ADVERTISEMENT

ಅಪಘಾತ: ಪತ್ರಕರ್ತ ಮೋಹನ್ ಕುಮಾರ್ ಮೃತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:54 IST
Last Updated 26 ಜುಲೈ 2024, 16:54 IST
ಬಿ.ಸಿ.ಮೋಹನ್ ಕುಮಾರ್
ಬಿ.ಸಿ.ಮೋಹನ್ ಕುಮಾರ್   

ನಾಗಮಂಗಲ: ಲಾರಿ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಪತ್ರಕರ್ತ ಬಿ.ಸಿ. ಮೋಹನ್ ಕುಮಾರ್(49) ಶುಕ್ರವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಸಿ.ಚಂದ್ರಪ್ಪ ಅವರ ಪುತ್ರರಾದ ಮೋಹನ್ ಕುಮಾರ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳ್ಳೂರಿಗೆ ತೆರಳಿ ನಾಗಮಂಗಲಕ್ಕೆ ತಮ್ಮ ಕಾರಿನಲ್ಲಿ ಮರಳುವಾಗ ಮೈಸೂರಿನಿಂದ ಬೆಳ್ಳೂರು ಕಡೆಗೆ ಹೋಗುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮೋಹನ್ ಕುಮಾರ್ ಅವರ ತಲೆಗೆ ತೀವ್ರವಾಗಿ ಗಾಯವಾಗಿತ್ತು. ಸ್ಥಳೀಯರು ಬಿ.ಜಿ‌.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಸಂಜೆ ಸಾವನ್ನಪ್ಪಿದ್ದಾರೆ.

ಮೃತರು ಈ ಹಿಂದೆ ‘ಪ್ರಜಾವಾಣಿ’ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು. ಜೊತೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಕನ್ನಡಪರ ಕೆಲಸ ಮಾಡಿದ್ದರು‌. ತಾಲ್ಲೂಕಿನ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ತಾಲ್ಲೂಕು ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿದ್ದ ಇವರು ತಾಲ್ಲೂಕಿನ ಹೇಮಾವತಿ ನಾಲೆಗಳಿಗೆ ನೀರು ಹರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರು ರೈತರ ಪರವಾಗಿ ಮತ್ತು ಕನ್ನಡಪರವಾಗಿ ಹೋರಾಟಗಳಲ್ಲಿ ತಾಲ್ಲೂಕಿನ ಪರವಾಗಿ ಪಾಲ್ಗೊಂಡಿದ್ದರು.

ADVERTISEMENT

ಮೃತರಿಗೆ ತಾಯಿ, ಪತ್ನಿ ಇದ್ದಾರೆ, ಇವರ ನಿಧನಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ, ಪಿ.ರಾಮಯ್ಯ ಮತ್ತು ಎನ್.ಅಪ್ಪಾಜಿಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಂತ್ಯಕ್ರಿಯೆ ಹುಟ್ಟೂರಾದ ಬ್ಯಾಡರಹಳ್ಳಿಯಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಜಮೀನಿನಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನಾಗಮಂಗಲ ತಾಲ್ಲೂಕಿನ ತೊಳಲಿ ಗ್ರಾಮದ ಬಳಿ ಲಾರಿ ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.