ನಾಗಮಂಗಲ: ಆದಿಚುಂಚನಗಿರಿ ಕ್ಷೇತ್ರದಲ್ಲಿ 9 ದಿನಗಳಿಂದ ಜರುಗಿದ ಜಾತ್ರಾ ಮಹೋತ್ಸವಕ್ಕೆ ಬುಧವಾರ ತೆರೆ ಬಿದ್ದಿತು.
ಪೀಠಾಧ್ಯಕ್ಷರಾದ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ಧರ್ಮ ಧ್ವಜಾವರೋಹಣ, ಬೆಟ್ಟದ ಮೇಲ್ಭಾಗದಲ್ಲಿರುವ ಬಿಂದು ಸರೋವ ರದಲ್ಲಿ ರಕ್ಷಾಬಂಧನ ವಿಸರ್ಜನೆ, ಅವಭೃತ ಸ್ನಾನ ನೆರವೇರಿಸಿದರು.
ಧಾರ್ಮಿಕ ಕಾರ್ಯಕ್ರಮಗಳ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಜೀವ ಸಂಕುಲದಲ್ಲಿ ಸೇವೆ ಮಾಡುವ ಅವಕಾಶವನ್ನು ದೇವರು ಮಾನವನಿಗೆ ಮಾತ್ರ ನೀಡಿದ್ದಾರೆ. ಅಲ್ಲದೆ, ಪಂಚ ಋಣ ಭಾರವನ್ನು ಕಳೆದುಕೊಂಡು ದೈವತ್ವಕ್ಕೆ ಏರುವ ಅವಕಾಶವನ್ನೂ ನೀಡಿದ್ದಾರೆ. ಈ ಕಾರಣದಿಂದ ಸದಾ ಶ್ರೇಷ್ಠ ಸೇವೆಯನ್ನು ಮಾಡುತ್ತಾ ಜೀವನವನ್ನು ಪರಿಪೂರ್ಣಗೊಳಿಸಿಕೊಳ್ಳಬೇಕು ಎಂದರು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು. ಸಂಸ್ಕೃತ ವಿದ್ವಾಂಸ ಶ್ರೀಕಾಂತ ಪುರೋಹಿತ ಅವರು ಅವಭೃತ ಸ್ನಾನದ ಮಹತ್ವ, ಹಿನ್ನೆಲೆಯನ್ನು ವಿವರಿಸಿದರು.
ವಿಶ್ವೇಶ್ವರಯ್ಯ ಜಲ ಭಾಗ್ಯ ನಿಗಮದ ನಿವೃತ್ತ ಎಂಜಿನಿಯರ್ ಶ್ರೀಮಾಧವ, ಕರ್ನಾಟಕ ಸರ್ಕಾರದ ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಚೈತನ್ಯನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಬಿಜಿಎಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಕೆ.ನರೇಂದ್ರ, ಡಾ.ರಾಜೇಗೌಡ, ಡಾ.ರಮ್ಯಾಸೂರಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.