ಮಂಡ್ಯ: ಅನರ್ಹ ಕಾರ್ಮಿಕರ ನೋಂದಣಿ ತಡೆಗಟ್ಟಲು ಮತ್ತು ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ನಿಯಂತ್ರಿಸಲು ‘ಎ.ಐ (ಕೃತಕ ಬುದ್ಧಿಮತ್ತೆ) ತಾಂತ್ರಜ್ಞಾನ’ ಅಳವಡಿಸಿದ ‘ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರ’ಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಂದಾಗಿದೆ.
ಕಾರ್ಮಿಕ ಅಧಿಕಾರಿಗಳ ವ್ಯಾಪ್ತಿಯಲ್ಲಿ ರಾಜ್ಯದಾದ್ಯಂತ ಒಟ್ಟು 43 ಸ್ಥಿರ ಮತ್ತು ಸಂಚಾರಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಈ ಯೋಜನೆಯನ್ನು ₹48 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲು ಇ–ಟೆಂಡರ್ ಕರೆಯುವ ಪ್ರಕ್ರಿಯೆ ಜಾರಿಯಲ್ಲಿದೆ.
‘ಈ ಸೇವಾ ಕೇಂದ್ರ ಸ್ಥಾಪನೆಯಿಂದ, ಕಟ್ಟಡ ಕಾರ್ಮಿಕರು ವರ್ಷದಲ್ಲಿ 90 ದಿನ ಮಾಡಿದ ಕೆಲಸದ ದಾಖಲೆ ಹಾಗೂ ಹಾಜರಾತಿ ನಿರ್ವಹಿಸಲು ಸಾಧ್ಯವಾಗುತ್ತದೆ. ತಂತ್ರಾಂಶದ ಮೂಲಕ ನೋಂದಣಿ, ನವೀಕರಣ ಹಾಗೂ ಅರ್ಜಿಗಳ ವಿಲೇವಾರಿ ನಡೆಸುವುದರಿಂದ ‘ಮಾನವ ಹಸ್ತಕ್ಷೇಪ’ ಕಡಿಮೆಯಾಗುತ್ತದೆ. ಸೇವೆ ವಿಳಂಬವಾಗುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ಮಂಡಳಿಯ ಅಧಿಕಾರಿಗಳು.
‘ಬೇರೆ ಜಿಲ್ಲೆಗಳಲ್ಲಿ ನೋಂದಣಿ ಮಾಡಿಸಿಕೊಂಡು, ಹೆಚ್ಚುವರಿ ಕಾರ್ಡ್ ಪಡೆಯುವುದನ್ನು ತಪ್ಪಿಸಬಹುದು. ಫಲಾನುಭವಿಗಳ ಅವಲಂಬಿತರ ನಿಖರ ಮಾಹಿತಿಯನ್ನು ‘ಮ್ಯಾಪಿಂಗ್’ ಮಾಡಬಹುದು. ‘ಆಧಾರ್’ ಆಧಾರಿತ ನೋಂದಣಿಯಿಂದ ನಕಲಿ ಕಾರ್ಡ್ ತಡೆಗಟ್ಟಬಹುದು ಮತ್ತು ಸೌಲಭ್ಯಗಳ ದುರ್ಬಳಕೆಗೆ ಕಡಿವಾಣ ಹಾಕಬಹುದು’ ಎಂಬುದು ಅಧಿಕಾರಿಗಳ ಪ್ರತಿಪಾದನೆ.
ಸಂಚಾರಿ ಕೇಂದ್ರ: ಕೆಲಸದ ಸ್ಥಳದಲ್ಲೇ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳಲು ಮತ್ತು ಅವರಿಗೆ ಸೇವೆಯನ್ನು ಒದಗಿಸಲು ‘ಸಂಚಾರಿ ಘಟಕ’ ಸ್ಥಾಪಿಸಲಾಗುವುದು. ಅಂದರೆ, ಜಿಲ್ಲೆಗಳಲ್ಲಿರುವ ಕಾರ್ಮಿಕ ಅಧಿಕಾರಿಗಳಿಗೆ ವಾಹನಗಳ ಸೌಲಭ್ಯ ನೀಡಲಾಗುತ್ತದೆ. ವಾಹನದಲ್ಲಿ ಚಾಲಕ, ಡೇಟಾ ಎಂಟ್ರಿ ಆಪರೇಟರ್, ಡಿ ಗ್ರೂಪ್ ಸಿಬ್ಬಂದಿ ನಿಯೋಜಿಸುವ ಉದ್ದೇಶವಿದೆ.
ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳ ದತ್ತಾಂಶ ಲಭ್ಯವಾಗುವುದರಿಂದ ಸುಂಕ ಸಂಗ್ರಹಣೆಗೆ ಸಹಕಾರಿಯಾಗಲಿದೆ ಹಾಗೂ ಮಾಲೀಕರಿಗೆ ಸುಂಕವನ್ನು ಪಾವತಿಸಲು ‘ಪೇಮೆಂಟ್ ಗೇಟ್‌ವೇ’ ಒದಗಿಸಬಹುದು.
‘ಎಲ್ಲ ಆಡಳಿತಾತ್ಮಕ ಹಾಗೂ ಸೇವಾ ಸಂಬಂಧಿತ ಪ್ರಕ್ರಿಯೆಗಳನ್ನು ನಡೆಸಲು ‘ಏಕೀಕೃತ ಡಿಜಿಟಲ್ ವ್ಯವಸ್ಥೆ’ ಅನುಷ್ಠಾನಗೊಳಿಸಿ, ಎಲ್ಲ ಸೇವಾ ಕೇಂದ್ರಗಳನ್ನು ಸಂಯೋಜಿಸಲಾಗುವುದು. ಇಲ್ಲಿ ಸ್ವ–ಸಹಾಯ ಆಧಾರಿತ ಸಂವಾದಾತ್ಮಕ ಕಿಯೋಕ್ಸ್ ಸ್ಥಾಪಿಸಲಾಗುವುದು. ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮಾದರಿಯಲ್ಲಿ ಅರ್ಜಿ ಸಲ್ಲಿಸಲು, ದಾಖಲೆ ಪರಿಶೀಲಿಸಲು, ಬಯೋಮೆಟ್ರಿಕ್ ದತ್ತಾಂಶ ಸಂಗ್ರಹಿಸಲು ಸಾಧ್ಯವಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಮಿಕರಿಗಾಗಿ ಮೊಬೈಲ್ ಆ್ಯಪ್!
ನೋಂದಣಿ ನವೀಕರಣ ಕ್ಲೈಂ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿ ಕಾರ್ಮಿಕರಿಗೆ ಅನುಕೂಲವಾಗುವಂತೆ ‘ಮೊಬೈಲ್ ಆ್ಯಪ್’ ಅಭಿವೃದ್ಧಿಪಡಿಸುವ ಉದ್ದೇಶವೂ ಯೋಜನೆಯಲ್ಲಿದೆ. ಕಾರ್ಮಿಕರು ಜಿಪಿಎಸ್ ಆಧಾರಿತ ಹಾಜರಾತಿ ಹಾಕುವ ಸೌಲಭ್ಯವೂ ಇರುತ್ತದೆ. ಈಗಾಗಲೇ ಖಾಸಗಿ ಏಜೆನ್ಸಿಗೆ ಆ್ಯಪ್ ಅಭಿವೃದ್ಧಿಪಡಿಸಲು ಕಾರ್ಮಿಕ ಕಲ್ಯಾಣ ಮಂಡಳಿ ಸೂಚಿಸಿದೆ.
ತಂತ್ರಜ್ಞಾನ ಆಧಾರಿತ ಸೇವಾ ಕೇಂದ್ರಗಳಿಂದ ಮಂಡಳಿಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು ಮತ್ತು ಸಕಾಲದಲ್ಲಿ ಅರ್ಹ ಕಾರ್ಮಿಕರಿಗೆ ಸೇವೆ ಒದಗಿಸಬಹುದು.–ಡಿ.ಭಾರತಿ, ಸಿಇಒ ಕಾರ್ಮಿಕ ಕಲ್ಯಾಣ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.