ನಾಗಮಂಗಲ: ಬದ್ರಿಕೊಪ್ಪಲಿನ ಯುವಕರು ಗಣೇಶ ವಿಸರ್ಜನಾ ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಉಂಟಾದ ಗಲಭೆಯಲ್ಲಿ ಗ್ರಾಮದ ಶ್ರೀನಿವಾಸ್ ಎಂಬ ಯುವಕನನ್ನು ಬಂಧನ ಮಾಡಿರುವ ಹಿನ್ನೆಲೆಯಲ್ಲಿ 'ನಮ್ಮ ಮಗ ಗಲಾಟೆಯಾದ ಸಂದರ್ಭದಲ್ಲಿ ಅಲ್ಲಿ ಇಲ್ಲದಿದ್ದರೂ ಬಂಧಿಸಲಾಗಿದೆ' ಎಂದು ಬಂಧಿತ ಯುವಕನ ತಾಯಿ ಕೆಂಪಮ್ಮ ಅವರು ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮೈಸೂರು ರಸ್ತೆಯಲ್ಲಿ ಗಣೇಶ ಮೆರವಣಿಗೆ ನಡೆಯುತ್ತಿದ್ದಾಗ ಉಂಟಾದ ಗಲಭೆಯ ಸಮಯದಲ್ಲಿ ನನ್ನ ಮಗ ಅಲ್ಲಿ ಇರಲೇ ಇಲ್ಲ. ಅಂದು ಸಂಜೆ 6.45ರಿಂದ ರಾತ್ರಿ 9.28ರವರೆಗೂ ಅವನು ನಮ್ಮ ಹೊಸ ಮನೆ ಬಳಿಯೇ ಇದ್ದ. ಆ ವೇಳೆಗಾಗಲೇ ಗಲಾಟೆ ನಡೆದು ಹೋಗಿತ್ತು. ಆದರೂ ಸಹ ಮಧ್ಯರಾತ್ರಿ 2 ಗಂಟೆಗೆ ಪೊಲೀಸರು ಮನೆಗೆ ಬಂದು ಏನೂ ಹೇಳದೇ ಕೇಳದೇ ಅವನನ್ನು ಎಳೆದುಕೊಂಡು ಹೋದರು. ಅವನು ಸ್ಥಳದಲ್ಲಿರಲಿಲ್ಲ ಎಂದು ಮನವಿ ಮಾಡಿಕೊಂಡರು ಅವನನ್ನು ಬಿಡಲಿಲ್ಲ ಜೊತೆಗೆ ನನ್ನನ್ನೂ ಹೆದರಿಸಿದರು ಎಂದು ದೂರಿದರು.
ರಸ್ತೆಯುದ್ದಕ್ಕೂ ನನ್ನ ಮಗನಿಗೆ ಹೊಡೆದುಕೊಂಡೇ ಕರೆದುಕೊಂಡು ಹೋದರು. ಗಲಾಟೆಯಾದ ಸಮಯದಲ್ಲಿನ ವಿಡಿಯೊದಲ್ಲಿ ಅವನು ಇಲ್ಲದಿದ್ದರೇ ನಾವೇ ಮನೆಗೆ ಕಳಿಸುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ಅವರು ಘಟನೆಯ ಮರುದಿನ ಭೇಟಿಯ ವೇಳೆ ಹೇಳಿದ್ದರು.
ಆದರೂ ಸಿಸಿಟಿವಿ ಕ್ಯಾಮೆರಾ ದೃಶ್ಯವನ್ನು ನೋಡಿದ ನಂತರವೂ ಪೊಲೀಸರು ಬಿಟ್ಟಿಲ್ಲ. ಇದಕ್ಕೆಲ್ಲ ಸಚಿವ ಚಲುವರಾಯಸ್ವಾಮಿ ಅವರೇ ಕಾರಣ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ ಅವರು ಮುಸ್ಲಿಮರನ್ನು ಓಲೈಕೆ ಮಾಡುತ್ತಾರೆ. ತಪ್ಪು ಮಾಡಿದ್ದರೆ ನನ್ನನ್ನೂ ಬಂಧಿಸಲಿ. ಆದರೆ ತಪ್ಪೇ ಮಾಡದ ಅಮಾಯಕನಾದ ನನ್ನ ಮಗನನ್ನು ಜೈಲಿಗೆ ಹಾಕಿದ್ದಾರೆ ಎಂದು ನೋವು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.