್ಯಕ್ರಮವು ಸೆ.8ರಂದು ಮಧ್ಯಾಹ್ನ 2ರಿಂದ ಸಂಜೆ 7.30ರವರೆಗೆ ನಗರದ ವಿ.ವಿ.ರಸ್ತೆಯ ಜನತಾ ಬಜಾರ್ ಕಾಂಪ್ಲೆಕ್ಸ್‌ನ ಅಂತರಂಗ ಆಡಿಟೋರಿಯಂನಲ್ಲಿ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ‘ವಿಜ್ಞಾನ ವಿಸ್ಮಯಗಳಿಂದ ಪರಿಸರ ಫೋಟೋಗ್ರಫಿಯ ತನಕ ಮಾತುಕತೆ’ ಎಂಬ ವಿಭಿನ್ನ ಪ್ರಯತ್ನದೊಂದಿಗೆ ಕಾರ್ಯಕ್ರಮವು ಆರಂಭವಾಗಲಿದೆ. ಕೃಷಿ, ಪರಿಸರ ಹಾಗೂ ತಂತ್ರಾಂಶಗಳ ಕುರಿತಂತೆ ಸಂವಾದ ಇರಲಿದೆ. ಜೊತೆಗೆ ತೇಜಸ್ವಿ ಪುಸ್ತಕಗಳ ಮಾರಾಟ, ಅಪರೂಪದ ಛಾಯಾಚಿತ್ರ ಪ್ರದರ್ಶನವಿರಲಿದೆ.
ಸಾಹಿತಿ ಲೀಲಾ ಅಪ್ಪಾಜಿ ಅವರು ಸಂಗ್ರಹಿಸಿರುವ ತೇಜಸ್ವಿ ಅಪರೂಪದ ಫೋಟೋ ಪ್ರದರ್ಶನದ ಉದ್ಘಾಟನೆಯನ್ನು ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರು ನೆರವೇರಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು ಅವರು ಎಚ್.ಎಸ್.ರೋಹಿಣಿ ಅವರ ಹೊಸ ಕೃತಿ ‘ವಿಸ್ಮಯ ತೇಜಸ್ವಿ’ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಕುಮಾರ, ಕಸಾಪದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪ್ರಕಾಶ ಮೂರ್ತಿ ಪಾಲ್ಗೊಳ್ಳಲಿದ್ದಾರೆ.
ಸಂವಾದ–1: ಮಧ್ಯಾಹ್ನ 2.30 ರಿಂದ 3.20ರವರೆಗೆ ‘ತೇಜಸ್ವಿ ಮತ್ತು ತಂತ್ರಾಂಶ’ ಕನ್ನಡ ಕಟ್ಟುವ ಹೊಸ ಬಗೆಯ ಸಂವಾದವನ್ನು ಶಿಕ್ಷಕಿ ಸಿ.ಎಚ್.ಮೇಘನಾ ಮತ್ತು ತಂತ್ರಾಂಶ ತಜ್ಞ ಹೆಗ್ಗೆರೆ ರಾಜ್ ಸಂವಾದ ನಡೆಸಿಕೊಡುವರು. ಭಾಷಾ ವಿಜ್ಞಾನಿ ಮಿಥುನ್ ವಿಷಯ ಮಂಡಿಸುವರು.
ಸಂವಾದ–2: ‘ಕೃಷಿ: ಇಂದಿನ ಸಂಘರ್ಷ ನಾಳೆಯ ಭರವಸೆ’ ಮಧ್ಯಾಹ್ನ 3.30 ರಿಂದ ಸಂಜೆ 4.20 ರವರೆಗೆ ನಡೆಯಲಿದ್ದು, ಪರಿಸರ ಪ್ರೇಮಿ ಹರವು ದೇವೇಗೌಡ, ಲೇಖಕ ಎಂ.ವಿ.ಕೃಷ್ಣ, ಪತ್ರಕರ್ತ ಭುಜವಳ್ಳಿ ರಾಮಚಂದ್ರು ಸೇರಿದಂತೆ ಇತರರು ಭಾಗವಹಿಸುವರು.
ಸಂವಾದ–3: ಸಂಜೆ 4.30ರಿಂದ 5.30ರವರೆಗೆ ‘ಪರಿಸರದ ಕತೆ ನಾಗೇಶ ಹೆಗಡೆ ಜೊತೆ’ ಜೀವಸಂಕುಲದ ಉಳಿವಿಗೆ ಬೇಕು ವಿವೇಕ ಮಾರ್ಗ ವಿಷಯದಲ್ಲಿ ಸಂವಾದಕರಾಗಿ ಚಿಂತಕ ಕತ್ತರಘಟ್ಟ ವಾಸು, ಚಿಂತಕ ಸೋಮವರದ ಹಾಗೂ ರೋಹಿತ್ ಅಗಸರಹಳ್ಳಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಸಂಜೆ 5.45ರಿಂದ 6.30ರವರೆಗೆ ‘ತಬರನ ಕಥೆ ಅಂದು –ಇಂದು’ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರ ಒಳನೋಟಗಳು ಹಾಗೂ ಸಂಜೆ 6.30ರಿಂದ 7ರವರೆಗೆ ಪೂಚಂತೇ ನಾನು ಕಂಡಂತೆ– ಬಿ.ಚಂದ್ರೇಗೌಡ ಅವರೊಂದಿಗೆ ಮಾತುಕತೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.