ಮಂಡ್ಯ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಅಂತರ ಜಿಲ್ಲಾ ದರೋಡೆಕೋರರು ಹಾಗೂ ಮನೆಗಳ್ಳತನದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮದ್ದೂರು ಮತ್ತು ಕೆಸ್ತೂರು ಪೊಲೀಸರು ₹14.69 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕಾಲೊನಿ ಇಂಡಸ್ಟ್ರಿಯಲ್ ಏರಿಯಾದ ನಿಮಿಷಾಂಬ ಪೆಟ್ರೋಲ್ ಬಂಕ್‍ಗೆ ಕಳೆದ ಅ.15ರ ಮಧ್ಯರಾತ್ರಿ 12.07ರಲ್ಲಿ ಕಾರಿನಲ್ಲಿ ಬಂದ ನಾಲ್ವರು ಪೆಟ್ರೋಲ್ ಹಾಕಿಸಿಕೊಂಡಿದ್ದಲ್ಲದೆ, ಪೆಟ್ರೋಲ್ ಹಾಕುವ ಯುವಕನಿಗೆ ಕತ್ತಿ ತೋರಿಸಿ, ಆತನ ಬಳಿಯಿದ್ದ ₹25 ಸಾವಿರವನ್ನು ದರೋಡೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್‍ನವರು ನೀಡಿದ ದೂರಿನ ಮೇರೆಗೆ ಮದ್ದೂರು ಠಾಣೆಯ ಇನ್‌ಸ್ಪೆಕ್ಟರ್ ಎಂ.ಶಿವಕುಮಾರ್ ಹಾಗೂ, ಗ್ರಾಮಾಂತರ ಠಾಣೆಯ ಸಿಪಿಐ ವೆಂಕಟೇಗೌಡ, ಪಿಎಸ್‍ಐಗಳಾದ ಕೆ.ಮಂಜುನಾಥ, ಪಿ. ರವಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ಸದರಿ ತಂಡವು ಕಾರ್ಯಾಚರಣೆ ನಡೆಸಿ ಅ.22ರಂದು ಮದ್ದೂರು ತಾಲ್ಲೂಕು ವಡ್ಡರದೊಡ್ಡಿ ಗ್ರಾಮದ ಪ್ರಮೋದ್ ಅಲಿಯಾಸ್ ಕರಿಯ, ಚನ್ನಪಟ್ಟಣ ತಾಲ್ಲೂಕು ಲಾಳಘಟ್ಟ ಗ್ರಾಮದ ಅಭಿ ಉ. ಚೊಚೊ, ದಾವಣಗೆರೆ ಜಿಲ್ಲೆ ಮಲೆಬೆನ್ನೂರು ತಾಲ್ಲೂಕು ಎಲವಟ್ಟಿ ಗ್ರಾಮದ (ಹಾಲಿ ವಾಸ ಬೆಂಗಳೂರು ಹೊಸಕೆರೆಹಳ್ಳಿ ನಿವಾಸಿ) ಆರ್. ರಕ್ಷಿತ್ ಕುಮಾರ್, ಚನ್ನಪಟ್ಟಣ ತಾಲ್ಲೂಕು ಸುಣ್ಣದಘಟ್ಟ ಗ್ರಾಮದ ವಿಜಯ್ ಉ. ವಿಜಿ ಎಂಬವರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ನಾಲ್ವರು ಆರೋಪಿಗಳು ಹಿಂದೆ ಹೆದ್ದಾರಿ ದರೋಡೆ, ಸರಗಳ್ಳತನದಲ್ಲಿ ಭಾಗಿಯಾಗಿದ್ದರು. ಪ್ರಮೋದ್ ಮತ್ತು ಅಭಿ ಈ ಹಿಂದೆ ಮದ್ದೂರು, ಚನ್ನಪಟ್ಟಣ, ರಾಮನಗರ, ಬೆಂಗಳೂರು, ಅಕ್ಕೂರು ಹಾಗೂ ಇತರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎಂದು ತಿಳಿಸಿದರು.
