ADVERTISEMENT

ಮುಜರಾಯಿ ದೇವಾಲಯಗಳ ಅರ್ಚಕರ ತಸ್ತೀಕ್‌ ಹಣ ನೀಡಲು ಆ್ಯಪ್‌: ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 14:02 IST
Last Updated 2 ಸೆಪ್ಟೆಂಬರ್ 2024, 14:02 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿಉಕ್ಕಡ ಅಹಲ್ಯಾದೇವಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರನ್ನು ದೇವಾಲಯದ ಅಭಿವೃದ್ಧಿ ಟ್ರಸ್ಟ್‌ ವತಿಯಿಂದ ಸನ್ಮಾನಿಲಾಯಿತು</p></div>

ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿಉಕ್ಕಡ ಅಹಲ್ಯಾದೇವಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರನ್ನು ದೇವಾಲಯದ ಅಭಿವೃದ್ಧಿ ಟ್ರಸ್ಟ್‌ ವತಿಯಿಂದ ಸನ್ಮಾನಿಲಾಯಿತು

   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಮುಜರಾಯಿ ದೇವಾಲಯಗಳ ಅರ್ಚಕರ ತಸ್ತೀಕ್‌ ಹಣವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲು ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಆರತಿಉಕ್ಕಡ ಅಹಲ್ಯಾದೇವಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಅರ್ಚಕ ಅಥವಾ ನೌಕರ ತೀರಿಕೊಂಡರೆ ₹35 ಸಾವಿರ ಪರಿಹಾರ ನೀಡಲಾಗುತ್ತಿತ್ತು. ಈಗ ಆ ಮೊತ್ತವನ್ನು ₹2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅರ್ಚಕರು ಮತ್ತು ದೇವಾಲಯಗಳ ನೌಕರರ ಮಕ್ಕಳಿಗೆ ‘ಶಿಷ್ಯವೇತನ’ ನೀಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಸಚಿವರು ಹೇಳಿದರು.

ADVERTISEMENT

ಮೈಸೂರಿನ ಚಾಮುಂಡಿಬೆಟ್ಟ, ಘಾಟಿ ಸುಬ್ರಹ್ಮಣ್ಯ, ಹುಲಿಗೆಮ್ಮ, ರೇಣುಕಾ ಎಲ್ಲಮ್ಮ ದೇವಾಲಯಗಳಿಗೆ ವರ್ಷದಲ್ಲಿ ಹತ್ತಾರು ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಇವುಗಳನ್ನು ಮಲೆ ಮಹದೇಶ್ವರ ದೇಗುಲ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರಾಧಿಕಾರ ರಚಿಸಲಾಗಿದೆ. ಚಾಮುಂಡಿ ಬೆಟ್ಟದ ದೇವಾಲಯ ಸಂಬಂಧ ನ್ಯಾಯಾಲಯದ ತಡೆಯಾಜ್ಞೆ ತೆರವಾಗಿದೆ. ಇನ್ನೆರಡು ದೇವಾಲಯಗಳಿಗೆ ಸಂಬಂಧಿಸಿದಂತೆ ತಡೆಯಾಜ್ಞೆ ಇದ್ದು ತೆರವಾಗುವ ವಿಶ್ವಾಸವಿದೆ ಎಂದರು.

ಆರ್‌.ವಿ. ದೇಶಪಾಂಡೆ ತಾವು 2028ರ ನಂತರ ಮುಖ್ಯಮಂತ್ರಿ ಆಗಬಹುದು ಎಂಬ ಅರ್ಥದಲ್ಲಿ ಹೇಳಿದ್ದು, ಅದಕ್ಕೆ ಬೇರೆ ಅರ್ಥ ಕಲ್ಪಿಸಬಾರದು ಎಂದ ಸಚಿವರು, ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಸಿದ್ದರಾಮಯ್ಯ ಅವರ ಬಗ್ಗೆ ಆರೋಪ ಮಾಡುವ ಮುನ್ನ ತಮ್ಮ ಮೇಲಿರುವ ಆರೋಪಗಳನ್ನು ತೊಳೆದುಕೊಳ್ಳಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.