ADVERTISEMENT

ಅಂಗನವಾಡಿ ಉಳಿಸಿ, ಮಕ್ಕಳ ಹಕ್ಕು ರಕ್ಷಿಸಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 20:00 IST
Last Updated 4 ಡಿಸೆಂಬರ್ 2019, 20:00 IST
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಸೇವಾ ಹಿರಿತನದ ಆಧಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯೆಯರು ಪ್ರತಿಭಟನೆ ನಡೆಸಿದರು.

ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಕಾರ್ಯಕರ್ತೆಯರಿಗೆ ₹21 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ದಿನಕ್ಕೆ 6ಗಂಟೆ 30ನಿಮಿಷ ಕೆಲಸ ನಿಗದಿ ಮಾಡಬೇಕು. ಮಾತೃಪೂರ್ಣ ಸೇರಿದಂತೆ ದಿನದಿಂದ ದಿನಕ್ಕೆ ಕೆಲಸದ ಹೊರೆಗಳು ಹೆಚ್ಚಾಗಿವೆ. ಗೌರವಧನ ಶೇ 75 ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಶೇ 26ರಷ್ಟು ಮಂದಿ ಮಾತ್ರ ಸಂಬಳ ಪಡೆಯುವವರಿದ್ದಾರೆ. ಉಳಿದವರು ಸ್ವಯಂ ಉದ್ಯೋಗ, ಅರೆಕಾಲಿಕ, ಸಾಂದರ್ಭಿಕ, ಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದಾರೆ. ಸರ್ಕಾರ ಜನರಿಗೆ ಉದ್ಯೋಗ ನೀಡುವ ಬದಲು ಎಲ್ಲಾ ಕ್ಷೇತ್ರಗಳನ್ನು ಖಾಸಗಿ ಮಾಡುತ್ತಿದೆ. ಆಹಾರ, ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಪ್ರಮುಖ ಜವಾಬ್ದಾರಿಗಳನ್ನು ಖಾಸಗಿ ಅವರಿಗೆ ನೀಡಿ ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸುನಂದಾ ಮಾತನಾಡಿ, ರಾಜ್ಯದಲ್ಲಿ 3ರಿಂದ 6ವರ್ಷದೊಳಗಿನ 16ಲಕ್ಷ ಮಕ್ಕಳಿದ್ದು, ಅವರಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡುವ ಸಾಮರ್ಥ್ಯವನ್ನು ಅಂಗನವಾಡಿ ಕಾರ್ಯಕರ್ತೆಯರು ಹೊಂದಿದ್ದಾರೆ. ಜೂನ್‌ ಒಳಗೆ ಆದೇಶವನ್ನು ರದ್ದುಪಡಿಸಿ ಅಂಗನವಾಡಿ ಕೇಂದ್ರದಲ್ಲೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು. ತುಮಕೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಯಲಿದ್ದು ನಮ್ಮ ಬೇಡಿಕೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಅಂಗನವಾಡಿ ಉಳಿಸಿ ಮಕ್ಕಳ ಹಕ್ಕನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಮಾಜ ಬದಲಾವಣೆಯಾಗುತ್ತಿದೆ. ಆದರೆ ಅಂಗನವಾಡಿ ಕೇಂದ್ರಗಳು ಹಾಗೆಯೇ ಉಳಿದಿದೆ. ಮಕ್ಕಳನ್ನು ಆಕರ್ಷಿಸುವ ಕೇಂದ್ರವಾಗಿ ಅಂಗನವಾಡಿಗಳು ರೂಪುಗೊಳ್ಳಬೇಕು. 1995ರ ನಂತರ ಪ್ರಾರಂಭವಾಗಿರುವ ಎಲ್ಲಾ ಯೋಜನೆಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಹಲವರು ಎಸ್‌ಎಸ್‌ಎಲ್‌ಸಿ ಹಾಗೂ ಪದವೀಧರರಾಗಿದ್ದಾರೆ. ಅವರಿಗೆ ಸೂಕ್ತ ತರಬೇತಿ ನೀಡಿ ಅಲ್ಲೆಯೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಮ್ಮ, ಖಜಾಂಚಿ ಪ್ರಮಿಳಾ ಕುಮಾರಿ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ರೈತ ಮುಖಂಡರಾದ ಸುನಂದಾ ಜಯರಾಂ, ಟಿ ಯಶವಂತ, ಎಂ.ರಾಜು, ಮಹದೇವಮ್ಮ ಇದ್ದರು.

ಡಿ.10ರಿಂದ ಬೆಂಗಳೂರಿನಲ್ಲಿ ಆರಂಭವಾಗುವ ಅಂಗನವಾಡಿ ನೌಕರರ ಅನಿರ್ದಿಷ್ಟಾವಧಿ ಹೋರಾಟದ ಅಂಗವಾಗಿ ಬುಧವಾರ ಹಾಸನದಿಂದ ಮಂಡ್ಯ ತಲುಪಿದ ಜಾಗೃತಿ ಜಾಥವನ್ನು ಮಂಡ್ಯದ ಅಂಗನವಾಡಿ ನೌಕರರು ಸ್ವಾಗತಿಸಿದರು. ಚಾಮರಾಜನಗರಕ್ಕೆ ತೆರಳಿದ ಜಾಥಾವನ್ನು ಬೀಳ್ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.