ಮನೆಗಳ್ಳನ ಬಂಧನ
ಮದ್ದೂರು ಪಟ್ಟಣದ ಹೊಳೆ ಬೀದಿಯಲ್ಲಿರುವ ಎಂ.ಆರ್.ಕೆಂಪಶೆಟ್ಟಿ ಹಾಗೂ ಇವರ ಅಣ್ಣ ರಂಗಸ್ವಾಮಿ ಅವರು ಕಳೆದ 2023ರ ಡಿ.19ರಂದು ಮೈಸೂರಿಗೆ ತೆರಳಿದ್ದಾಗ ಡಿ.22ರಂದು ಮನೆಯ ಬೀಗ ಮುರಿದು ಚಿನ್ನದ ಒಡವೆ ಮತ್ತು ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಲಾಗಿತ್ತು.
ಈ ಸಂಬಂಧ 2023ರ ಡಿ.22ರಂದು ಎಂ.ಆರ್. ಕೆಂಪಶೆಟ್ಟಿ ಮತ್ತು ರಂಗಸ್ವಾಮಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಮದ್ದೂರು ಠಾಣೆಯ ಪಿಐ ಎಂ.ಶಿವಕುಮಾರ್ ಹಾಗೂ ಗ್ರಾಮಾಂತರ ವೃತ್ತದ ಸಿಪಿಐ ವೆಂಕಟೇಗೌಡ, ಪಿಎಸ್‍ಐ ಕೆ.ಮಂಜುನಾಥ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ಸದರಿ ಪತ್ತೆ ಕಾರ್ಯ ತಂಡವು ಕಳೆದ ಅ.12ರಂದು ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು ಮೇಳೆಕೋಟೆ ಗ್ರಾಮದ ಎಚ್.ಹನುಮಂತರಾಜು ಉ. ಹನುಮಂತ ಎಂಬ ಆರೋಪಿಯನ್ನು ಬಂಧಿಸಿ, 142 ಗ್ರಾಂ ತೂಕದ 10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1,300 ಗ್ರಾಂ ತೂಕದ 1.04 ಲಕ್ಷ ಮೌಲ್ಯದ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿ ಹಾರೋಹಳ್ಳಿ, ಕನಕಪುರ, ಮಾದನಾಯಕನಹಳ್ಳಿ, ತಾವರೆಕೆರೆ, ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಹೇಳಿದರು.
ಸಹಾಯವಾಣಿಗೆ 37 ಕರೆಗಳು
ಹಳೇಬೂದನೂರು ಗ್ರಾಮದ ತ್ಯಾಗರಾಜು ಎಂಬ ಯುವಕ ಬೆಟ್ಟಿಂಗ್‍ನಿಂದಾಗಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಹಾಗೂ ಸಂಘಟನೆಗಳು ನೀಡಿದ ದೂರಿನ ಮೇರೆಗೆ ಬೂದನೂರು ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ತಹಬದಿಗೆ ತರಲಾಗಿದೆ. ಅಲ್ಲದೆ ಪೊಲೀಸ್ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಗಾಂಜಾ ಮಾರಾಟ ತಡೆಯಲು ಸಹಾಯವಾಣಿ (ದೂ.ಸಂ. 08232-227100) ಪ್ರಾರಂಭ ಮಾಡಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಹಾಯವಾಣಿಯನ್ನು ನ. 9ರಿಂದ ಪ್ರಾರಂಭ ಮಾಡಲಾಗಿದೆ. ಈವರೆಗೆ 37 ಕರೆಗಳು ಬಂದಿದ್ದು ಎಫ್‍ಐಆರ್ ದಾಖಲು ಮಾಡಲಾಗಿದೆ ಎಂದು ಹೇಳಿದರು.
