ADVERTISEMENT

ಬಯ್ಯುವುದೇ ನಮ್ಮ ಸಂಸ್ಕೃತಿಯಾಗದಿರಲಿ: ಎಚ್‌.ಎಸ್‌. ಮುದ್ದೇಗೌಡ

ಮಹೇಶ ಜೋಶಿ ಟೀಕಾಕಾರರಿಗೆ ಮುದ್ದೇಗೌಡ ತಿರುಗೇಟು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 20:56 IST
Last Updated 19 ನವೆಂಬರ್ 2024, 20:56 IST
ಎಚ್‌.ಎಸ್‌.ಮುದ್ದೇಗೌಡ 
ಎಚ್‌.ಎಸ್‌.ಮುದ್ದೇಗೌಡ    

ಮಂಡ್ಯ: ‘87ನೇ ನುಡಿಜಾತ್ರೆಯ ಉಪಸಮಿತಿಗಳಿಗೆ ಸದಸ್ಯರ ನೇಮಕ ಮತ್ತು ಜಾಗದ ವಿವಾದ ಸೇರಿ ಎಲ್ಲದಕ್ಕೂ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ಕೆಲವರು ನಿಂದಿಸಿ, ಏಕವಚನ ಬಳಸಿದ್ದಾರೆ. ಬಯ್ಯುವುದೇ ನಮ್ಮ ಸಂಸ್ಕೃತಿಯಾಗಬಾರದು. ಅಧ್ಯಕ್ಷರಿಗೆ ಗೌರವ ಕೊಡಬೇಕು’ ಎಂದು ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಚ್‌.ಎಸ್‌. ಮುದ್ದೇಗೌಡ ಪ್ರತಿಪಾದಿಸಿದರು. 

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸದಸ್ಯರ ನೇಮಕ, ಜಾಗದ ಆಯ್ಕೆಗೂ ಜೋಶಿಯವರಿಗೂ ಸಂಬಂಧವಿಲ್ಲ. ಜಿಲ್ಲಾಡಳಿತ, ಶಾಸಕರು, ಕಸಾಪ ಸದಸ್ಯರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಎಲ್ಲರ ಒಪ್ಪಿಗೆ ಮೇರೆಗೆ ತೀರ್ಮಾನಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು. 

‘ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಜಗದೀಶ ಕೊಪ್ಪ ಕಸಾಪ ಸದಸ್ಯರೇ ಅಲ್ಲ. ಅವರು ಮಂಡ್ಯದಲ್ಲಿ ಈ ಹಿಂದಿನ ಸಭೆಗೆ ಬಂದು ಅಭಿಪ್ರಾಯವನ್ನೇ ಹೇಳದೇ ಬಹಿಷ್ಕರಿಸಿ ಹೋದದ್ದು ಸರಿಯಲ್ಲ. ಭಿನ್ನಾಭಿಪ್ರಾಯಗಳಿದ್ದರೆ ಮಾತನಾಡಿ ಬಗೆಹರಿಸಿಕೊಳ್ಳದೆ, ಬಹಿಷ್ಕಾರ ಹಾಕುತ್ತೇನೆಂದರೆ ಏನರ್ಥ’ ಎಂದರು. 

