ಶ್ರೀರಂಗಪಟ್ಟಣ: ಆಷಾಢ ಮಾಸದ ಎರಡನೇ ಶುಕ್ರವಾರದ ನಿಮಿತ್ತ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಇರುವ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಹೆಚ್ಚಿನ ಭಕ್ತರು ಭೇಟಿ ನೀಡಿ ದರ್ಶನ ಪಡೆದರು.
ಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್. ಲಕ್ಷ್ಮೀಶ ಶರ್ಮಾ ಅವರ ನೇತೃತ್ವದಲ್ಲಿ ದೇವಿಗೆ ಫಲ, ಪಂಚಾಮೃತ ಮತ್ತು ಅಷ್ಟ ದ್ರವ್ಯಗಳಿಂದ ಅಭಿಷೇಕ ನಡೆಯಿತು. ಪ್ರಾತಃ ಕಾಲದಲ್ಲಿ ಪಾರಾಯಣ, ಅರ್ಚನೆ ಇತರ ವಿಧಿ, ವಿಧಾನಗಳು ಜರುಗಿದವು. ಬೆಳಿಗ್ಗೆಯಿಂದ ಸಂಜೆ ವರೆಗೂ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಸೋನೆ ಮಳೆಯಲ್ಲೂ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಗರ್ಭಗುಡಿಯನ್ನು ಕೊಬ್ಬರಿ ಹೋಳು ಮತ್ತು ಬಗೆ ಬಗೆಯ ಹೂಗಳಿಂದ ಅಲಂಕರಿಸಿದ್ದುದು ಗಮನ ಸೆಳೆಯಿತು. ಪಟ್ಟಣ ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಪಟ್ಟಣದ ಮುಖ್ಯ ಬೀದಿಯಲ್ಲಿರುವ ಮಹಾಲಕ್ಷ್ಮಿ (ಗಂಗಡಿಕಾರ್ ಒಕ್ಕಲಿಗರ ಮಾರಮ್ಮನ ಗುಡಿ) ದೇವಾಲಯ, ಕಾಳಿಕಾಂಬ ದೇವಾಲಯ, ಗಂಜಾಂನ ನಿಮಿಷಾಂಬ ದೇವಾಲಯಗಳಲ್ಲಿ ಕೂಡ ವಿಶೇಷ ಪೂಜೆಗಳು ನಡೆದವು. ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯಕ್ಕೂ ಹೆಚ್ಚಿನ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್ ಬಳಿಯ ಮಹಾಕಾಳಿ ದೇವಾಲಯದಲ್ಲಿ ದೇಗುಲದ ಪ್ರಧಾನ ಅರ್ಚಕ ಮೋಹನ ಗುರೂಜಿ ಅವರ ನೇತೃತ್ವದಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಬ್ರಾಹ್ಮೀ ಮುಹೂರ್ತದಲ್ಲಿ ಅಭಿಷೇಕ, ಅರ್ಚನೆಗಳು ನಡೆದವು. ಲೋಕ ಕಲ್ಯಾಣಾರ್ಥವಾಗಿ ಪ್ರತ್ಯಂಗೀರ ಹೋಮವನ್ನು ಏರ್ಪಡಿಸಲಾಗಿತ್ತು. ಮಂಡ್ಯ, ಮೈಸೂರು, ಬೆಂಗಳೂರು, ಇತರ ಕಡೆಗಳಿಂದಲೂ ಭಕ್ತರು ಆಗಮಿಸಿ ತೆಂಗಿನ ಕಾಯಿ, ಬೆಲ್ಲ, ಅಕ್ಕಿಯನ್ನು ಸಮರ್ಪಿಸಿದರು. ಪ್ರಸಾದ ವಿತರಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.