₹18 ಲಕ್ಷ ಮೌಲ್ಯದ 100 ಮೊಬೈಲ್ ವಶ
ಮಂಡ್ಯ: ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಹಾಗೂ ಕಾಣೆಯಾಗಿದ್ದ 100 ವಿವಿಧ ಮಾದರಿಯ ₹18 ಲಕ್ಷ ಮೌಲ್ಯದ ಮೊಬೈಲ್‍ಗಳನ್ನು ಜಿಲ್ಲಾ ಸಿಇಎನ್ ಅಪರಾಧ ಪೊಲೀಸರು ಪತ್ತೆಹಚ್ಚಿ ವಾರಸುದಾರರಿಗೆ ನೀಡಿದ್ದಾರೆ. ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿಎಸ್ಪಿ ಜಿ.ಆರ್. ಶಿವಮೂರ್ತಿ ಪಿಐ ಎಚ್.ಜಿ. ಮಂಜೇಗೌಡ ಅವರ ನೇತೃತ್ವದಲ್ಲಿ ಪಿಎಸ್‍ಐ ಬಸವರಾಜ ಚಿಂಚೋಳಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಸದರಿ ತಂಡವು ಸಿ.ಇ.ಐ.ಆರ್ (ಸೆಂಟ್ರಲ್ ಎಕ್ವಿಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್) ತಂತ್ರಾಂಶದ ಸಹಾಯದಿಂದ ಮೂರು ತಿಂಗಳ ಅವಧಿಯಲ್ಲಿ ಕಳ್ಳತನ ಹಾಗೂ ಕಾಣೆಯಾಗಿದ್ದ 100 ಮೊಬೈಲ್‍ಗಳನ್ನು ಪತ್ತೆಹಚ್ಚಿದ್ದು ಸಂಬಂಧಿಸಿದ ವಾರಸುದಾರರಿಗೆ ನೀಡಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ಒಂದು ವೇಳೆ ಮೊಬೈಲ್ ಕಳೆದುಕೊಂಡರೆ ಮೊಬೈಲ್‍ಗೆ ಸಂಬಂಧಪಟ್ಟ ದಾಖಲಾತಿ ಪೊಲೀಸ್ ದೂರಿನ ಇ-ಲಾಸ್ಟ್ ಪ್ರತಿ ಪಡೆದು www.ceir.gov.in ಲಾಗಿನ್ ಆಗಿ ದೂರನ್ನು ದಾಖಲಿಸಬಹುದು ಎಂದು ಹೇಳಿದರು.
ಚಿನ್ನಾಭರಣ ಕಳ್ಳಿಯ ಬಂಧನ
ಮದ್ದೂರು ತಾಲ್ಲೂಕು ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದ ಮನೆಯೊಂದರಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿದ್ದ ವಡ್ಡರದೊಡ್ಡಿ ಗ್ರಾಮದ ಲಕ್ಷ್ಮಮ್ಮ ಎಂಬವರನ್ನು ಕೆಸ್ತೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಅ.22ರಂದು ವಡ್ಡರದೊಡ್ಡಿ ಗ್ರಾಮದ ಎಸ್. ಅಭಿಷೇಕ್ ಎಂಬವರು ತಮ್ಮ ಮನೆಯಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದರು. ಸದರಿ ದೂರಿನ ಮೇರೆಗೆ ಕೆಸ್ತೂರು ಪೊಲೀಸ್ ಠಾಣೆಯ ಪಿಎಸ್‍ಐ ನರೇಶ್ ಕುಮಾರ್ ಅವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ನ.12ರಂದು ಆರೋಪಿ ಲಕ್ಷ್ಮಮ್ಮ ಎಂಬವರನ್ನು ಬಂಧಿಸಿ ಚಿನ್ನದ ಚೈನು ಉಂಗುರಗಳು ಓಲೆ-ಜುಮುಕಿ ಸೇರಿದಂತೆ ಒಟ್ಟು 73 ಗ್ರಾಂ ತೂಕದ ₹3.65 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.