ADVERTISEMENT

‘ಸಮ್ಮೇಳನದಲ್ಲಿ ಪ್ರಕಟವಾಗಲಿರುವ 87 ಪುಸ್ತಕಗಳಲ್ಲಿ ಪರಿಷತ್ತಿನ ಅಧ್ಯಕ್ಷರ ಭಾವಚಿತ್ರವಿರಬಾರದು ಎಂದು ಸಾಂಸ್ಕೃತಿಕ ಉಪಸಮಿತಿಯ ಉಪಾಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಆಕ್ಷೇಪಿಸಿದ್ದಾರೆ. ಎಲ್ಲ ಪುಸ್ತಕಗಳಿಗೂ ಕಸಾಪ ಅಧ್ಯಕ್ಷರೇ ಪ್ರಧಾನ ಸಂಪಾದಕರಲ್ಲವೇ? ಸಭೆಯಲ್ಲಿ ಸಲಹೆ ನೀಡುವ ಬದಲು, ಟೀಕೆಗಳನ್ನಷ್ಟೇ ಮಾಡುವುದು ಎಷ್ಟು ಸರಿ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಸಮ್ಮೇಳನದಲ್ಲಿ ಕಸಾಪ ಪದಾಧಿಕಾರಿಗಳ ಪುಸ್ತಕಗಳನ್ನು ಪ್ರಕಟಿಸಿದರೆ ತಪ್ಪು ಅರ್ಥ ಹೋಗುತ್ತದೆ ಎಂದು, ಐದಾರು ಪುಸ್ತಕಗಳನ್ನು ಜೋಶಿಯವರು ಪಟ್ಟಿಯಿಂದ ಹೊರಗಿಡಿಸಿದ್ದಾರೆ. ಮುಖ್ಯಮಂತ್ರಿಯ ಅನುಮತಿ ಪಡೆದು, ವಿದೇಶಗಳಲ್ಲಿರುವ 500 ಭಾರತೀಯರನ್ನು ಆಹ್ವಾನಿಸಿದ್ದಾರೆ. ಇದನ್ನು ನಾವು ಸ್ವಾಗತಿಸಬೇಕು. ಆದರೆ ಅದನ್ನೂ ಕೆಲವರು ಟೀಕಿಸಿದ್ದಾರೆ’ ಎಂದರು. 

‘ಹಾವೇರಿ ನಂತರ ಮಂಡ್ಯದಲ್ಲಿ ಸಮ್ಮೇಳನ ಆಯೋಜಿಸಲಾಗುವುದು ಎಂದಿದ್ದ ಜೋಶಿಯವರು ನುಡಿದಂತೆ ನಡೆದಿದ್ದಾರೆ. ಅವರ ಬಗ್ಗೆ ವಿನಾಕಾರಣ ಟೀಕೆ ಮಾಡುತ್ತಾ, ಅವರ ಉತ್ಸಾಹಕ್ಕೆ ತಣ್ಣೀರು ಎರಚಬೇಡಿ. ಅವರೊಂದಿಗೆ ಕೈಜೋಡಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸೋಣ’ ಎಂದು ಕೋರಿದರು. 

‘ಪಂಚಾಯಿತಿ ಸದಸ್ಯರನ್ನು ಪರಿಗಣಿಸದಿದ್ದರೆ ಬಹಿಷ್ಕಾರ’

ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 28 ಉಪಸಮಿತಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರನ್ನು ಪರಿಗಣಿಸದೇ ಹೊರಗಿಡಲಾಗಿದೆ. ಈ ನಡೆಯನ್ನು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ’ ಎಂದು ಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್‌ ಉಪ್ಪರಕನಹಳ್ಳಿ ಹೇಳಿದರು. 

‘ತಾತ್ಸಾರ ಧೋರಣೆಯನ್ನು ಮುಂದುವರಿಸಿದರೆ, 250ಕ್ಕೂ ಹೆಚ್ಚು ಪಂಚಾಯಿತಿಗಳಿಂದ ನೀಡಲಾಗುತ್ತಿರುವ ತಲಾ ₹5 ಸಾವಿರ ವಂತಿಗೆಯನ್ನು ನಿಲ್ಲಿಸಿ ಸಮ್ಮೇಳನವನ್ನು ಬಹಿಷ್ಕರಿಸುತ್ತೇವೆ. ಪ್ರಚಾರ ರಥಯಾತ್ರೆಯಲ್ಲೂ ಸಿಬ್ಬಂದಿ ಮತ್ತು ಸದಸ್ಯರು ಪಾಲ್ಗೊಳ್ಳುವುದಿಲ್ಲ. ಬೇಲೂರು, ಬೂದನೂರು ಹಾಗೂ ಉಮ್ಮಡಹಳ್ಳಿ ಪಂಚಾಯಿತಿ ವ್ಯಾಪ್ತಿಯ ಜಾಗದಲ್ಲಿ ನಡೆಯಲಿರುವ ಸಮ್ಮೇಳನವನ್ನು ನಗರ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳುವಂತೆ ಧರಣಿ ನಡೆಸುತ್ತೇವೆ’ ಎಂದು ಎಂದು ಮಂಗಳವಾರ ಪತ್ರಿಕಾ
ಗೋಷ್ಠಿಯಲ್ಲಿ ಎಚ್ಚರಿಕೆ
ನೀಡಿದರು.

‘ಅನುದಾನ ನೀಡದಿದ್ದರೆ ಪ್ರತಿಭಟನೆ’

‘1995ರ ನಂತರ ಆರಂಭವಾದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರ ಕೂಡಲೇ ಅನುದಾನ ನೀಡದಿದ್ದರೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಭಟಿಸುತ್ತೇವೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಎಚ್ಚರಿಕೆ ನೀಡಿದರು. 

‘ಸಮ್ಮೇಳನಕ್ಕೆ ₹30 ಕೋಟಿ ಅನುದಾನ ನೀಡುವುದಕ್ಕಿಂತ ಶಾಲೆಗಳಿಗೆ ಅನುದಾನ ಒದಗಿಸುವುದು ಒಳ್ಳೆಯದು. ಎಲ್ಲ ಸರ್ಕಾರಗಳು ಕೊಟ್ಟ ಮಾತು ತಪ್ಪಿವೆ’ ಎಂದು ದೂರಿದರು.

‘ನಮ್ಮ ಕನ್ನಡ ಶಾಲೆ ಉಳಿಸಿ ಅಭಿಯಾನದಡಿ ಶಾಲಾ–ಕಾಲೇಜುಗಳಿಗೆ ಅನುದಾನ ಪಡೆಯುವ ಉದ್ದೇಶದಿಂದ ರಾಜ್ಯಮಟ್ಟದ ಸಮಾವೇಶವನ್ನು ನವೆಂಬರ್ 22ರಂದು ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನ ಬಯೋಟೆಕ್‌ ಭವನದಲ್ಲಿ ಹಮ್ಮಿಕೊಂಡಿದ್ದೇವೆ. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ತಿಳಿಸಿದರು. 


‘ಟಿಪ್ಪು ಕುರಿತು ಗೋಷ್ಠಿ ಆಯೋಜಿಸದಿರಿ’

ಮಂಡ್ಯ: ‘ಬುದ್ಧಿಜೀವಿಗಳ ಆಗ್ರಹಕ್ಕೆ ಮಣಿದು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್‌ ಬಗ್ಗೆ ವಿಚಾರಗೋಷ್ಠಿ ನಡೆಸಿದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ’ ಎಂದು ‘ಬಜರಂಗಸೇನೆ ಕರ್ನಾಟಕ’ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ. ಮಂಜುನಾಥ್‌ ಎಚ್ಚರಿಕೆ ನೀಡಿದರು.

‘ಟಿಪ್ಪು ಆಡಳಿತದಲ್ಲಿ ಕನ್ನಡವನ್ನು ಕಡೆಗಣಿಸಿ, ಪರ್ಷಿಯನ್‌ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದ. ಪಹಣಿ, ಅಸಾಮಿ, ಕವಾಯತು, ಮೊಹರು, ಅಸಲು, ಇನಾಮು, ಉಮೇದು, ತೂಫಾನು, ಇರಾದೆಯಂಥ ಪರ್ಷಿಯನ್‌ ಪದಗಳು ಆತನ ಕಾರಣಕ್ಕೆ ಬಳಕೆಗೆ ಬಂದವು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.